ಕ್ಯಾಲಿಫೋರ್ನಿಯಾ: ಮಂಗನಿಂದಲೇ ಮಾನವ ಎಂಬುದು ಈಗಾಗಲೇ ಸಾಬೀತಾಗಿರುವ ವಿಚಾರ. ಕೋತಿಗಳು ಸಾಮಾನ್ಯವಾಗಿ ಮನುಷ್ಯರ ವರ್ತನೆಯನ್ನು ಅನುಕರಿಸುತ್ತವೆ. ಕೋತಿಗಳು ಎಲ್ಲವನ್ನೂ ವೇಗವಾಗಿ ಕಲಿಯುತ್ತವೆ ಮತ್ತು ಮನುಷ್ಯರನ್ನು ಗಮನಿಸುವುದರ ಮೂಲಕ ಅನೇಕ ವಿಷಯಗಳ ಬಗ್ಗೆ ತಿಳಿದುಕೊಳ್ಳುತ್ತವೆ. ಕೋತಿ ಆಕಸ್ಮಿಕವಾಗಿ 911 ನಂಬರ್ಗೆ ಕರೆ ಮಾಡಿತ್ತು. ಆಗ ಪೊಲೀಸರು ಝೂನಿಂದ ಎಮರ್ಜೆನ್ಸಿ ನಂಬರ್ಗೆ ಫೋನ್ ಬಂದಿದೆ ಎಂದು ಝೂನತ್ತ ಓಡಿಬಂದರು. ಆಗ ಇದೆಲ್ಲ ಕೋತಿಯ ತರಲೆ ಕೆಲಸ ಎಂಬುದು ತಿಳಿದು ಪೊಲೀಸರು ಶಾಕ್ ಆಗಿದ್ದಾರೆ.
ಅಮೆರಿಕಾದ ಸ್ಯಾನ್ ಲೂಯಿಸ್ ಒಬಿಸ್ಪೊ ಕೌಂಟಿ ಶೆರಿಫ್ ಕಚೇರಿಗೆ ಕಳೆದ ಶನಿವಾರ ರಾತ್ರಿ ತುರ್ತು ಕರೆ ಬಂದಿತ್ತು. ಆ ಫೋನ್ ಕರೆಯನ್ನು ಸ್ವೀಕರಿಸುವಷ್ಟರಲ್ಲಿ ಕರೆಯ ಸಂಪರ್ಕ ಕಡಿತಗೊಂಡಿತ್ತು. ಪೊಲೀಸರು ಮತ್ತೆ ಕರೆ ಮಾಡಲು ಮತ್ತು ಸಂದೇಶ ಕಳುಹಿಸಲು ಪ್ರಯತ್ನಿಸಿದರೂ ಆ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಹೀಗಾಗಿ, ಆ ಸ್ಥಳಕ್ಕೆ ಪೊಲೀಸ್ ತಂಡವನ್ನು ಕಳುಹಿಸಲಾಗಿತ್ತು.
ಇದನ್ನೂ ಓದಿ: Viral Video: ಸ್ವಾತಂತ್ರ್ಯೋತ್ಸವದ ವೇಳೆ ನಾಗಿಣಿ ಡ್ಯಾನ್ಸ್ ಮಾಡಿದ ಪೊಲೀಸರ ವಿಡಿಯೋ ವೈರಲ್; ಆಮೇಲೇನಾಯ್ತು?
ವಿಳಾಸವು ಪಾಸೊ ರೋಬಲ್ಸ್ ಝೂ ಬಳಿ ತೋರಿಸಿತು. ಆದರೆ ಅಲ್ಲಿ ಯಾರೂ ಕರೆ ಮಾಡಲಿಲ್ಲ ಎಂದು ಅಲ್ಲಿನ ಸಿಬ್ಬಂದಿ ಹೇಳಿದರು. ಆಗ ಅಲ್ಲಿನ ಸಿಬ್ಬಂದಿ ರೂಟ್ ಎಂಬ ಹೆಸರಿನ ಕ್ಯಾಪುಚಿನ್ ಕೋತಿಯು ಗಾಲ್ಫ್ ಕಾರ್ಟ್‌ನಲ್ಲಿದ್ದ ಮೃಗಾಲಯದ ಸೆಲ್‌ಫೋನ್ ಹಿಡಿದುಕೊಂಡಿತ್ತು ಎಂಬ ವಿಷಯವನ್ನು ಹೇಳಿದರು. ಹೀಗಾಗಿ, ಆ ತುಂಟ ಕೋತಿಯೇ ಈ ಕೆಲಸ ಮಾಡಿದ್ದೆಂಬುದು ಪೊಲೀಸರಿಗೆ ಖಾತರಿಯಾಯಿತು.
ಕ್ಯಾಪುಚಿನ್ ಕೋತಿಗಳು ಬಹಳ ಚುರುಕಾಗಿರುತ್ತವೆ. ಅವು ಏನನ್ನಾದರೂ ಪಡೆದುಕೊಳ್ಳಲು ಸಿದ್ಧವಿರುತ್ತವೆ. ಆ ಕೋತಿ ತಾನೇ ಫೋನ್ ನಂಬರ್ ಡಯಲ್ ಮಾಡಲು ಪ್ರಾರಂಭಿಸಿತ್ತು ಎಂಬುದು ತನಿಖೆ ವೇಳೆ ಗೊತ್ತಾಗಿದೆ. ಇದುವರೆಗೂ ಆ ಕೋತಿ ಈ ರೀತಿಯ ಸಾಕಷ್ಟು ತರಲೆಗಳನ್ನು ಮಾಡಿದೆ ಎಂದು ಮೃಗಾಲಯದ ಸಿಬ್ಬಂದಿ ಹೇಳಿದ್ದಾರೆ.
Published On - 6:17 pm, Thu, 18 August 22