ಇದೂ ಒಂದು ರಾಷ್ಟ್ರೀಯ ಹೆದ್ದಾರಿಯೇ? ರಸ್ತೆಯುದ್ದಕ್ಕೂ 100 ಸ್ವಿಮ್ಮಿಂಗ್ ಪೂಲ್! ಅಚ್ಚರಿಯ ವಿಡಿಯೋ ವೈರಲ್!
ರಸ್ತೆಗಳ ಬಗ್ಗೆ ಪದೇಪದೇ ಕೊಚ್ಚಿಕೊಳ್ಳುತ್ತಿದ್ದ ಬಿಹಾರ ಸರ್ಕಾರಕ್ಕೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಡಾಂಬರ್ ಕೊಚ್ಚಿ ಹೋಗಿದ್ದೇ ಗೊತ್ತಾಗಿಲ್ವಾ? ಹೆದ್ದಾರಿಯ ದುಸ್ಥಿತಿಯ ಬಗ್ಗೆ ವಿಡಿಯೋ ಹಂಚಿಕೊಂಡ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್.
ರಸ್ತೆಗಳ ಬಗ್ಗೆ ಪದೇಪದೇ ಕೊಚ್ಚಿಕೊಳ್ಳುತ್ತಿದ್ದ ಬಿಹಾರ ಸರ್ಕಾರಕ್ಕೆ ರಸ್ತೆಯಲ್ಲಿದ್ದ ಡಾಂಬರ್ ಕೊಚ್ಚಿ ಹೋಗಿದ್ದೇ ಗೊತ್ತಾಗಿಲ್ವಾ? ಬಿಹಾರ (Bihar)ದ ಮಧುಬನಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ (National Highway) 227 ರಲ್ಲಿ ಸುಮಾರು 100 ಸ್ವಿಮ್ಮಿಂಗ್ ಪೂಲ್ ಗಾತ್ರದ ಹೊಂಡಗಳನ್ನು ತೋರಿಸುವ ವಿಡಿಯೋ (Video) ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral) ಆಗುತ್ತಿದ್ದು, ಸರ್ಕಾರದ ಹೇಳಿಕೆಯನ್ನು ನೆಟ್ಟಿಗರು ಖಂಡಿಸಲು ಆರಂಭಿಸಿದ್ದಾರೆ.
ಜಿಲ್ಲೆಯ ಬಾಸೊಪಟ್ಟಿ ಬ್ಲಾಕ್‌ನಲ್ಲಿರುವ ಕಲುವಾಹಿ ಗ್ರಾಮದಿಂದ ಉಮಗಾಂವ್ ಕ್ರಾಸಿಂಗ್‌ವರೆಗಿನ 20 ಕಿಲೋಮೀಟರ್‌ಗೂ ಹೆಚ್ಚು ವ್ಯಾಪ್ತಿಯಲ್ಲಿ ಹೆದ್ದಾರಿಯು 100 ಕ್ಕೂ ಹೆಚ್ಚು ದೊಡ್ಡ ಹೊಂಡಗಳನ್ನು ಹೊಂದಿದೆ. ಇದರ ವಿಡಿಯೋವನ್ನು ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, “90ರ ದಶಕದ ಜಂಗಲ್ ರಾಜ್‌ನಲ್ಲಿ ಬಿಹಾರದ ರಸ್ತೆಗಳ ಸ್ಥಿತಿಯನ್ನು ನೆನಪಿಸುತ್ತದೆ, ಇದು ಬಿಹಾರದ ಮಧುಬನಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 227 (ಎಲ್) ಆಗಿದೆ. ಇತ್ತೀಚೆಗೆ ನಿತೀಶ್‌ಕುಮಾರ್ ಅವರು ರಸ್ತೆ ನಿರ್ಮಾಣ ವಿಭಾಗದ ಜನರೊಂದಿಗೆ ಮಾತನಾಡುತ್ತಾ, ಬಿಹಾರದ ರಸ್ತೆಗಳ ಉತ್ತಮ ಸ್ಥಿತಿಯ ಬಗ್ಗೆ ಎಲ್ಲರಿಗೂ ತಿಳಿಸಬೇಕು ಎಂದು ಹೇಳಿದ್ದರು” ಎಂದು ಶೀರ್ಷಿಕೆ ನೀಡಿದ್ದಾರೆ.
90 के दशक के जंगलराज में बिहार में सड़कों की स्थिति की याद दिलाता यह बिहार के मधुबनी जिले का नेशनल हाईवे 227 (L) है।
अभी हाल में ही #Nitishkumar जी एक कार्यक्रम में पथ निर्माण विभाग के लोगों को बोल रहे थे कि बिहार में सड़कों की अच्छी स्थिति के बारे में उन्हें सबको बताना चाहिए। pic.twitter.com/Qp0ehEluty
— Prashant Kishor (@PrashantKishor) June 23, 2022
ಅಷ್ಟಕ್ಕೂ 2001ರಲ್ಲಿ ರಾಷ್ಟ್ರೀಯ ಹೆದ್ದಾರಿಯ ಸ್ಥಾನಮಾನ ಪಡೆದ ಈ ರಸ್ತೆಯನ್ನು ಬಿಹಾರ ಸರ್ಕಾರವೇ ನೋಡಿಕೊಳ್ಳುತ್ತದೆ ಎಂದು ಸಾರ್ವಜನಿಕರು ಹೇಳಿದ್ದಾರೆ. ಈ ರಸ್ತೆಯಲ್ಲಿ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು, ಸ್ಥಳೀಯ ಶಾಸಕರು, ಸಚಿವರು ಮತ್ತು ಮುಖ್ಯಮಂತ್ರಿಗಳು ಸೇರಿದಂತೆ ರಾಜ್ಯದ ಆಡಳಿತ ಅಧಿಕಾರಿಗಳು ಓಡಾಡಿದರೂ ಹೆದ್ದಾರಿ ದುರಸ್ತಿಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.
ಬಿಹಾರ ವಿಧಾನಸೌಧದಲ್ಲಿ ನಾವು ಮೂರು ಬಾರಿ ಈ ವಿಷಯವನ್ನು ಪ್ರಸ್ತಾಪಿಸಿದ್ದೇವೆ. ಆದರೆ ರಸ್ತೆ ನಿರ್ಮಾಣ ಇಲಾಖೆ ವಿಷಯದ ಬಗ್ಗೆ ಗಮನ ಹರಿಸಿಲ್ಲ ಎಂದು ಸ್ಥಳೀಯ ಶಾಸಕ ಅರುಣ್ ಶಂಕರ್ ಪ್ರಸಾದ್ ಹೇಳಿದ್ದಾರೆ. ಈ ರಸ್ತೆಯ ಗುತ್ತಿಗೆದಾರ ರವೀಂದ್ರಕುಮಾರ್ ಮಾತನಾಡಿ, “ಇಲಾಖೆ ನನಗೆ ಟೆಂಡರ್ ಮಂಜೂರು ಮಾಡಿದ್ದರೂ ಹಣ ಬಿಡುಗಡೆ ಮಾಡಿಲ್ಲ, ಈಗಾಗಲೇ ನಿರ್ಮಾಣ ಸಾಮಗ್ರಿಗಳ ದರ ಹೆಚ್ಚಾಗಿದೆ, ಕೂಲಿ ಕಾರ್ಮಿಕರಿಗೆ ಕೂಲಿ ಕೊಡಲು ಸಾಧ್ಯವಾಗುತ್ತಿಲ್ಲ, ಹೀಗಾಗಿ ರಸ್ತೆ ದುರಸ್ತಿ ಕಾಮಗಾರಿ ನಡೆದಿಲ್ಲ” ಎಂದಿದ್ದಾರೆ.
ಇದನ್ನೂ ಓದಿ: Viral Video: ರಸ್ತೆ ಮಧ್ಯೆ ಹೊತ್ತಿ ಉರಿದ ಎಲೆಕ್ಟ್ರಿಕ್ ಕಾರು! ಇದು ಭಾರತದಲ್ಲಿ ದಾಖಲಾದ ಮೊದಲ ಪ್ರಕರಣ
Published On - 10:58 am, Fri, 24 June 22