Mumbai: ಅನೇಕ ಸಲ ನಮ್ಮ ವಸ್ತುಗಳು ಕಳೆದುಹೋಗುತ್ತವೆ. ಅದರಲ್ಲೂ ನೆಚ್ಚಿನ ಮತ್ತು ದುಬಾರಿ ವಸ್ತುಗಳು ಕಳೆದಾಗಲಂತೂ ಆಗುವ ಸಂಕಟ ಹೇಳತೀರದು. ಆದರೆ ಅಕಸ್ಮಾತ್ ಆ ವಸ್ತುಗಳು ನಮಗೆ ಸಿಕ್ಕರೆ? ಆ ಖುಷಿಯನ್ನು ಹಂಚಿಕೊಳ್ಳದೇ ಇರಲಾಗದು. ಇದೀಗ ವೈರಲ್ ಆಗಿರುವ ಈ ಪೋಸ್ಟ್ ನೋಡಿ. ಮಹಿಳೆಯೊಬ್ಬರು ಕಳೆದುಹೋದ ಆ್ಯಪಲ್ ಪೆನ್ಸಿಲ್ (Apple Pencil) ತಮ್ಮನ್ನು ತಲುಪಿದ್ದು ಹೇಗೆ ಎಂದು ಹಂಚಿಕೊಂಡಿದ್ದಾರೆ. Xನಲ್ಲಿ ಪೋಸ್ಟ್ ಮಾಡಲಾದ ಈ ಪೋಸ್ಟ್ ಅನ್ನು ಈತನಕ 2 ಲಕ್ಷಕ್ಕಿಂತಲೂ ಹೆಚ್ಚು ಜನರು ನೋಡಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ : Viral Video: ನವರಾತ್ರಿ; ನೆಟ್ಟಿಗರನ್ನು ಮೋಡಿಗೊಳಿಸಿದ ಈ ಜೋಡಿಯ ನೃತ್ಯ
ಮುಂಬೈನಲ್ಲಿ ಇಂಟಿರೀಯರ್ ಡಿಸೈನರ್ ಆಗಿರುವ ಆಕಾಂಕ್ಷಾ ದುಗಾಡ್ ತನ್ನ ಸ್ನೇಹಿತೆಯರೊಂದಿಗೆ ಪಾಂಡಿಚೇರಿಯಲ್ಲಿ ಆರೋವಿಲ್ಲೆ ಬೀಚಿನಲ್ಲಿ ವಿಹರಿಸುತ್ತಿದ್ದ ವೇಳೆ ಆ್ಯಪಲ್ ಪೆನ್ಸಿಲ್ ಕಳೆದುಕೊಂಡರು. ಈ ಬಗ್ಗೆ ಬೇಸರವನ್ನು Xನಲ್ಲಿ ತೋಡಿಕೊಂಡರು. ನಂತರ ನಿರಾಸೆಯಿಂದ ಪ್ರವಾಸವನ್ನೂ ಮುಂದುವರಿಸಿದರು.
THIS IS UNREAL!!! pic.twitter.com/uf3oJgHhbQ
— Akansha Dugad (@AkanshaDugad) October 23, 2023
ಪ್ರವಾಸ ಮುಗಿಸಿ ಮುಂಬೈಗೆ ವಾಪಾಸಾದ ನಂತರ ಆಕಾಂಕ್ಷಾಳ ಹಾಸ್ಟೆಲ್ಗೆ ಪಾಂಡಿಚೇರಿಯಲ್ಲಿ ಭೇಟಿಯಾಗಿದ್ದ ರಕ್ಷಿತ್ ಎಂಬ ವ್ಯಕ್ತಿಯಿಂದ ಎನ್ವಲಪ್ ಬಂದಿತು. ಅದನ್ನು ಅಚ್ಚರಿಯಂದ ತೆರೆದು ನೋಡಿದಾಗ ಅದರಲ್ಲಿ ಅಪ್ಸರಾ ಪೆನ್ಸಿಲ್‌ಗಳ ಬಾಕ್ಸ್ ಇತ್ತು. ಇದೇನು ಹುಡುಗಾಟವೇ ಎಂಬಂತೆ ಅನುಮಾನದಿಂದ ಆ ಬಾಕ್ಸ್ ತೆರೆದರು. ಅಪ್ಸರಾ ಪೆನ್ಸಿಲ್ನಲ್ಲಿ ಕಳೆದುಹೋದ ಆ್ಯಪಲ್ ಪೆನ್ಸಿಲ್ ಇತ್ತು!
ಇದನ್ನೂ ಓದಿ : Viral: 90 ವರ್ಷಗಳ ನಂತರ ನ್ಯೂಯಾರ್ಕ್ ಲೈಬ್ರರಿಗೆ ಮರಳಿದ ಪುಸ್ತಕ; ಶುಲ್ಕ ಎಷ್ಟಿರಬಹುದು?
ಇದನ್ನು ನಂಬಲಾಗುತ್ತಿಲ್ಲ, ಜಗತ್ತಿನಲ್ಲಿ ದಯೆ ಇನ್ನೂ ಇದೆ ಎಂದು ಅಚ್ಚರಿಯಿಂದ ಪೋಸ್ಟ್ ಹಾಕಿದ್ದಾರೆ ಆಕಾಂಕ್ಷಾ. ಈ ಪ್ರಕರಣವನ್ನು ಕೆಲವರು ತಮಾಷೆಯಾಗಿ ನೋಡಿದ್ದಾರೆ. ನಾನಿನ್ನು ರಕ್ಷಿತ್ ಎಂಬ ಹೆಸರಿನ ಹುಡುಗರೊಂದಿಗೆ ಡೇಟಿಂಗ್ ಶುರು ಮಾಡಬೇಕು ಎಂದಿದ್ದಾರೆ ಒಬ್ಬರು. ನೀವು ಹುಡುಗಿಯ ಬದಲಾಗಿ ಹುಡುಗನಾಗಿದ್ದರೆ ಖಂಡಿತ ನಿಮಗೆ ಅಪ್ಸರಾ ಪೆನ್ಸಿಲ್ ಕೂಡ ಸಿಗುತ್ತಿರಲಿಲ್ಲ ಎಂದಿದ್ದಾರೆ ಇನ್ನೊಬ್ಬರು. ಮನುಷ್ಯರು ಮನುಷ್ಯರಾಗಿಯೇ ವರ್ತಿಸುತ್ತಾರೆ ಎನ್ನುವುದಕ್ಕೆ ಇದು ಒಳ್ಳೆಯ ಉದಾಹರಣೆ ಎಂದಿದ್ದಾರೆ ಮತ್ತೊಬ್ಬರು.
ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 11:31 am, Wed, 25 October 23