Viral Video: 8ಲಕ್ಷಕ್ಕೆ ಮಾರಾಟವಾದ ಮೇಕೆ ಮಾಲೀಕನನ್ನು ತಬ್ಬಿಕೊಂಡು ಮನುಷ್ಯರಂತೆ ಕೂಗಿದ ವಿಡಿಯೋ ವೈರಲ್
8 ಲಕ್ಷಕ್ಕೆ ಮಾರಾಟವಾದ ಮೇಕೆಯೊಂದು ತನ್ನ ಮಾಲೀಕನನ್ನು ಬಿಟ್ಟಿರಲಾಗದೆ ತಬ್ಬಿಕೊಂಡು ಅಳುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. 17 ಇಂಚು ಉದ್ದ ಇರುವ ಈ ಮೇಕೆ ಸಾಕಲು ಮಾಲೀಕ ಇಬ್ಬರು ಕೆಲಸದವರನ್ನು ನೇಮಿಸಿಕೊಂಡಿದ್ದರಂತೆ.
ಮನುಷ್ಯರು ಮತ್ತು ಪ್ರಾಣಿಗಳ ನಡುವೆ ಅವಿನಾಭಾವ ಸಂಬಂಧವಿದೆ. ನಾಯಿ, ಬೆಕ್ಕು, ಎಮ್ಮೆ, ಹಸು, ಎತ್ತು, ಮೇಕೆ ಮುಂತಾದ ಪ್ರಾಣಿಗಳು ತಮ್ಮ ಮಾಲೀಕರೊಂದಿಗೆ ಬಲವಾದ ಬಂಧವನ್ನು ರೂಪಿಸುತ್ತವೆ. ಮನುಷ್ಯರಂತೆ ಮಾತನಾಡಲು ಬರುವುದಿಲ್ಲ ಎಂಬುದನ್ನೊಂದು ಬಿಟ್ಟರೆ ಮತ್ತೆಲ್ಲಾ ಭಾವನೆಗಳನ್ನು ವ್ಯಕ್ತಪಡಿಸುತ್ತವೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾನ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುತ್ತವೆ. ಇದೀಗ ಮಾಲೀಕನನ್ನು ಬಿಟ್ಟಿರಲಾಗದ ಮೇಕೆಯೊಂದು ಮಾರುಕಟ್ಟೆಯಲ್ಲಿ ಮಾಲೀಕನನ್ನು ತಬ್ಬಿಕೊಂಡು ಮನುಷ್ಯರಂತೆ ಕೂಗಿದ ವಿಡಿಯೋ ವೈರಲ್ (Video Viral) ಆಗುತ್ತಿದೆ. ಅಷ್ಟಕ್ಕೂ ಈ ಘಟನೆ ನಡೆದದ್ದ ಬಕ್ರೀದ್ (Bakrid) ಹಬ್ಬದ ಮುನ್ನಾ ದಿನದಂದು.
ಕಳೆದ ಭಾನುವಾರ (ಜುಲೈ 9) ಬಕ್ರೀದ್ ಹಬ್ಬ ನಡೆದಿದ್ದು ಗೊತ್ತೇ ಇದೆ. ಬಕ್ರೀದ್ ಹಬ್ಬದ ನಿಮಿತ್ತ ಮಾಲೀಕರು ತಮ್ಮ ಮೇಕೆಯನ್ನು ಮಾರುಕಟ್ಟೆಗೆ ತಂದು ಮಾರಾಟ ಮಾಡುವುದು ಸಾಮಾನ್ಯ. ಅದರಂತೆ ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತಿತರ ರಾಜ್ಯಗಳಿಂದ ಮೇಕೆ ಇತ್ಯಾದಿಗಳನ್ನು ತಂದು ಮಾರಾಟ ಮಾಡುವ ಮಹಾರಾಷ್ಟ್ರದ ಕೌಸರ್ ಬಾಗ್ನ ಮಾರುಕಟ್ಟೆಯಲ್ಲಿ ಮಾಲೀಕರೊಬ್ಬರು ಮೇಕೆಯೊಂದನ್ನು ಬಲಿಗಾಗಿ ಮಾರಾಟ ಮಾಡಲು ಮುಂದಾದಾಗ ಮೇಕೆಯು ಮಾಲೀಕನ್ನು ಬಿಟ್ಟು ಬರುವುದಿಲ್ಲ ಎಂದು ತಬ್ಬಿಕೊಂಡು ಜೋರಾಗಿ ಕೂಗಿದೆ.
ಮಾಲೀಕ ಆಸಿಫ್ ಎಂಬಾತ ಈ ಮೇಕೆಯನ್ನು ಮಾರಾಟ ಮಾಡಲು ಮುಂದಾಗಿದ್ದರು. ಅದರಂತೆ ವ್ಯಕ್ತಿಯೊಬ್ಬರು ಖರೀದಿಸಲು ಮುಂದೆ ಬಂದಾಗ ಈ ಘಟನೆ ನಡೆದು ನೆರೆದಿದ್ದವರ ಮನಕಲುವಂತೆ ಮಾಡಿತು. ಮೇಕೆಯನ್ನು ಎಷ್ಟೇ ಸಮಧಾನ ಮಾಡಿದರೂ ಮಾಲೀಕನ್ನು ತಬ್ಬಿಕೊಂಡು ಕೂಗುವುದನ್ನು ನಿಲ್ಲಿಸಲೇ ಇಲ್ಲ. ಮನುಷ್ಯರಂತೆ ಮೇಕೆ ಬೊಬ್ಬೆ ಹೊಡೆಯುತ್ತಾ ಅಳುತ್ತಿದ್ದುದನ್ನು ಕಂಡು ಮಾರುಕಟ್ಟೆಗೆ ಬಂದವರು ಹಾಗೂ ಪಕ್ಕದಲ್ಲಿದ್ದವರು ಬೆರಗಾದರು. ಮೇಕೆಯ ಪ್ರೀತಿಯನ್ನ ಕಂಡ ಮಾಲೀಕರು ಕೂಡ ಕಣ್ಣೀರು ಸುರಿಸಿದರು. ಪರಿಣಾಮವಾಗಿ ಮೇಕೆಯನ್ನು ಖರೀದಿದಾರನಿಗೆ ಒಪ್ಪಿಸಲು ಕಷ್ಟಕರವಾಯಿತು.
ಕಣ್ಣೀರು ಒರೆಸಿದರೂ ಅಳು ನಿಲ್ಲಿಸದ ಮೇಕೆ
ಮೇಕೆ ಅಳುತ್ತಿರುವಾಗ ಯಾರೋ ಬಂದು ಅದರ ಕಣ್ಣೀರು ಒರೆಸಿದರು. ಆದರೆ, ಮೇಕೆ ಮನುಷ್ಯನಂತೆ ಅಳುತ್ತಲೇ ಇತ್ತು. ಸ್ವಲ್ಪ ಸಮಯದ ನಂತರ ಮಾಲೀಕರು ಹಣವನ್ನು ತೆಗೆದುಕೊಂಡು ಭಾರವಾದ ಹೃದಯದಿಂದ ಹೊರಟರು. ಈ ಘಟನೆಯು ಮಾರುಕಟ್ಟೆಯಲ್ಲಿದ್ದವರೆಲ್ಲರ ಮನಸ್ಸನ್ನು ಕಲಕಿತು. ಇದರ ವಿಡಿಯೋ ವೈರಲ್ ಆಗುತ್ತಿದ್ದು, ನೆಟ್ಟಿಗರೂ ವಿಡಿಯೋ ನೋಡಿ ತಬ್ಬಿಬ್ಬಾಗಿದ್ದಾರೆ. ವಿಡಿಯೋಗೆ ಲೈಕ್ಗಳು ಮತ್ತು ಕಾಮೆಂಟ್ಗಳ ಮಹಾಪೂರವೇ ಹರಿದುಬರುತ್ತಿದೆ.
8 ಲಕ್ಷಕ್ಕೆ ಮಾರಾಟವಾಗಿದ್ದ ಮೇಕೆ
ಮಾಲೀಕನನ್ನು ಬಿಟ್ಟಿರಲಾಗದ ಮೇಕೆ ಸಾಮಾನ್ಯವಾದ ಮೇಕೆ ಅಲ್ಲ, ಬರೋಬ್ಬರಿ 170 ಕೆ.ಜಿ. ತೂಕ ಇರುವ ಈ ಮೇಕೆ 16-17 ಇಂಚು ಉದ್ದ ಇದೆ. ಈ ಮೇಕೆಯನ್ನು ಸಾಕಲು ಆಸಿಫ್ ಇಬ್ಬರು ಕೆಲಸದವನ್ನು ನೇಮಿಸಿಕೊಂಡಿದ್ದಾರೆ. ಇಂತಹ ಮೇಕೆಯನ್ನು ಮಾರುಕಟ್ಟೆಯಲ್ಲಿ 8 ಲಕ್ಷ ರೂಪಾಯಿ ಕೊಟ್ಟು ಖರೀದಿಸಲು ಮುಂದಾಗಿದ್ದರು.