Viral Video: ಜಾಸ್ತಿ ಆಡಿದೆಯೋ ಚರ್ಮಾ ಸುಲಿದುಬಿಡ್ತೀನಿ ನೋಡು ಮತ್ತೆ! ಏನಾದರೂ ತಂಟೆ ಮಾಡಿದಾಗೆಲ್ಲ ಹೀಗೆ ಮನೆಯಲ್ಲಿ ದೊಡ್ಡವರು ಗದರುತ್ತಿದ್ದರು. ಆಗೆಲ್ಲಾ ಅದನ್ನು ಕಲ್ಪಿಸಿಕೊಂಡೇ ಬೇಡಪ್ಪಾ ಎಂದು ತೆಪ್ಪಗೆ ಇರುತ್ತಿದ್ದ ಮುಗ್ಧ ಕಾಲ ಅದಾಗಿತ್ತು. ಆದರೆ ಈಗ? ಹೀಗೇನಾದರೂ ಹೇಳಿದಿರೋ, ಈಗಿನ ಮಕ್ಕಳು ಹೇಗೆ? ಎಂದು ಗೂಗಲ್ ಸರ್ಚ್ ಎಂಜಿನ್ನಲ್ಲಿ ಹುಡುಕಿ, ಹೀಗಾ? ಎಂದು ತೋರಿಸಿಬಿಡುತ್ತಾರೆ. ಹಾಗಾಗಿ ಒಂದೊಂದು ಪದವನ್ನು ಮಾತನಾಡುವಾಗಲೂ ಬಹಳ ಹುಷಾರಾಗಿರಬೇಕು. ಇದೆಲ್ಲ ಈಗೇಕೆ ಎಂದು ಯೋಚಿಸುತ್ತಿದ್ದೀರಾ? ಹೌದು, ಈ ವಿಡಿಯೋ ನೋಡಿದರೆ ವಿಷಯದ ಬಗ್ಗೆ ನಿಮಗೊಂದು ಅಂದಾಜು ಬರುತ್ತದೆ.
ವೈರಲ್ ಆಗಿರುವ ಈ ವಿಡಿಯೋದಲ್ಲಿ ಈಕೆ ತನ್ನ ಕಾಲುಗಳನ್ನು ಟೊಮ್ಯಾಟೋನಂತೆ ಕತ್ತರಿಸಿಕೊಳ್ಳುತ್ತಾರೆ. ಬ್ರೆಡ್ನಂತೆ ಪೀಸ್ ಪೀಸ್ ಮಾಡಿಕೊಳ್ಳುತ್ತಾರೆ. ಬಾಳೆಹಣ್ಣಿನ ಸಿಪ್ಪೆ ಸುಲಿದಂತೆ ಸುಲಿದುಕೊಳ್ಳುತ್ತಾರೆ. ಜೋಳದ ತೆನೆಯಂತೆ ಸುಲಿದುಕೊಳ್ಳುತ್ತಾರೆ. ಏನೂ ಆಗುವುದೇ ಇಲ್ಲವಾ? ಈಕೆಗೆ ಯಾರು ಇಂಥ ಶಿಕ್ಷೆ ವಿಧಿಸಿದ್ದು, ಏನಾಗಿದೆ? ಎಂದು ಊಹಿಸಿಕೊಳ್ಳುತ್ತಿದ್ದೀರಾ?
ಏನೂ ಆಗಿಲ್ಲ, ಕಲೆಯ ಹುಚ್ಚು ಹಿಡಿದುಕೊಂಡಿದೆ. ಈಕೆ ಕೆನಡಾ ಮೂಲದ ಮೇಕಪ್ ಕಲಾವಿದೆ ಮಿಮಿ ಚೋಯ್ . ಭ್ರಮಾತ್ಮಕ ಚಿತ್ರಗಳನ್ನು ಚಿತ್ರಿಸುವ ಖಯಾಲಿ ಈಕೆಯದು. ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ಮಾತ್ರ ರಿಯಲಿಸ್ಟಿಕ್ ಚಿತ್ರಗಳನ್ನು ತನ್ನ ಕಾಲುಗಳ ಮೇಲೆ ಸೃಷ್ಟಿಸಿಕೊಂಡಿದ್ದಾರೆ. ಈ ಕಲೆ ಹೀಗೆ ಪಕ್ಕಾಗಿ ಕೈಹಿಡಿಯಬೇಕೆಂದರೆ ಇದರ ಹಿಂದೆ ಅದೆಷ್ಟು ಶ್ರಮವಿರಬೇಡ?
ಇವರ ಇನ್ಸ್ಟಾಗ್ರಾಂ ಪುಟದಲ್ಲಿ ಮುಖದ ಮೇಲೆ ವಿವಿಧ ರೀತಿಯ ಭ್ರಮಾತ್ಮಕ ಚಿತ್ರಗಳನ್ನು ಚಿತ್ರಿಸಿಕೊಂಡಿರುವುದನ್ನು ನೋಡಬಹುದಾಗಿದೆ. ಪ್ರಸ್ತುತ ವಿಡಿಯೋ ಅನ್ನು ಡಿಸೆಂಬರ್ 15ರಂದು ಪೋಸ್ಟ್ ಮಾಡಲಾಗಿದೆ. ಈಗಾಗಲೇ ಈ ವಿಡಿಯೋ ಅನ್ನು ಸುಮಾರು 94 ಲಕ್ಷ ಜನರು ಇಷ್ಟಪಟ್ಟಿದ್ಧಾರೆ. ಅನೇಕರು ಈ ವಿಡಿಯೋ ನೋಡಿ ಪ್ರತಿಕ್ರಿಯಿಸಿದ್ದಾರೆ.
ಈ ಕಲೆಯು ತುಂಬಾ ಪರಿಣಾಮಕಾರಿಯಾಗಿದೆ ಎಂದಿದ್ದಾರೆ ಅನೇಕರು. ಅತ್ಯಂತ ಕಲಾತ್ಮಕವಾಗಿ, ನೈಜವಾಗಿ ಚಿತ್ರಿಸಲಾಗಿದೆ ಎಂದಿದ್ಧಾರೆ ಹಲವರು. ತನ್ನ ಕಲ್ಪನಾ ಸಾಮರ್ಥ್ಯದಿಂದ ಕಲೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದಾರೆ ಎಂದಿದ್ದಾರೆ ಮತ್ತೊಬ್ಬರು. ಕಲೆ ಎಂದರೆ ಏನು? ಫೋಕಸ್. ಗಮನ ಕೊಟ್ಟರೆ ಅದು ನೀವಂದುಕೊಂಡಿದ್ದಕ್ಕಿಂತ ದೂರ ನಿಮ್ಮನ್ನು ಕೊಂಡೊಯ್ಯುತ್ತದೆ.
ಮಿಮಿ ಚೋಯ್ ಥರ ಕಾಲು ಕತ್ತರಿಸಬಿಡ್ತೀನಿ ಅಂತೀರಾ ನಿಮ್ಮ ಮಕ್ಕಳಿಗೆ ಗದರುವಾಗ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ