ನಾಗ್ಪುರ: ‘ಪ್ರೀತಿ ಕುರುಡು’ ಎಂಬ ಮಾತಿದೆ. ಪ್ರೀತಿ ಯಾರ ಮೇಲೆ, ಯಾವಾಗ, ಹೇಗೆ ಹುಟ್ಟುತ್ತದೋ ಹೇಳಲು ಸಾಧ್ಯವಿಲ್ಲ. ಇದೇ ಮೊದಲ ಬಾರಿಗೆ ಮಹಾರಾಷ್ಟ್ರದ ನಾಗ್ಪುರದಲ್ಲಿ ಇಬ್ಬರು ಮಹಿಳಾ ವೈದ್ಯರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕಳೆದ ವಾರ ಉಂಗುರ ಬದಲಾಯಿಸಿಕೊಂಡಿರುವ ಈ ಸಲಿಂಗಿಗಳು ಸದ್ಯದಲ್ಲೇ ಗೋವಾದಲ್ಲಿ ಅದ್ದೂರಿಯಾಗಿ ಮದುವೆಯಾಗಲಿದ್ದಾರೆ. ಒಟ್ಟಿಗೇ ವೈದ್ಯರಾಗಿ ಕೆಲಸ ಮಾಡುತ್ತಿದ್ದ ಈ ಮಹಿಳೆಯರು ಜೀವನಪೂರ್ತಿ ಒಟ್ಟಿಗೇ ದಂಪತಿಯಾಗಿ ಬದುಕಲು ನಿರ್ಧರಿಸಿದ್ದಾರೆ. ಈ ಮೂಲಕ ಸಂಪ್ರದಾಯಕ್ಕೆ ಸೆಡ್ಡು ಹೊಡೆದಿರುವ ಈ ಮಹಿಳೆಯರಿಬ್ಬರು ಮದುವೆಯಾಗಿ ಹೊಸ ಜೀವನ ನಡೆಸಲು ಸಜ್ಜಾಗಿದ್ದಾರೆ.
ಮಹಾರಾಷ್ಟ್ರದ ಮಹಿಳಾ ವೈದ್ಯರಾದ ಪರೋಮಿತಾ ಮುಖರ್ಜಿ ಮತ್ತು ಸುರಭಿ ಮಿತ್ರ ಡಿಸೆಂಬರ್ 29ರಂದು ನಾಗ್ಪುರದ ಹೊರವಲಯದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಇಬ್ಬರು ಬೆಂಗಾಲಿ ಮಹಿಳೆಯರು ನೃತ್ಯ, ಸಂಗೀತ, ಡಿಸೈನರ್ ಡ್ರೆಸ್ ಮತ್ತು ಔತಣದೊಂದಿಗೆ ಈ ವಿಶೇಷವಾದ ದಿನವನ್ನು ಆಚರಿಸಿದರು.
“ನಾವು ಈ ಸಂಬಂಧವನ್ನು ಜೀವಮಾನದುದ್ದಕ್ಕೂ ಕಾಪಾಡಿಕೊಳ್ಳುತ್ತೇವೆ. ನಾವು ನಮ್ಮ ಮದುವೆಯನ್ನು ಗೋವಾದಲ್ಲಿ ಮಾಡಿಕೊಳ್ಳಲು ನಿರ್ಧರಿಸಿದ್ದೇವೆ” ಎಂದು ಪರೋಮಿತಾ ಮುಖರ್ಜಿ ಎಎನ್‌ಐಗೆ ತಿಳಿಸಿದ್ದಾರೆ.
ನಾನು ಪುರುಷರಿಗಿಂತಲೂ ಮಹಿಳೆಯರ ಬಗ್ಗೆಯೇ ಆಕರ್ಷಿತನಾಗಿದ್ದೆ ಎಂದು 2013ರಿಂದ ನನ್ನ ತಂದೆಗೆ ತಿಳಿದಿತ್ತು. ನಾನು ಇತ್ತೀಚೆಗೆ ನನ್ನ ತಾಯಿಗೆ ಹೇಳಿದಾಗ ಅವರು ಆಘಾತಕ್ಕೊಳಗಾದರು. ಆದರೆ ನಂತರ ಅವರಿಗೆ ನಾನು ಸಂತೋಷವಾಗಿರುವುದಏ ಮುಖ್ಯವಾಗಿದ್ದರಿಂದ ಅವರು ಒಪ್ಪಿಕೊಂಡರು ಎಂದು ಹೇಳಿದ್ದಾರೆ.
“ನನ್ನ ಲೈಂಗಿಕ ದೃಷ್ಟಿಕೋನಕ್ಕೆ ನನ್ನ ಕುಟುಂಬದಿಂದ ಯಾವುದೇ ವಿರೋಧವಿರಲಿಲ್ಲ. ವಾಸ್ತವವಾಗಿ, ನಾನು ನನ್ನ ಹೆತ್ತವರಿಗೆ ಈ ಬಗ್ಗೆ ಹೇಳಿದಾಗ ಅವರು ಸಂತೋಷಪಟ್ಟರು. ನಾನು ಮನೋವೈದ್ಯಳಾಗಿದ್ದೇನೆ. ನನ್ನ ರೀತಿ ಮನಸ್ಥಿತಿ ಹೊಂದಿರುವವರು ಅನಿವಾರ್ಯವಾಗಿ ತಮಗಿಷ್ಟವಿಲ್ಲದ ಜೀವನ ನಡೆಸುತ್ತಿರುವುದನ್ನು ನಾನು ನೋಡಿದ್ದೇನೆ. ಆದರೆ, ನನಗೆ ನನ್ನ ಮನಸಿಗೆ ವಿರುದ್ಧವಾಗಿ ಬದುಕಲು ಇಷ್ಟವಿರಲಿಲ್ಲ. ಈಗ ನಾನು ನನ್ನ ಸಂಗಾತಿಯನ್ನು ಕಂಡುಕೊಂಡಿದ್ದೇನೆ ಎಂದು ಸುರಭಿ ಮಿತ್ರ ಹೇಳಿದ್ದಾರೆ.
ಇದನ್ನೂ ಓದಿ: Viral News: ಮದುವೆಯಾಗಿ 11 ವರ್ಷ ಕಾದರೂ ಮೊದಲ ರಾತ್ರಿಗೆ ಸಿಗಲೇ ಇಲ್ಲ ಮುಹೂರ್ತ; ಆಮೇಲೇನಾಯ್ತು?
Shocking News: ಧಾರಾವಾಹಿ ತಂದ ಅವಾಂತರ; ಮಹಿಳೆಯರು ಟಿವಿ ನೋಡುತ್ತಿದ್ದಾಗ ಹಣ, ಒಡವೆ ದೋಚಿದ ಕಳ್ಳರು!