ಇಂದಿನ ಜೀವನ ಶೈಲಿ ಹಾಗೂ ಕುಟುಂಬ ವ್ಯವಸ್ಥೆಯೂ ಸಂಪೂರ್ಣವಾಗಿ ಬದಲಾಗಿದೆ. ನಗರ ಸೇರಿದಂತೆ ಹಳ್ಳಿ ಪ್ರದೇಶಗಳಲ್ಲಿಯೂ ಕೂಡು ಕುಟುಂಬದ ಬದಲಾಗಿ ವಿಭಕ್ತ ಕುಟುಂಬಗಳ ಸಂಖ್ಯೆಯೂ ಹೆಚ್ಚಾಗುತ್ತಿವೆ. ಅದಲ್ಲದೇ ಉದ್ಯೋಗದಲ್ಲಿರುವ ದಂಪತಿಗಳು ಒಂದೇ ಒಂದು ಮಗು ಸಾಕು ಎನ್ನುವಲ್ಲಿಗೆ ಬಂದು ತಲುಪಿದ್ದಾರೆ. ಉದ್ಯೋಗದಲ್ಲಿರುವ ದಂಪತಿಗಳಿಗೆ ಮಕ್ಕಳನ್ನು ನೋಡಿಕೊಳ್ಳಲು ಸಮಯವಿಲ್ಲ.ಅದಲ್ಲದೇ, ಒಂದು ಮಗುವನ್ನು ಸಾಕುವುದೇ ಕಷ್ಟವೆನ್ನುವಂತಾಗಿದೆ. ವೆಚ್ಚಗಳು ಹೆಚ್ಚಾಗುತ್ತಿದ್ದಂತೆ ಮಕ್ಕಳಿಗೆ ಯಾವುದೇ ಕೊರತೆಯೂ ಬಾರದಂತೆ ನೋಡಿಕೊಳ್ಳಬೇಕೆನ್ನುವ ಇಚ್ಛೆ ತಂದೆತಾಯಿಯರದ್ದು. ಹೀಗಾಗಿ ಒಂದೇ ಮಗು ಸಾಕು, ಆ ಮಗುವಿಗೆ ಒಳ್ಳೆಯ ವಿದ್ಯಾಭ್ಯಾಸವನ್ನು ಕೊಡಿಸಿ ಉತ್ತಮ ಜೀವನಕಟ್ಟಿಕೊಡಬೇಕೆಂದು ಕೊಂಡು ಫ್ಯಾಮಿಲಿ ಪ್ಲಾನಿಂಗ್ ನತ್ತ ಗಮನ ಹರಿಸುತ್ತಿದ್ದಾರೆ.
ಇದರ ನಡುವೆ ಒಂಟಿಯಾಗಿ ಬೆಳೆಯುವ ಮಗುವಿಗೆ ತನ್ನವರು ಯಾರು ಇಲ್ಲ ಎನ್ನುವ ಭಾವವೊಂದು ಮೂಡುತ್ತದೆ. ಕೆಲವು ಮಕ್ಕಳು ತಮ್ಮ ನಡವಳಿಕೆಯಲ್ಲಿ ವ್ಯಕ್ತಪಡಿಸುತ್ತಾರೆ. ಇಂತಹದೊಂದು ವಿಡಿಯೋವು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ‘ಸ್ಕೂಲ್ ನಲ್ಲಿರುವ ಎಲ್ಲರಿಗೂ ಅಕ್ಕ ತಮ್ಮ, ಅಣ್ಣ ತಂಗಿಯಿದ್ದಾರೆ ನನಗೆ ಯಾರು ಇಲ್ಲ ಎಂದು ತನ್ನ ತಂದೆ ತಾಯಿಯ ಮುಂದೆ ಅಳುತ್ತಿರುವ ಪುಟ್ಟ ಬಾಲಕಿಯೂ ವಿಡಿಯೋ ಇದಾಗಿದೆ.
ಈ ವಿಡಿಯೋವನ್ನು ಅಶೋಕ್ ಕುಮಾರ್ ಕೆಬಿ ಎನ್ನುವವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ‘ಒಂದು ಮಗು ಸಾಕು ಹೇಳುವವರ ಕಣ್ಣು ತೆರೆಸಿದ ಮಗು’ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋದಲ್ಲಿ ಶಾಲೆಯಿಂದ ಬಂದ ಪುಟ್ಟ ಹುಡುಗಿಯೂ ತನ್ನ ತಂದೆ ತಾಯಿಯ ಮುಂದೆ, ತನಗೆ ಯಾರು ಇಲ್ಲ, ತನ್ನ ಸ್ನೇಹಿತರಿಗೆ ಅಕ್ಕ ತಂಗಿ, ಅಣ್ಣ ತಮ್ಮ ಇದ್ದಾರೆ. ನನಗೆ ಮಾತ್ರ ಅಣ್ಣ ಅಕ್ಕ ತಮ್ಮ ಯಾರು ಇಲ್ಲ, ನಾನು ಒಂಟಿಯಾಗಿ ಇರುವುದಾ ಎಂದು ಪ್ರಶ್ನಿಸಿದ್ದಾಳೆ.
ಇದಕ್ಕೆ ಬಾಲಕಿಯ ತಾಯಿ ಸಮಾಧಾನ ಪಡಿಸುತ್ತ, ಯಾರು ಹೇಳಿದ್ದು ನೀನು ಒಂಟಿ ಹೇಳಿ, ನಾನು ಮತ್ತೆ ಪಪ್ಪಾ ಇಲ್ವಾ ನಿಂಗೆ ಎನ್ನುತ್ತಿದ್ದಂತೆ ಜೋರಾಗಿಅತ್ತಿದ್ದಾಳೆ. ಬಾಲಕಿಯೂ ಬಿಕ್ಕುತ್ತ ನೀವಿದ್ರಿ. ಆದರೆ ಅಪ್ಪ ಅಮ್ಮ ದೊಡ್ಡವರು, ದೊಡ್ಡವರೊಟ್ಟಿಗೆ ಆಟ ಆಡುವುದಕ್ಕೆ ಆಗುವುದಿಲ್ಲ ಎಂದಿದ್ದಾಳೆ. ಅಪ್ಪ ನಿನ್ನ ಜೊತೆಗೆ ಆಟ ಆಡುವುದಿಲ್ವ, ಮಕ್ಕಳು ಆಟ ಆಡುವುದಿಲ್ಲ ಬರೆದ್ಕೊಳ್ತಾರೆ ಎಂದು ತಾಯಿಯು ಸಮಾಧಾನ ಪಡಿಸಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು.
ನಿಂಗೆ ನಮಿಷಣ್ಣ ಇದ್ದಾನೆ ಅಲ್ವಾ ಎನ್ನುತ್ತಿದ್ದಂತೆ, ಸ್ವಂತ ಅಣ್ಣ ಅಲ್ಲ ಅಲ್ವಾ ಎಂದಿದ್ದಾಳೆ. ಸ್ವಂತ ಅಣ್ಣ ಅಂತ ಅಂದ್ಕೋ ಎಂದು ತಾಯಿ ಹೇಳುತ್ತಿದ್ದಂತೆ, ಸ್ವಂತ ಅಣ್ಣ ಅಂದ್ರೆ ನಮ್ಮ ಮನೆಯಲ್ಲಿರಬೇಕು, ಬೇರೆಯವರ ಮನೆಯಲ್ಲಿದ್ರೆ ಎಂತ ಅದು ಎಂದು ಪುಟಾಣಿಯೂ ಅಳುತ್ತಾ ಕೇಳಿದ್ದಾಳೆ. ಹಾಗಾದ್ರೆ ನಮ್ಮ ಮನೆಯಲ್ಲಿ ಕರ್ಕೊಂಡು ಬಂದು ಇಟ್ಟುಕೊಳ್ಳುವ ಎಂದು ತಾಯಿ ಹೇಳುತ್ತಿದ್ದಂತೆ ಈ ಪುಟಾಣಿಯೂ ಅವರ ಅಮ್ಮ ಎಂತ ಮಾಡೋದು ಎಂದು ಮುಗ್ದವಾಗಿ ಪ್ರಶ್ನಿಸಿದ್ದಾಳೆ.
ಇದನ್ನೂ ಓದಿ: ನಾಲ್ಕು ಇಂಚಿನ ಬಾಲದೊಂದಿಗೆ ಜನಿಸಿದ ಮಗು; ಬೆರಗಾದ ವೈದ್ಯ ಲೋಕ
ಇತ್ತ ಮಗಳನ್ನು ಸಮಾಧಾನ ಪಡಿಸುವ ನಿಟ್ಟಿನಲ್ಲಿ ತಾಯಿಯು, ಅವರ ಅಮ್ಮ ಅಪ್ಪ ಬೇರೆ ಮಗು ಮಾಡಿಕೊಳ್ತಾರೆ ನಿಂಗೆ ಇದಾದ್ರು ಅಡ್ಡಿಲ್ವಾ ಹಂಗೆ ಮಾಡುವನಾ ಎಂದು ಹೇಳುತ್ತಿರುವುದನ್ನು ಈ ವಿಡಿಯೋದ ಕೊನೆಯಲ್ಲಿ ನೋಡಬಹುದು. ಸೋಶಿಯಲ್ ಮೀಡಿಯಾದಲ್ಲಿ ಈ ತುಣುಕೊಂದು ವೈರಲ್ ಆಗುತ್ತಿದ್ದು, 2.3 ಕೆ ಯಷ್ಟು ಶೇರ್ ಮಾಡಿಕೊಳ್ಳಲಾಗಿದ್ದು ನಾನಾ ರೀತಿಯ ಕಾಮೆಂಟ್ ಗಳು ವ್ಯಕ್ತವಾಗಿವೆ.
ಈ ವಿಡಿಯೋ ನೋಡಿದ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದು, ‘ಇದು ಎಲ್ಲಾ ತಂದೆ ತಾಯಿಯರು ಕನಿಷ್ಠ ಎರಡು ಮಕ್ಕಳನ್ನು ಪಡೆಯಲೇ ಬೇಕು ಎನ್ನುವ ಪಾಠವಾಗಿದೆ’ ಎಂದಿದ್ದಾರೆ. ಮತ್ತೊಬ್ಬ ಬಳಕೆದಾರರು, ‘ಸೂಪರ್ ನಮ್ಮ ಮಗಳು ಇದೇ ರೀತಿ ಹೇಳುತ್ತಾಳೆ’ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ‘ಒಳ್ಳೆಯ ಪ್ರಶ್ನೆ ಮಗಳೇ’ ಎಂದು ಪುಟ್ಟ ಬಾಲಕಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ