
ಈ ಕಳ್ಳರು ಕಳ್ಳತನ, ದರೋಡೆ ಮಾಡುವುದರಲ್ಲಿ ಎಷ್ಟೇ ಪ್ರವೀಣರಾಗಿದ್ದರೂ, ಅವರ ಮನದಲ್ಲಿ ಸಿಕ್ಕಿ ಹಾಕಿಕೊಂಡ್ರೆ ಏನು ಮಾಡೋದು, ಈ ಜನಗಳ ಕೈಯಿಂದ ಸರಿಯಾಗಿ ಒದೆ ಬಿದ್ರೆ ಏನ್ ಕಥೆ ಎಂಬ ಒಂದು ಸಣ್ಣ ಭಯ ಇದ್ದೇ ಇರುತ್ತದೆ. ಇದಕ್ಕಾಗಿ ಈ ಚಾಲಾಕಿ ಕಳ್ಳರು ಒಂದೊಳ್ಳೆ ಯೋಜನೆಯನ್ನು ರೂಪಿಸಿ, ನಂತರ ಕಳ್ಳತನಕ್ಕೆ ಇಳಿಯುತ್ತಾರೆ. ಹೀಗೆ ಖದೀಮರು ಕಳ್ಳತನ ಮಾಡುವ ಮುನ್ನ ಕೆಲವೊಂದು ಕೆಲಸಗಳು ನಮ್ಮನ್ನು ನಗುವಂತೆ ಮಾಡುತ್ತವೆ. ಈ ಹಿಂದೆ ಕಳ್ಳನೊಬ್ಬ ಕಳ್ಳತನಕ್ಕೂ ಮುನ್ನ ದೇವರಿಗೆ ಕೈ ಮುಗಿದು, ಹುಂಡಿ ಹಣವನ್ನೇ ಎಗರಿಸಿದ್ದ. ಇದೀಗ ಅಂತಹದ್ದೇ ವಿಡಿಯೋವೊಂದು ವೈರಲ್ ಆಗಿದ್ದು, ಖದೀಮನೊಬ್ಬ ಬೇಕರಿಯೊಂದರಲ್ಲಿ ಕಳ್ಳತನ ಮಾಡುವ ಮುನ್ನ ದೇಹವನ್ನು ಚಲನಶೀಲಗೊಳಿಸಲು ವಾರ್ಮ್ ಅಪ್ ಅಭ್ಯಾಸ ಮಾಡಿದ್ದಾನೆ. ಈ ಕುರಿತ ವಿಡಿಯೋವೊಂದು ಇದೀಗ ಸಖತ್ ವೈರಲ್ ಆಗಿದೆ.
ಈ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದ್ದು, ಇಲ್ಲಿನ ರಿಚ್ಮಂಡ್ ನಗರದ ನಾರ್ತ್ ಸ್ಟ್ರೀಟ್ ನಲ್ಲಿರುವ ಫಿಲಿಪ್ಪಾಸ್ ಎಂಬ ಬೇಕರಿಯಲ್ಲಿ ಕಳ್ಳತನ ಮಾಡುವ ಮುನ್ನ, ಕಳ್ಳನೊಬ್ಬ ದೇಹವನ್ನು ಚಲನಶೀಲಗೊಳಿಸಲು ಹಾಗೂ ಸಿಕ್ಕಿಹಾಕಿಕೊಂಡ್ರೆ ತಕ್ಷಣ ಓಡಿ ಹೋಗಲು ಸಹಾಯವಾಗುತ್ತೆ ಎಂದು ವಾರ್ಮ್ ಅಪ್, ಸ್ಟ್ರೆಚಿಂಗ್ ಮತ್ತು ಕೆಲವು ವ್ಯಾಯಾಮಗಳನ್ನು ಸಹ ಮಾಡಿ ನಂತರ ಬೇಕರಿಗೆ ನುಗ್ಗಿ ಕಳ್ಳತನ ಮಾಡಿದ್ದಾನೆ. ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಮಾರ್ಚ್ 3 ರಂದು ಬೆಳಗಿನ ಜಾವ 3 ಗಂಟೆಯ ಸುಮಾರಿಗೆ ಈ ಕಳ್ಳತನ ನಡೆದಿದೆ ಎಂದು ವರದಿಗಳು ತಿಳಿಸಿವೆ.
ಚಾಲಾಕಿ ಖದೀಮನ ವಾರ್ಮ್ ಅಪ್ ವಿಡಿಯೋವನ್ನು ಫಿಪಿಪ್ಪಾಸ್ ಬೇಕರಿ (@phillippasbakery) ತನ್ನ ಅಧೀಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಇತ್ತೀಚಿಗೆ ನಮ್ಮ ಅಂಗಡಿಯ ಸಿಸಿ ಟಿವಿ ದೃಶ್ಯಾವಳಿಗಳನ್ನು ನೋಡಿದಾಗ ಒಂದು ಬಾರಿ ನಮಗೆ ಆಶ್ಚರ್ಯವಾಯಿತು. ಈ ಕಳ್ಳನಿಗೆ ಕಳ್ಳತನ ಮಾಡುವ ಮೊದಲು ಯೋಗ ಅಭ್ಯಾಸ ಮಾಡಲೇಬೇಕೆಂದು ಕಾಣುತ್ತೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದೆ.
ವೈರಲ್ ವಿಡಿಯೋದಲ್ಲಿ ಕಳ್ಳ ಬೇಕರಿಗೆ ನುಗ್ಗುವ ಮೊದಲು, ಅಲ್ಲೇ ಹೊರ ಭಾಗದಲ್ಲಿ ನಿಂತು ಸಿಕ್ಕಿ ಹಾಕಿಕೊಂಡ್ರೆ ಓಡಿ ಹೋಗಲು ಸುಲಭ ಆಗುತ್ತೆ ಹಾಗೂ ಬೇಗ ಬೇಗ ಕಳ್ಳತನ ಮಾಡಿ ಮುಗಿಸಿಬಹುದು ಎಂದುಕೊಂಡು ವಾರ್ಮ್ ಅಪ್ ಹಾಗೂ ಕೆಲವೊಂದು ಯೋಗ ಭಂಗಿಗಳನ್ನು ಅಭ್ಯಾಸ ಮಾಡುವಂತಹ ದೃಶ್ಯವನ್ನು ಕಾಣಬಹುದು. ಹೀಗೆ ವಾರ್ಮ್ ಅಪ್ ಮಾಡಿದ ನಂತರ ಬೇಕರಿಗೆ ನುಗ್ಗಿ ಐಪ್ಯಾಡ್ ಸೇರಿದಂತೆ ಬೇಕರಿಯಲ್ಲಿನ ಕ್ರೋಸೆಂಟ್ ಬ್ರೆಡ್ ಅನ್ನು ಕಳ್ಳತನ ಮಾಡಿದ್ದಾನೆ.
ಇದನ್ನೂ ಓದಿ: ಮನೆ ಮುಂದೆ ಕಸ ಗುಡಿಸುತ್ತಿದ್ದ ಮಹಿಳೆಯ ಮೇಲೆ ಕಾರು ಹರಿದು ಸಾವು
ನಾಲ್ಕು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ ಒಂದುವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಕಳ್ಳತನ ಮಾಡಿದ ಕ್ರೋಸೆಂಟ್ ತಿನ್ನಲು ಮೊದಲೇ ದೇಹದ ಕ್ಯಾಲೋರಿ ಕಮ್ಮಿ ಮಾಡಲು ವರ್ಕ್ಔಟ್ ಮಾಡಿರಬೇಕುʼ ಎಂದು ತಮಾಷೆ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಈ ದೃಶ್ಯ ನೋಡಲು ತುಂಬಾನೇ ಹಾಸ್ಯಮಯವಾಗಿದೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೂ ಅನೇಕರು ಕಳ್ಳನ ಈ ಕೆಲಸಕ್ಕೆ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ