ಜೈಪುರ: ಕೆಲವು ದಿನಗಳ ಹಿಂದೆ ಮುಂಬೈನಲ್ಲಿ ಮದುಮಗ ತಡವಾಗಿ ಮಂಟಪಕ್ಕೆ ಬಂದಿದ್ದಕ್ಕೆ ವಧು ಬೇರೊಬ್ಬನನ್ನು ಮದುವೆಯಾದ ಘಟನೆ ನಡೆದಿತ್ತು. ಇದೀಗ ಅದೇ ರೀತಿಯ ಘಟನೆ ರಾಜಸ್ಥಾನದಲ್ಲೂ ನಡೆದಿದೆ. ಇಲ್ಲಿನ ಚುರು ಜಿಲ್ಲೆಯ ವಧು ತನ್ನ ವರನ ಕುಡಿತದ ನೃತ್ಯದಿಂದ ಬಾರಾತ್ಗೆ (ಮದುವೆ ಮೆರವಣಿಗೆ) ತಡವಾಗಿದ್ದರಿಂದ ಕೋಪಗೊಂಡು ಆತನನ್ನು ಮದುವೆಯಾಗಲು ನಿರಾಕರಿಸಿದಳು. ರಾಜ್‌ಗಢ ತಹಸಿಲ್‌ನ ಚೇಲಾನಾ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಮೇ 15ರ ಭಾನುವಾರದಂದು ವರ ಸುನೀಲ್ ಮತ್ತು ಆತನ ಸಂಬಂಧಿಕರು ವಧುವಿನ ಗ್ರಾಮಕ್ಕೆ ಆಗಮಿಸಿದ್ದರು. ರಾತ್ರಿ 9 ಗಂಟೆಗೆ ವಧುವಿನ ಮನೆಗೆ ಬಾರಾತ್ ಹೊರಟಿತು. ಆದರೆ ವರ ಮತ್ತು ಅವನ ಸ್ನೇಹಿತರು ಕುಡಿದು ಡಿಜೆ ತಾಳಕ್ಕೆ ತಕ್ಕಂತೆ ಕುಣಿಯುವುದನ್ನು ಮುಂದುವರೆಸಿದರು. ಇದರಿಂದಾಗಿ ಮೆರವಣಿಗೆ ಸಾಗಲು ಬಹಳ ತಡವಾಯಿತು. ಮುಹೂರ್ತ ಸಮೀಪಿಸಿದರೂ ಮದುಮಗ ಮಂಟಪಕ್ಕೆ ಬರಲೇ ಇಲ್ಲ. ಕುಡಿದು ಕುಣಿದಾಡುತ್ತಿದ್ದ ವರನನ್ನು ನೋಡಿ ಅಸಮಾಧಾನಗೊಂಡ ವಧು ಆತನನ್ನು ಮದುವೆಯಾಗಲು ನಿರಾಕರಿಸಿದಳು.
ಮದುಮಗಳು ವರನನ್ನು ಮದುವೆಯಾಗಲು ಒಪ್ಪದ ಹಿನ್ನೆಲೆಯಲ್ಲಿ ಆಕೆಯ ಮನೆಯವರು ಆಕೆಯನ್ನು ಬೇರೆಯವರಿಗೆ ಕೊಟ್ಟು ಮದುವೆ ಮಾಡಲು ನಿರ್ಧರಿಸಿದ್ದರು. ಈ ಘಟನೆಯ ಒಂದು ದಿನದ ಬಳಿಕ ವರನ ಕುಟುಂಬ ವಧುವಿನ ಕುಟುಂಬದ ವಿರುದ್ಧ ದೂರು ನೀಡಲು ರಾಜ್‌ಗಢ ಪೊಲೀಸ್ ಠಾಣೆಗೆ ತೆರಳಿದೆ. ವಧುವಿನ ಕಡೆಯವರು ವರ ಮತ್ತು ಅವರ ಕುಟುಂಬದವರು ಮದುವೆಯ ಮೆರವಣಿಗೆ ಬಗ್ಗೆ ಅಸಡ್ಡೆ ಹೊಂದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಆದರೆ, ಇದು ಕೌಟುಂಬಿಕ ಸಮಸ್ಯೆಯಾದ್ದರಿಂದ ಅವರವರೇ ಬಗೆಹರಿಸಿಕೊಳ್ಳಬೇಕೆಂದು ಪೊಲೀಸರು ಸಲಹೆ ನೀಡಿ ಕಳುಹಿಸಿದ್ದಾರೆ.
ಇದನ್ನೂ ಓದಿ: ಸರಿಯಾದ ಸಮಯಕ್ಕೆ ಮಂಟಪಕ್ಕೆ ಬಾರದ ಮದುಮಗ; ಬೇರೆ ಯುವಕನೊಂದಿಗೆ ವಧುವಿನ ಮದುವೆ!
ಇತ್ತೀಚೆಗೆ ಮಹಾರಾಷ್ಟ್ರದ ಬುಲ್ಧಾನಾ ಜಿಲ್ಲೆಯಲ್ಲಿ ಮದುವೆಯಾಗಬೇಕಿದ್ದ ವಧುವಿನ ತಂದೆ ತನ್ನ ಮಗಳನ್ನು ವರನ ಬದಲಿಗೆ ಬೇರೆ ಯುವಕನಿಗೆ ಮದುವೆ ಮಾಡಿಸಿದ್ದರು. ಕುಡುಕನಾಗಿದ್ದ ವರ ಸರಿಯಾದ ಸಮಯಕ್ಕೆ ಮದುವೆ ನಡೆಯುವ ಸ್ಥಳಕ್ಕೆ ತಲುಪದ ಕಾರಣ ಅದೇ ಮದುವೆಗೆ ಬಂದಿದ್ದ ಸಂಬಂಧಿಕರೊಬ್ಬರ ಮನೆಯ ಯುವಕನೊಂದಿಗೆ ಆ ವಧುವಿಗೆ ಮದುವೆ ಮಾಡಿಸಲಾಗಿತ್ತು. ಏಪ್ರಿಲ್ 22ರಂದು ಬುಲ್ಧಾನಾ ಜಿಲ್ಲೆಯ ಮಲ್ಕಾಪುರ್ ಪಾಂಗ್ರಾ ಗ್ರಾಮದಲ್ಲಿ ವಿವಾಹ ನಡೆಯಬೇಕಿತ್ತು. ಮದುವೆಗೆ ಸಕಲ ಸಿದ್ಧತೆಗಳು ನಡೆದಿದ್ದು, ಸಂಜೆ 4 ಗಂಟೆಗೆ ಮದುವೆ ಸಮಾರಂಭಕ್ಕೆ ಶುಭ ಮುಹೂರ್ತ ಇಡಲಾಗಿತ್ತು. ವಧು ಮತ್ತು ಆಕೆಯ ಕುಟುಂಬದವರು ವರ ಮದುವೆಯ ಸ್ಥಳಕ್ಕೆ ಬರುತ್ತಾನೆ ಎಂದು ಕಾಯುತ್ತಿದ್ದರು. ಆದರೆ ಅವರು ಸಂಜೆ 8 ಗಂಟೆಯಾದರೂ ಮಂಟಪಕ್ಕೆ ಬಂದಿರಲಿಲ್ಲ. ವರ ಮತ್ತು ಆತನ ಸ್ನೇಹಿತರು ಮದುವೆ ಮಂಟಪಕ್ಕೆ ಬರುವುದನ್ನು ಬಿಟ್ಟು ಕುಣಿದು ಕುಪ್ಪಳಿಸುತ್ತಿದ್ದರು. ವರ ಮತ್ತು ಅವರ ಸ್ನೇಹಿತರು ಕುಡಿದು 4 ಗಂಟೆಗೆ ಬದಲಾಗಿ ರಾತ್ರಿ 8 ಗಂಟೆಗೆ ಮಂಟಪಕ್ಕೆ ಬಂದು ಜಗಳವಾಡಲು ಪ್ರಾರಂಭಿಸಿದರು. ಹೀಗಾಗಿ, ಆತನಿಗೆ ಮದುವೆ ಮಾಡಿಕೊಡಲು ಇಷ್ಟವಿಲ್ಲದೆ ವಧುವಿನ ಪೋಷಕರು ಆಕೆಯನ್ನು ಅದೇ ಮದುವೆಗೆ ಬಂದಿದ್ದ ಬೇರೊಬ್ಬ ಯುವಕನೊಂದಿಗೆ ಮದುವೆ ಮಾಡಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ