Auto Rikshaw : ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆಯ ಬಗ್ಗೆ ಅಸಂಖ್ಯ ಜೋಕುಗಳು, ಮೀಮ್‌ಗಳನ್ನು ನಾವೆಲ್ಲ ನೋಡಿಯೇ ಇದ್ದೇವೆ. ನಮ್ಮಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸಮರ್ಪಕವಾಗಿಲ್ಲ ಎನ್ನುವುದೂ ಜನಜನಿತ. ಇದಕ್ಕೆಲ್ಲ ದಿವ್ಯೌಷಧಿ ಎಂದರೆ ಮೆಟ್ರೋ! ಹೀಗೆಂದು ಸರಕಾರಗಳು ಪ್ರತಿಪಾದಿಸುತ್ತಿದ್ದರೂ ಅವುಗಳ ಕಾಮಗಾರಿಯ ವೇಗ ಆಮೆಯನ್ನೂ ನಾಚಿಸುವಂಥದ್ದು. ಎಲ್ಲ ಕಡೆ ಮೆಟ್ರೋ ಬಂದು ಹೊರಗೆ ಓಡಾಡುವುದು ಸುಲಭವಾಗುವ ಹೊತ್ತಿಗೆ ನಾವೇ ಇರುತ್ತೇವೆಯೋ ಇಲ್ಲವೋ ಎಂದೂ ಕೆಲವರು ಮಮ್ಮಲಮರಗುವುದನ್ನು ಕೇಳಿದ್ದೇವೆ.
ಮಧ್ಯಮವರ್ಗದ ಜನರಲ್ಲಿ ಅನೇಕರು ತಮ್ಮ ದಿನನಿತ್ಯದ ಸಂಚಾರಕ್ಕೆ ಕಂಡುಕೊಂಡ ಪರಿಹಾರ ಓಲಾ ಮತ್ತು ಊಬರ್. ಇವು ಒಂದಷ್ಟು ವರ್ಷ ಗ್ರಾಹಕರಿಗೆ ಅನುಕೂಲ ಹಾಗೂ ಒಳ್ಳೆಯ ಸೇವೆ, ಮತ್ತು ಚಾಲಕರಿಗೆ ಒಳ್ಳೆಯ ಉತ್ಪನ್ನ ಹಾಗೂ ಸುಧಾರಿತ ಜೀವನಶೈಲಿ ಒದಗಿಸಿದ್ದೂ ನಿಜ. ಆದರೆ ಕ್ರಮೇಣ ಕಡಿಮೆಯಾಗುತ್ತ ಬಂದ ಪ್ರೋತ್ಸಾಹಧನ ಹಾಗೂ ಈ ಕಂಪನಿಗಳ ಬದಲಾಗುತ್ತಿದ್ದ ಕಾರ್ಯನೀತಿಗಳಿಂದಾಗಿ (ಎಷ್ಟು ದಿನ ನಷ್ಟದಲ್ಲಿ ಕಂಪನಿ ನಡೆಸಲು ಸಾಧ್ಯ!), ಬೇಡಿಕೆ ಪೂರೈಕೆಗಳಲ್ಲಿ ಅಸಮತೋಲವೇರ್ಪಡುವುದು ಶುರುವಾಯಿತು. ಇದರ ಬೆನ್ನಲ್ಲೇ ಬಂದಪ್ಪಳಿಸಿದ ಕೋವಿಡ್ ಮಾರಿ ಚಾಲಕರಿಗೆ ಕಂಟಕವಾಗಿ, ಕೋವಿಡ್ ನಂತರದ ದಿನಗಳಲ್ಲಿ ಕ್ಯಾಬ್ ಮತ್ತು ಆಟೋಗಳ ಸಂಖ್ಯೆ ಕಡಿಮೆಯಾಗುವಂತಾಯಿತು.
Huge respect for him if he actually shows up. #peakbengaluru pic.twitter.com/6rQt1TswPU
— Anushank Jain (@madmax_anushank) May 16, 2023
ಇತ್ತೀಚೆಗೆ ಯಥಾಸ್ಥಿತಿ ಮರಳುತ್ತಿದ್ದರೂ ಪ್ರಯಾಣಿಕರು ಬೇಗ ಕ್ಯಾಬ್ ಸಿಗದೇ ಪರದಾಡುವುದು ಸಾಮಾನ್ಯವಾಗಿದೆ. ಜೊತೆಗೇ ದರ ಹೆಚ್ಚಾಗಿದ್ದರೂ ಅದರಲ್ಲಿ ದೊಡ್ಡ ಪಾಲು ಈ ಕಂಪನಿಗಳ ಕೋಶಕ್ಕೆ ಸೇರುತ್ತಿರುವುದರಿಂದ ಗ್ರಾಹಕರು ಹಾಗೂ ಚಾಲಕರು ಇಬ್ಬರಿಗೂ ನಷ್ಟ. ಚಾಲಕರು ಕ್ಯಾನ್ಸಲ್ ಮಾಡುವುದು, ಫೋನ್ ಮಾಡಿ ನೀವು ಕ್ಯಾನ್ಸಲ್ ಮಾಡಿ ಅಷ್ಟೇ ಹಣ ನೇರವಾಗಿ ನನಗೆ ಕೊಟ್ಟರೆ ಬರುತ್ತೇನೆ ಎನ್ನುವುದು ನಮ್ಮೆಲ್ಲರ ಅನುಭವಕ್ಕೆ ಬಂದಿರಬಹುದು.
ಇದನ್ನೂ ಓದಿ : ನಿನ್ನ ಮೇಕೆಯಮ್ಮ ಅಲ್ಲಿದ್ದಾಳೆ ನೋಡು; ಪುಟ್ಟನ ವಿಡಿಯೋ ವೈರಲ್
ಇಲ್ಲಿ ಇನ್ನೊಂದು ವಿಲಕ್ಷಣ ಘಟನೆ ನಡೆದದ್ದನ್ನು ಕಾಣಬಹುದು. ಬಹುದೂರದಲ್ಲಿದ್ದ ಊಬರ್ ಆಟೋ ಚಾಲಕ ಸವಾರಿಯನ್ನು ಯಾವ ಕಾರಣಕ್ಕೋ ಒಪ್ಪಿಕೊಂಡುಬಿಟ್ಟಿದ್ದಾನೆ. 71 ನಿಮಿಷದ ಕಾಯುವಿಕೆ! ಇದನ್ನು ಅನುಶಾಂಕ್ ಜೈನ್ ಎನ್ನುವವರು ಟ್ವೀಟ್ ಮಾಡಿದ್ದೆ ಅದು ಭಾರೀ ಸುದ್ದಿಯಾಗಿಬಿಟ್ಟಿದೆ. ‘ಈ ಚಾಲಕ ನಿಜಕ್ಕೂ ಬಂದರೆ ಅವರ ಬಗ್ಗೆ ನನಗೆ ದೊಡ್ಡ ಗೌರವವಿದೆ’ ಎಂಬ ಒಕ್ಕಣೆಯ ಟ್ವೀಟ್‌ಗೆ, ‘ಅಷ್ಟು ಹೊತ್ತು ಕಾದರೆ ನಿಮ್ಮ ಬಗ್ಗೆ ನಮಗೆ ಇನ್ನೂ ಹೆಚ್ಚು ಗೌರವ’ ಎಂದಿದ್ದಾರೆ ಒಬ್ಬರು. ಕೆಲವರು ಇದನ್ನು ‘ಮರಳಿ ಆಫೀಸಿಗೆ’ ಎಂಬ ಧೋರಣೆ ತಳೆಯುತ್ತಿರುವ ಕಂಪನಿಗಳಿಗೆ ಬುದ್ದಿಮಾತು ಹೇಳಲು ಬಳಸಿಕೊಂಡಿದ್ದಾರೆ. ‘ನಿನಗೆ ಆಟೋ ಸಿಕ್ಕಿದ್ದೇ ಹೆಚ್ಚು…’ ಎಂದು ಕೆಲವರು ವ್ಯಂಗ್ಯದಿಂದ ನುಡಿದ್ದಾರೆ. ಮುಂದೆ ಏನೂ ಆಗಿಲ್ಲ. ಡ್ರೈವರ್ ಒಂದು ನಿಮಿಷದ ನಂತರ ಕ್ಯಾನ್ಸಲ್ ಮಾಡಿದ್ದಾನೆ!
ಇದನ್ನೂ ಓದಿ : Viral Video: ಸೌಮ್ಯ ಸ್ವಭಾವದವರು ಹೀಗೆ ಘೀಳಿಡುತ್ತಾ ಕಾದಾಟಕ್ಕಿಳಿದಿದ್ದೇಕೆ?
ನಿಮಗೂ ಇಂಥ ವಿಚಿತ್ರ ಪ್ರಸಂಗಗಳು ಎದುರಾಗಿವೆಯೇ? ಬೆಂಗಳೂರಿನ ಟ್ರಾಫಿಕ್ ಮತ್ತು ಸಂಚಾರ ಸಮಸ್ಯೆಗಳ ಬಗ್ಗೆ ನಿಮ್ಮ ಮೆಚ್ಚಿನ ಜೋಕುಗಳು ಯಾವುವು? ಗಂಟೆಗಟ್ಟಲೆ ಪಯಣಿಸಬೇಕಾದರೆ ಸ್ಟ್ರೆಸ್ ಕಡಿಮೆ ಮಾಡಿಕೊಳ್ಳಲು ನೀವು ಏನು ಮಾಡುತ್ತೀರಿ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 2:20 pm, Wed, 17 May 23