ಪೀಪಿ ಶಿಕ್ಷೆ; ದಾರಿಹೋಕನ ಕಿವಿಯಲ್ಲಿ ಪೀಪಿ ಊದಿದ ಯುವಕರಿಗೆ ಪೊಲೀಸರಿಂದ ಪರತ್ ಪಾವತಿ

| Updated By: ಶ್ರೀದೇವಿ ಕಳಸದ

Updated on: Oct 07, 2022 | 12:19 PM

Punishment : ಅಲ್ಲೇ ಡ್ರಾ ಅಲ್ಲೇ ಬಹುಮಾನ ಎಂಬಂಥ ಪರಿಸ್ಥಿತಿ ಈ ಕಿಡಿಗೇಡಿ ಯುವಕರದ್ದಾಗಿದೆ. ಆಟಿಕೆ ಪೀಪಿಗಳನ್ನು ಇವರಿಂದ ವಶಪಡಿಸಿಕೊಂಡು ಮನೆಗೆ ಕಳಿಸಿದ್ದಾರೆ ಪೊಲೀಸರು. ನೋಡಿ ವೈರಲ್ ವಿಡಿಯೋ.

ಪೀಪಿ ಶಿಕ್ಷೆ; ದಾರಿಹೋಕನ ಕಿವಿಯಲ್ಲಿ ಪೀಪಿ ಊದಿದ ಯುವಕರಿಗೆ ಪೊಲೀಸರಿಂದ ಪರತ್ ಪಾವತಿ
ಆರೋಪಿಯ ಕಿವಿಯಲ್ಲಿ ಪೀಪಿ ಊದಿಸುತ್ತಿರುವ ಪೊಲೀಸ್
Follow us on

Viral Video : ಕಿಡಿಗೇಡಿತನ ಮಾಡಬೇಡಿ ಎಂದು ಚಿಕ್ಕಮಕ್ಕಳಿಗೆ ತಿಳಿಸಿ ಹೇಳಬಹುದು. ಬಯ್ದು ಹೇಳಬಹುದು ಕೊನೆಗೆ ಒಂದು ಏಟು ಕೊಟ್ಟೂ ಹೇಳಬಹುದು. ಏಕೆಂದರೆ ಮಕ್ಕಳೆಂದರೆ ಮಕ್ಕಳೇ. ಅರಿವಿಲ್ಲದೆಯೇ ಕಿಡಿಗೇಡಿತನಕ್ಕೆ ಇಳಿಯುವಂಥವು. ಆದರೆ, ಎಲ್ಲ ಅರಿವಿದ್ದೇ ಇನ್ನೊಬ್ಬರಿಗೆ ಅದರಲ್ಲೂ ಅಪರಿಚಿತರಿಗೆ ಕಿರುಕುಳ ಕೊಡುವ ‘ದೊಡ್ಡಮಕ್ಕಳಿಗೆ’ ಅರ್ಥ ಮಾಡಿಸುವುದು ಹೇಗೆ? ಪ್ರತಿಯಾಗಿ ಶಿಕ್ಷೆಯನ್ನೇ ನೀಡಬೇಕಾಗುತ್ತದೆ. ಮಧ್ಯಪ್ರದೇಶದ ಜಬಲ್​ಪುರದಲ್ಲಿ ನಡೆದ ಈ ಘಟನೆಯ ವಿಡಿಯೋ ನೋಡಿ. ಈ ಯುವಕರ ಕಿಡಿಗೇಡಿತನವನ್ನೂ ಮತ್ತು ಅದಕ್ಕೆ ತಕ್ಕಂತೆ ಜನ್ಮದಲ್ಲಿ ಇಂಥದನ್ನು ಎಂದೂ ಮಾಡಬಾರದೆಂದು ಮನವರಿಕೆಯಾಗುವಂತೆ ಪೊಲೀಸರು ನೀಡಿದ ಪೀಪಿ ಶಿಕ್ಷೆಯನ್ನೂ!

ತನ್ನ ಪಾಡಿಗೆ ತಾನು ರಸ್ತೆಯಲ್ಲಿ ಯಾರೋ ಒಬ್ಬ ನಡೆದುಕೊಂಡು ಹೋಗುತ್ತಿರುವಾಗ ಈ ಯುವಕರು ಆಟಿಕೆಯ ಪೀಪಿಯನ್ನು ಅವನ ಕಿವಿಯಲ್ಲಿ ಊದಿದ್ದಾರೆ. ಇದ್ದಕ್ಕಿದ್ದಂತೆ ಹೀಗೆ ಮಾಡಿದರೆ ಯಾರಿಗೆ ತಾನೆ ಭಯವಾಗುವುದಿಲ್ಲ? ಅಲ್ಲಿಯೇ ಇದ್ದ ಪೊಲೀಸ್​ ಇವರ ಕೃತ್ಯವನ್ನು ಗಮನಿಸಿ ರಸ್ತೆಯಲ್ಲೇ ತಡೆದಿದ್ದಾರೆ. ನಂತರ ಪೀಪಿ ಊದಿಸಿಕೊಂಡವನಿಂದಲೇ ಈ ಇಬ್ಬರೂ ಯುವಕರ ಕಿವಿಗಳು ಕಿತ್ತುಹೋಗುವಂತೆ ಎರಡೂ ಕಿವಿಯಲ್ಲಿ ಬಾರಿಬಾರಿ ಪೀಪಿ ಊದಿಸಿ ಕಂಗಾಲಾಗಿಸಿದ್ದಾರೆ. ಮತ್ತೆ ಇಂಥ ಕೃತ್ಯಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿ ಅವರಿಂದ ಆಟಿಕೆ ಪೀಪಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಘಟನೆಯನ್ನು ಎಎನ್​ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ತಮಾಷೆ ತೊಂದರೆ ಕೊಡುವುದು ಬೇರೆ. ಅದೂ ಅಪರಿಚಿತರಿಗೇ ಆಗಲಿ ಪರಿಚಿತರಿಗೇ ಆಗಲಿ. ವಿವೇಚನೆ ಬಹಳ ಮುಖ್ಯ. ಲಂಗುಲಗಾಮಿಲ್ಲದೆ ಓಡಾಡುವ ಹರೆಯದ ಮನಸ್ಸನ್ನು ಕಟ್ಟಿಹಾಕಿಕೊಳ್ಳದಿದ್ದರೆ ಹೀಗೆಲ್ಲ ಅಸಹ್ಯಗಳು ಘಟಿಸುತ್ತವೆ. ಊರೆಲ್ಲ ಇದನ್ನು ನೋಡುತ್ತದೆ.

ಮಾಡಿದ್ದುಣ್ಣೋ ಮಾರಾಯಾ ಅಂತ ಸುಮ್ಮನೇ ಹೇಳಿಲ್ಲವಲ್ಲ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:16 pm, Fri, 7 October 22