ಸಾವನ್ನಪ್ಪಿರುವ ವ್ಯಕ್ತಿ ಇದ್ದಕ್ಕಿದ್ದಂತೆ ಎದ್ದು ಬಂದರೆ ಹೇಗಿರುತ್ತದೆ? ಆ ಘಟನೆಯನ್ನು ಊಹಿಸಲು ಕೂಡ ಅಸಾಧ್ಯ. ಆದರೆ, ಸ್ಪೇನ್ನಲ್ಲಿ ಸಾವನ್ನಪ್ಪಿದ ಕೈದಿಯ ದೇಹವನ್ನು ಕತ್ತರಿಸಿ ಇನ್ನೇನು ಪೋಸ್ಟ್ಮಾರ್ಟಂ (post-mortem) ಮಾಡಬೇಕೆನ್ನುವಷ್ಟರಲ್ಲಿ ಆ ಕೈದಿ ಎದ್ದು ಕುಳಿತಿದ್ದಾನೆ. ಇದನ್ನು ನೋಡಿದ ವೈದ್ಯರೇ ಬೆಚ್ಚಿಬಿದ್ದಿದ್ದಾರೆ. ಆದರೆ, ಸಮಯಕ್ಕೆ ಸರಿಯಾಗಿ ಆ ಕೈದಿ ಬದುಕಿರುವುದು ಗೊತ್ತಾದ ಕಾರಣ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ. ಸ್ಪೇನ್ನ ವಿಲ್ಲಬೊನಾದಲ್ಲಿರುವ ಆಸ್ಟುರಿಯಾಸ್ ಸೆಂಟ್ರಲ್ ಜೈಲಿನಲ್ಲಿದ್ದ ಕೈದಿ ಸಾವನ್ನಪ್ಪಿದ್ದಾನೆ ಎಂದು ಆತನನ್ನು ಬ್ಯಾಗ್‌ನಲ್ಲಿ ತುಂಬಲಾಗಿತ್ತು. ಆತನ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವೈದ್ಯರು ಕತ್ತರಿಸಲು ಸಿದ್ಧರಾದಾಗ ಆ ವ್ಯಕ್ತಿ ಬದುಕಿರುವುದು ಗೊತ್ತಾಗಿದೆ.
ಸ್ಪೇನ್ನ ಜೈಲಿನಲ್ಲಿ ಕೈದಿಯಾಗಿದ್ದ ಗೊಂಜಾಲೊ ಮೊಂಟೊಯಾ ಜಿಮೆನೆಜ್ ಎಂಬ ವ್ಯಕ್ತಿ ಪ್ರಜ್ಞಾಹೀನನಾಗಿದ್ದ. ಆತ ಸಾವನ್ನಪ್ಪಿದ್ದಾನೆ ಎಂದು ಪೋಲೀಸ್ ಗಾರ್ಡ್‌ಗಳು ಭಾವಿಸಿದ್ದರು. ಹೀಗಾಗಿ, ಆತನ ದೇಹವನ್ನು ಬ್ಯಾಗ್‌ನಲ್ಲಿ ಹಾಕಿಕೊಂಡು, ಒವಿಡೊದಲ್ಲಿನ ಇನ್‌ಸ್ಟಿಟ್ಯೂಟ್ ಆಫ್ ಲೀಗಲ್ ಮೆಡಿಸಿನ್‌ಗೆ ಕರೆದೊಯ್ಯಲಾಯಿತು.
ಅಚ್ಚರಿಯ ರೀತಿಯಲ್ಲಿ ಆ ಕೈದಿ ಪೋಸ್ಟ್ ಮಾರ್ಟಂ ವೇಳೆ ಎದ್ದು ಕುಳಿತಿದ್ದಾನೆ ಎಂದು ಸ್ಪ್ಯಾನಿಷ್ ಜೈಲು ಸೇವೆಯ ವಕ್ತಾರರು ತಿಳಿಸಿದ್ದಾರೆ. ವೈದ್ಯರೇ ಜೈಲಿಗೆ ಭೇಟಿ ನೀಡಿ ಆ ಕೈದಿ ಸಾವನ್ನಪ್ಪಿರುವುದಾಗಿ ಘೋಷಿಸಿದ್ದರು. ಆದರೆ, ಆಸ್ಪತ್ರೆಯಲ್ಲಿ ಪೋಸ್ಟ್ ಮಾರ್ಟಂ ವೇಳೆ ಆತ ಬದುಕಿರುವುದು ಗೊತ್ತಾಗಿದೆ. ಇಬ್ಬರು ಕರ್ತವ್ಯದಲ್ಲಿರುವ ವೈದ್ಯರು ಜಿಮೆನೆಜ್ ಸತ್ತಿದ್ದಾನೆ ಎಂದು ದೃಢಪಡಿಸಿದ್ದರು. ಆದರೆ, ವಿಧಿವಿಜ್ಞಾನ ವೈದ್ಯರು ಆತ ಬದುಕಿದ್ದಾನೆ ಎಂದು ದೃಢಪಡಿಸಿದರು ಎಂದು ವಕ್ತಾರರು ತಿಳಿಸಿದ್ದಾರೆ ಎಂದು ‘ಟೈಮ್ಸ್ ನೌ’ ವರದಿ ಮಾಡಿದೆ.
ಸೈನೊಸಿಸ್‌ನಿಂದ ಬಳಲುತ್ತಿದ್ದ ಕೈದಿಯ ದೇಹದಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಆತನ ಚರ್ಮದ ಬಣ್ಣ ಬದಲಾಗಿತ್ತು ಎಂದು ವರದಿಗಳು ತಿಳಿಸಿವೆ. ಆದರೆ ಆಸ್ಪತ್ರೆಯ ಶವಾಗಾರಕ್ಕೆ ಕೊಂಡೊಯ್ದ ನಂತರ, ಆತ ಜೀವಂತವಾಗಿರುವ ವಿಷಯ ಗೊತ್ತಾಯಿತು. ಆತನ ದೇಹದ ಮೇಲೆ ವೈದ್ಯರು ಮಾರ್ಕ್ ಮಾಡಿ, ಕತ್ತರಿಸಲು ಎಲ್ಲ ಸಿದ್ಧತೆಗಳನ್ನೂ ಮಾಡಿಕೊಂಡಿದ್ದರು. ಆ ವೇಳೆ ಆತ ಬದುಕಿರುವ ವಿಷಯ ಗೊತ್ತಾಗಿದೆ.
ಇದನ್ನೂ ಓದಿ: Crime News: ಜೈಲಿನ ಅಧಿಕಾರಿಗಳ ಕೈಗೆ ಸಿಕ್ಕಿ ಬೀಳುವ ಭಯದಲ್ಲಿ ಮೊಬೈಲನ್ನೇ ನುಂಗಿದ ಕೈದಿ!
Viral Video: ಪೊಲೀಸ್ ಅಧಿಕಾರಿಯನ್ನು ಕೊಂದ ಕೈದಿಗೆ ಚುಂಬಿಸಿದ ಜಡ್ಜ್; ವಿಡಿಯೋ ವೈರಲ್
Published On - 1:12 pm, Sat, 5 February 22