Viral : ಹಂತಹಂತವಾಗಿ ತಮ್ಮ ಮಕ್ಕಳು ಗುರಿಯನ್ನು ತಲುಪಲು ಪೋಷಕರ ಸಹಾಯ, ಪ್ರಯತ್ನ ಬಹಳ ಮುಖ್ಯ. ದುಡಿಯುವ ವರ್ಗದ ಪೋಷಕರು ಈ ವಿಷಯವಾಗಿ ಬಹಳೇ ಕಷ್ಟಪಡಬೇಕು. ಎಲ್ಲರಿಗೂ ಇರುವುದು ಇಪ್ಪತ್ನಾಲ್ಕು ತಾಸು ಗಂಟೆಯಾದರೂ ಅಷ್ಟರಲ್ಲೇ ಸಂಸಾರ ಮತ್ತು ಉದ್ಯೋಗದ ಜವಾಬ್ದಾರಿಗಳನ್ನು ಪೂರೈಸಬೇಕು, ಮಕ್ಕಳನ್ನು ಅವರವರ ಕನಸು ಗುರಿಯೆಡೆಗೆ ಕರೆದೊಯ್ಯಬೇಕು. ಈಗ ಲಿಂಕ್ಡಿನ್ ಮೂಲಕ ವೈರಲ್ ಆಗುತ್ತಿರುವ ಈ ಪೋಸ್ಟ್ ಗಮನಿಸಿ. ಉಬರ್ ಆಟೋ ಡ್ರೈವರ್ ಒಬ್ಬರು, ಆಟೋದಲ್ಲಿ ಕುಳಿತು ಮೊಬೈಲಿನಲ್ಲಿ ಏನನ್ನೋ ಕೇಳಿಸಿಕೊಳ್ಳುತ್ತಿದ್ದಾರೆ. ಹಾಗಂತ ಇವರು ಯಾವುದೋ ಪರೀಕ್ಷೆಗೆ ಸಿದ್ಧತೆ ನಡೆಸಿಲ್ಲ. ಯುಪಿಎಸ್ಸಿ ಪರೀಕ್ಷೆ ಬರೆಯಬೇಕಿರುವ ತಮ್ಮ ಮಗಳಿಗೆ ಸಹಾಯ ಮಾಡಲು ಇವರು ಹೀಗೆ ಸಿಕ್ಕ ಸಣ್ಣಪುಟ್ಟ ಸಮಯದಲ್ಲಿ ತಾವೂ ಅಧ್ಯಯನದಲ್ಲಿ ತೊಡಗಿಕೊಳ್ಳುವುದನ್ನು ರೂಢಿಸಿಕೊಂಡಿದ್ದಾರೆ.
ಜೆಪಿ ಮೋರ್ಗನ್ ಇನ್ವೆಸ್ಟ್ಮೆಂಟ್ ಬ್ಯಾಂಕಿಂಗ್ನ ವಿಶ್ಲೇಷಕ ಅಭಿಜೀತ್ ಮುಥಾ ಲಿಂಕ್ಡಿನ್ನ ತಮ್ಮ ಖಾತೆಯಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ಅಭಿಜೀತ್ ಬೆಂಗಳೂರಿನಲ್ಲಿ ಉಬರ್ ಆಟೋ ಏರಿಕುಳಿತುಕೊಳ್ಳುತ್ತಿದ್ದಂತೆ, ಯೂಟ್ಯೂಬ್ ನೋಡುತ್ತಿದ್ದ ಡ್ರೈವರ್ ರಾಕೇಶ್ ಅದನ್ನು ಸ್ಥಗಿತಗೊಳಿಸಿ ನೇವಿಗೇಷನ್ ವಿಂಡೋಗೆ ಶಿಫ್ಟ್ ಆದರು. ಸ್ವಲ್ಪ ಸಮಯದ ನಂತರ ಮರಳಿ ಯುಟ್ಯೂಬ್ ಆನ್ ಮಾಡಿದರು. ಇದೆಲ್ಲವನ್ನೂ ಗಮನಿಸುತ್ತಿದ್ದ ಅಭಿಜೀತ್ ಈ ವಿಷಯವಾಗಿ ರಾಕೇಶ್ ಅವರನ್ನು ಕೇಳಿದಾಗ, ‘ಅಣ್ಣಾ, ಈ ಚಾನೆಲ್ನಲ್ಲಿ ಅರ್ಥಶಾಸ್ತ್ರ ಮತ್ತು ಪ್ರಚಲಿತ ವಿದ್ಯಮಾನಗಳ ಬಗ್ಗೆ ಹೇಳುತ್ತಾರೆ’ ಎಂದರು.
ಆಗ ಅಭಿಜೀತ್, ‘ಯಾವುದಾದರೂ ಪರೀಕ್ಷೆಗೆ ಕಟ್ಟಿದ್ದೀರಾ?’ ಎಂದಾಗ, ‘ನಾನಲ್ಲ ನನ್ನ ಮಗಳು ಯುಪಿಎಸ್ಸಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾಳೆ. ಪ್ರತೀ ದಿನ ಲೈಬ್ರರಿಯಿಂದ ಬಂದಮೇಲೆ ನಾವು ಸ್ವಲ್ಪ ಹೊತ್ತು ಚರ್ಚೆ ಮಾಡುತ್ತೇವೆ. ಅದಕ್ಕಾಗಿ ನಾನೂ ಕೂಡ ಸಮಯ ಸಿಕ್ಕಾಗೆಲ್ಲ ವಿಷಯವನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತೇನೆ’ ಎಂದಿದ್ದಾರೆ ರಾಕೇಶ್.
ಮೂರು ದಿನಗಳ ಹಿಂದೆ ಲಿಂಕ್ಡಿನ್ನಲ್ಲಿ ಈ ಪೋಸ್ಟ್ ಹಂಚಿಕೊಂಡ ನಂತರ ಈತನಕ 1.3 ಲಕ್ಷಕ್ಕೂ ಹೆಚ್ಚು ಪ್ರತಿಕ್ರಿಯೆಗಳು, 1,600ಕ್ಕೂ ಹೆಚ್ಚು ಪ್ರತಿಕ್ರಿಯೆಗಳು ಮತ್ತು 1,800 ಮರುಹಂಚಿಕೆಗಳು ಲಭ್ಯವಾಗಿವೆ. ನೆಟ್ಟಿಗರು ಉಬರ್ ಡ್ರೈವರ್ನ ಪ್ರಯತ್ನವನ್ನು ಶ್ಲಾಘಿಸಿದ್ದಾರೆ. ಕೆಲವರು ಡ್ರೈವರ್ ಮತ್ತು ಪ್ರಯಾಣಿಕರ ಕಾಳಜಿ ಬಗ್ಗೆ ಪ್ರಶ್ನಿಸಿದ್ದಾರೆ. ಅದಕ್ಕೆ ಪ್ರತ್ಯುತ್ತರವಾಗಿ ಅಭಿಜೀತ್, ‘ಅವರು ಆಟೋ ಚಾಲನೆ ಮಾಡುತ್ತ ಈ ವಿಡಿಯೋ ನೋಡುವುದಿಲ್ಲ. ಸಿಗ್ನಲ್ನಲ್ಲಿ ಮಾತ್ರ ವಿಡಿಯೋ ಕಡೆ ಕಣ್ಣು ಹಾಯಿಸುತ್ತಾರೆ’ ಎಂದು ಸಮಜಾಯಿಷಿ ನೀಡಿದ್ದಾರೆ.
ಅದ್ಭುತ! ನಿಮ್ಮ ಮಕ್ಕಳು ಯುಪಿಎಸ್ಸಿ ತಯಾರಿ ನಡೆಸದಿದ್ದರೂ ಇಂಥ ವಾತಾವರಣ ಎಲ್ಲ ಮನೆಗಳಲ್ಲೂ ಇರಬೇಕು. ಇಂಥ ಸಂಗತಿಗಳು ಜನರ ದೃಷ್ಟಿಕೋನವನ್ನು ಬದಲಾಯಿಸುತ್ತವೆ ಎಂದಿದ್ದಾರೆ ನೆಟ್ಟಿಗರು.
ನೀವೇನಂತೀರಿ? ಪ್ರಯತ್ನವಿದ್ದರೆ ಫಲ.
ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 4:29 pm, Wed, 12 October 22