
ನವದೆಹಲಿ: ಭಾರತೀಯ ಸೇನಾ (Indian Army) ಸಿಬ್ಬಂದಿ ಗಡಿ ಕಾಯುವುದು ಮಾತ್ರವಲ್ಲದೆ ಕಷ್ಟದ ಸಮಯ ಬಂದಾಗ ಜನರಿಗೆ ನೆರವಾದ ಅನೇಕ ಘಟನೆಗಳು ಆಗಾಗ ನಡೆಯುತ್ತಿರುತ್ತವೆ. ಜನರ ಸುರಕ್ಷತೆ ಮತ್ತು ಭದ್ರತೆಗೆ ಸದಾ ಆದ್ಯತೆ ನೀಡುವ ಭಾರತೀಯ ಸೇನೆಯ ಸಿಬ್ಬಂದಿ ಸುರೇಂದ್ರನಗರದ ಧ್ರಂಗಾಧ್ರ ತಾಲೂಕಿನ ದುದಾಪುರ ಗ್ರಾಮದಲ್ಲಿ ಬೋರ್ವೆಲ್ನಿಂದ 18 ತಿಂಗಳ ಮಗುವನ್ನು ರಕ್ಷಿಸಿದ್ದಾರೆ. ಮಂಗಳವಾರ ತಡರಾತ್ರಿ ಮಗು ಬೋರ್ವೆಲ್ಗೆ ಬಿದ್ದಿತ್ತು.
ಇದಾದ ನಂತರ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಧ್ರಂಗಧ್ರ ಶಿವಂ ವರ್ಮಾ ಅವರು ಪ್ರದೇಶದ ಮಿಲಿಟರಿ ಠಾಣೆಗೆ ಕರೆ ಮಾಡಿ, ಶಿವಂ ಎಂಬ ಮಗುವನ್ನು ರಕ್ಷಿಸುವಂತೆ ಮನವಿ ಮಾಡಿದರು. ಬೋರ್ವೆಲ್ನಿಂದ 18 ತಿಂಗಳ ಮಗುವನ್ನು ರಕ್ಷಿಸಿದ ಸೇನೆಯ ಕ್ಯಾಪ್ಟನ್ ಸೌರವ್ ನೇತೃತ್ವದ ಗೋಲ್ಡನ್ ಕಟಾರ್ ಗನ್ನರ್ಸ್, 10 ನಿಮಿಷಗಳಲ್ಲಿ ಮನಿಲಾ ರೋಪ್, ಸರ್ಚ್ಲೈಟ್ಗಳು, ಸುರಕ್ಷತಾ ಸರಂಜಾಮು ಮತ್ತು ಕ್ಯಾರಬೈನರ್ನಂತಹ ಅಗತ್ಯ ಉಪಕರಣಗಳೊಂದಿಗೆ ಲಘು ವಾಹನದಲ್ಲಿ ಸ್ಥಳಕ್ಕೆ ಧಾವಿಸಿದರು.
ನೆಲಮಟ್ಟದಿಂದ ಸುಮಾರು 20ರಿಂದ 25 ಅಡಿಗಳಷ್ಟು ಕೆಳಗೆ ಸಿಲುಕಿಕೊಂಡಿದ್ದ ಶಿವಂ ಎಂಬ ಮಗುವನ್ನು ತಂಡವು ನಿಧಾನವಾಗಿ ಮೇಲಕ್ಕೆ ಎಳೆದಿದೆ. ಮಗುವನ್ನು ನಿಧಾನವಾಗಿ ಬೋರ್ವೆಲ್ನಿಂದ ರಕ್ಷಿಸಲಾಯಿತು ಎಂದು ರಕ್ಷಣಾ ಸಚಿವಾಲಯ ಟ್ವಿಟರ್ನಲ್ಲಿ ಮಾಹಿತಿ ನೀಡಿದೆ. ರಕ್ಷಣಾ ಕಾರ್ಯಾಚರಣೆಯ ವಿಡಿಯೋವನ್ನೂ ಕೂಡ ಸಚಿವಾಲಯ ಹಂಚಿಕೊಂಡಿದೆ.
ಇದನ್ನೂ ಓದಿ: Viral Video: ಕ್ಲಾಸ್ರೂಂನಲ್ಲೇ ಮಲಗಿ ಗೊರಕೆ ಹೊಡೆಯುತ್ತಿದ್ದ ಟೀಚರ್ಗೆ ಗಾಳಿ ಬೀಸಿದ ವಿದ್ಯಾರ್ಥಿ; ವಿಡಿಯೋ ವೈರಲ್
ಪ್ರಥಮ ಚಿಕಿತ್ಸೆಗಾಗಿ ಧ್ರಂಗಾಧ್ರದ ಹತ್ತಿರದ ಆಸ್ಪತ್ರೆಗೆ ಮಗುವನ್ನು ಧಾವಿಸಲಾಗಿದ್ದು, ಮಗು ಪ್ರಾಣಾಪಾಯದಿಂದ ಪಾರಾಗಿದೆ. 15 ದಿನಗಳ ಹಿಂದೆ ಪಂಜಾಬ್ನ ಹೋಶಿಯಾರ್ಪುರ ಜಿಲ್ಲೆಯಲ್ಲಿ ಇದೇ ರೀತಿಯ ಘಟನೆ ವರದಿಯಾಗಿದ್ದು, 6 ವರ್ಷದ ಹೃತಿಕ್ ರೋಷನ್ 300 ಅಡಿ ಆಳದ ಬೋರ್ವೆಲ್ಗೆ ಬಿದ್ದಿದ್ದ. 8 ಗಂಟೆಗಳ ಹೋರಾಟದ ನಂತರ ಅವನನ್ನು ರಕ್ಷಿಸಲಾಗಿದ್ದು, ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆತ ಕೊನೆಯುಸಿರೆಳೆದಿದ್ದ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:05 pm, Thu, 9 June 22