ವೈದ್ಯಲೋಕದಲ್ಲಿ ಕೂಡ ಸಾಕಷ್ಟು ಎಡವಟ್ಟುಗಳು ನಡೆಯುತ್ತಲೇ ಇರುತ್ತವೆ. ಆದರೆ, ವೈದ್ಯರು ತಪ್ಪು ಮಾಡಿದರೆ ಕೆಲವೊಮ್ಮೆ ಪ್ರಾಣವೇ ಹೋಗುವ ಸಾಧ್ಯತೆಗಳೂ ಇರುತ್ತವೆ. ಗುಜರಾತ್ನ ವೈದ್ಯರೊಬ್ಬರು ಹೊಟ್ಟೆ ನೋವಿನಿಂದ ಬಳಲುತ್ತಿದ್ದ ರೋಗಿಯ ಕಿಡ್ನಿಯಲ್ಲಿದ್ದ ಕಲ್ಲನ್ನು ತೆಗೆಯುವ ಬದಲು ಕಿಡ್ನಿಯನ್ನೇ ತೆಗೆದಿದ್ದರು! ಈ ವಿಚಾರ ಗೊತ್ತಾಗುತ್ತಿದ್ದಂತೆ ಕಂಗಾಲಾದ ರೋಗಿಯ ಕುಟುಂಬಸ್ಥರು ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿದ್ದರು. ವೈದ್ಯರು ಮಾಡಿದ ತಪ್ಪಿನಿಂದ ರೋಗಿ ಸಾವನ್ನಪ್ಪಿದ್ದರು. ಅದಾಗಿ 10 ವರ್ಷಗಳ ಬಳಿಕ ಇದೀಗ ಆಸ್ಪತ್ರೆ ಆ ರೋಗಿಯ ಕುಟುಂಬಸ್ಥರಿಗೆ 11.23 ಲಕ್ಷ ರೂ. ಪರಿಹಾರ ನೀಡಿದೆ.
ಮೂತ್ರಪಿಂಡದಲ್ಲಿರುವ ಕಲ್ಲನ್ನು ತೆಗೆಸಿಕೊಳ್ಳಲು ಗುಜರಾತ್ನ ಅಹಮದಾಬಾದ್ನ ಕೆಎಂಜಿ ಜನರಲ್ ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯೊಬ್ಬರ ಎಡ ಭಾಗದ ಮೂತ್ರಪಿಂಡವನ್ನೇ ತೆಗೆಯಲಾಗಿತ್ತು. ಈ ಘಟನೆ 2011ರಲ್ಲಿ ನಡೆದಿತ್ತು. ಕಿಡ್ನಿಯನ್ನು ತೆಗೆದಿದ್ದರಿಂದ ಆಪರೇಷನ್ ಆದ 4 ತಿಂಗಳಲ್ಲಿ ಆ ರೋಗಿ ಸಾವನ್ನಪ್ಪಿದ್ದರು. ಈ ಬಗ್ಗೆ ಗುಜರಾತ್ ರಾಜ್ಯದ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆ ವ್ಯಕ್ತಿಯ ಕುಟುಂಬಕ್ಕೆ 11.23 ಲಕ್ಷ ಪರಿಹಾರ ನೀಡುವಂತೆ ಇದೀಗ ಆದೇಶ ನೀಡಿದೆ.
2011ರ ಮೇ ತಿಂಗಳಲ್ಲಿ ಖೇಡಾ ಜಿಲ್ಲೆಯ ವಂಘ್ರೋಲಿ ಎಂಬ ಗ್ರಾಮದ ದೇವೇಂದ್ರಭಾಯಿ ರಾವಲ್ ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಕೆಎಂಜಿ ಜನರಲ್ ಆಸ್ಪತ್ರೆಯ ಡಾ. ಶಿವುಭಾಯಿ ಪಟೇಲ್ ಎಂಬ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಂಡಿದ್ದರು. ಆಗ ಅವರ ಎಡಭಾಗದ ಕಿಡ್ನಿಯಲ್ಲಿ ಕಲ್ಲು ಇರುವುದು ಪತ್ತೆಯಾಗಿತ್ತು. ಅವರಿಗೆ 2011ರ ಸೆಪ್ಟೆಂಬರ್ 3ರಂದು ಆಪರೇಷನ್ ಮಾಡಲಾಗಿತ್ತು. ಆದರೆ, ಆಪರೇಷನ್ ಬಳಿಕ ಆ ರೋಗಿಯ ಕಿಡ್ನಿಯಲ್ಲಿರುವ ಕಲ್ಲುಗಳ ಬದಲಾಗಿ ಕಿಡ್ನಿಯನ್ನೇ ತೆಗೆದುಹಾಕಲಾಗಿತ್ತು.
ಆಪರೇಷನ್ ಬಳಿಕ ದೇವೇಂದ್ರಭಾಯಿ ರಾವಲ್ ಅವರ ಆರೋಗ್ಯ ಇನ್ನಷ್ಟು ಹದಗೆಟ್ಟಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರೂ ಫಲಕಾರಿಯಾಗದೆ 2012ರ ಜನವರಿ 8ರಂದು ದೇವೇಂದ್ರಭಾಯಿ ಸಾವನ್ನಪ್ಪಿದ್ದರು.
ಈ ಬಗ್ಗೆ ವಿಚಾರಣೆ ಮಾಡಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ವೈದ್ಯರ ನಿರ್ಲಕ್ಷ್ಯದಿಂದಲೇ ಈ ಅಚಾತುರ್ಯ ನಡೆದಿರುವುದರಿಂದ ಆಸ್ಪತ್ರೆಯವರೇ ಈ ಕುಟುಂಬಕ್ಕೆ 11.23 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶಿಸಿದೆ. ಅಲ್ಲದೆ, 11.23 ಲಕ್ಷ ಪರಿಹಾರದ ಜತೆಗೆ 2012ರಿಂದ ಇಲ್ಲಿಯವರೆಗಿನ 7.5% ಬಡ್ಡಿಯನ್ನು ಸೇರಿಸಿ ಪರಿಹಾರ ನೀಡುವಂತೆ ಆದೇಶ ನೀಡಿದೆ.
ಇದನ್ನೂ ಓದಿ: Viral News: ಬರೋಬ್ಬರಿ 2,700 ವರ್ಷಗಳ ಹಿಂದಿನ ಐಷಾರಾಮಿ ಟಾಯ್ಲೆಟ್ ಪತ್ತೆ; ಏನಿದರ ವಿಶೇಷತೆ?
Shocking News: ಆಪರೇಷನ್ ವೇಳೆ ಅತ್ತಿದ್ದಕ್ಕೆ ಹೆಚ್ಚುವರಿ ಬಿಲ್; ಅಳೋದೂ ತಪ್ಪಾ? ಎಂದ ಮಹಿಳೆ
Published On - 7:46 pm, Tue, 19 October 21