ಮೆಟ್ರೋ ರೈಲಿನಲ್ಲಿ ಬಿದ್ದ ಊಟದ ಡಬ್ಬಿ, ಸ್ವಚ್ಛಗೊಳಿಸಿದ ಈ ಹುಡುಗ
Metro Delhi : ಇಂತಹ ಜವಾಬ್ದಾರಿಯುತ ಯುವಕರ ನಡೆಯೇ ನಮ್ಮ ದೇಶದ ಉಜ್ವಲ ಭವಿಷ್ಯವನ್ನು ಕಟ್ಟಿಕೊಡುತ್ತದೆ. ಪ್ರತಿಯೊಬ್ಬರಲ್ಲಿಯೂ ಇಂಥ ಪ್ರಜ್ಞೆ ಇದ್ದರೆ ದೇಶ ಸ್ವಚ್ಛವೂ ಸುಂದರವೂ ಆಗಿರುತ್ತದೆ ಎನ್ನುತ್ತಿದ್ದಾರೆ ನೆಟ್ಟಿಗರು.
Viral Video : ಮನೆಯಲ್ಲಿ ಒಂದಗಳು ನೆಲಕ್ಕೆ ಬಿದ್ದರೂ ಸ್ವಚ್ಛಗೊಳಿಸಲಾಗುತ್ತದೆ. ಹೋಟೆಲಿನಲ್ಲಿಯೂ ಸ್ವಚ್ಛ ಮಾಡುವವರು ಇರುತ್ತಾರೆ. ರಸ್ತೆಯಲ್ಲಿ ಪೌರಕಾರ್ಮಿಕರು ಇರುತ್ತಾರೆ. ಆದರೆ ಚಲಿಸುವ ಮೆಟ್ರೋದಲ್ಲಿ? ಇದೀಗ ವೈರಲ್ ಆಗಿರುವ ಈ ವಿಡಿಯೋ ಮೆಟ್ರೋ ರೈಲಿನೊಳಗಿನದು. ದೆಹಲಿಯ ಮೆಟ್ರೋ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಅಕಸ್ಮಾತ್ ಆಗಿ ಈ ಹುಡುಗನ ಬ್ಯಾಗಿನಿಂದ ಊಟದ ಡಬ್ಬಿ ಜಾರಿ ಕೆಳಗೆ ಬಿದ್ದಿದೆ. ಆಗ ಈ ಯುವಕ ತಡಮಾಡದೆ ನೆಲದ ಮೇಲೆ ಬಿದ್ದ ಆಹಾರವನ್ನು ಸ್ವಚ್ಛಗೊಳಿಸಿ ನೆಲವನ್ನ ಚೊಕ್ಕಟಗೊಳಿಸಿದ್ದಾನೆ.
ಈ ಪೋಸ್ಟ್ ಅನ್ನು ಲಿಂಕ್ಡಿನ್ನಲ್ಲಿ ಅಶು ಸಿಂಗ್ ಎನ್ನುವವರು ಹಂಚಿಕೊಂಡಿದ್ದಾರೆ. ಈ ಹುಡುಗ ತನ್ನ ಬ್ಯಾಗಿನಿಂದ ನೀರಿನ ಬಾಟಲಿಯನ್ನು ಹೊರತೆಗೆಯುತ್ತಿದ್ದಾಗ ಊಟದ ಡಬ್ಬಿ ಹೊರಬಿದ್ದಿದೆ. ನಂತರ ಬಿದ್ದ ಆಹಾರವನ್ನೆಲ್ಲ ಸ್ವಚ್ಛಗೊಳಿಸಲು ತನ್ನ ನೋಟ್ಬುಕ್ಕಿನ ಹಾಳೆಯನ್ನು ಉಪಯೋಗಿಸಿದ್ದಾನೆ. ಆಮೇಲೆ ತನ್ನ ಕರ್ಚೀಫಿನಿಂದ ನೆಲವನ್ನು ಒರೆಸಿ ಪೂರ್ತಿ ಸ್ವಚ್ಛಗೊಳಿಸಿದ್ದಾನೆ.
ಈ ತನಕ 1 ಲಕ್ಷ ಜನರು ಈ ಪೋಸ್ಟ್ ಇಷ್ಟಪಟ್ಟಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ. ಉತ್ತಮ ಶಿಕ್ಷಣಕ್ಕೆ ಇದೇ ನಿಜವಾದ ಉದಾಹರಣೆ ಎಂದಿದ್ದಾರೆ ಹಲವಾರು ಜನ. ಇಂತಹ ಜವಾಬ್ದಾರಿಯುತ ಯುವಕರ ನಡೆಯೇ ನಮ್ಮ ದೇಶದ ಉಜ್ವಲ ಭವಿಷ್ಯವನ್ನು ಕಟ್ಟಿಕೊಡುತ್ತದೆ ಎಂದಿದ್ದಾರೆ ಇನ್ನೂ ಕೆಲವರು. ಇಂಥ ಜವಾಬ್ದಾರಿಯುತ ನಡೆ ಪ್ರತಿಯೊಬ್ಬರಿಗೂ ಇದ್ದರೆ ದೇಶ ಸ್ವಚ್ಛವೂ ಸುಂದರವೂ ಆಗಿರುತ್ತದೆ ಎಂದಿದ್ದಾರೆ ಅನೇಕರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 4:24 pm, Tue, 6 December 22