ವಿಯೆಟ್ನಾಂ ವಿಮಾನ ನಿಲ್ದಾಣದಲ್ಲಿ ನೆಲದ ಮೇಲೆಯೇ ಕುಳಿತು ಊಟ ಮಾಡಿದ ಭಾರತೀಯ ಪ್ರವಾಸಿಗರು: ವಿಡಿಯೋ ವೈರಲ್​​

ವಿಯೆಟ್ನಾಂ ವಿಮಾನ ನಿಲ್ದಾಣದ ನೆಲದ ಮೇಲೆಯೇ ಕುಳಿತು ಊಟ ಮಾಡಿದ ಭಾರತೀಯ ಪ್ರವಾಸಿಗರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಉದ್ಯಮಿ ಹರ್ಷ್ ಗೋಯೆಂಕಾ ನಾಗರಿಕ ಪ್ರಜ್ಞೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತಹ ಪ್ರವಾಸಿಗರನ್ನು ಗುರುತಿಸಿ ಅವರ ಪಾಸ್‌ಪೋರ್ಟ್‌ಗಳನ್ನು ರದ್ದುಗೊಳಿಸಬೇಕು ಎಂಬ ಅಭಿಪ್ರಾಯಗಳು ಸಹ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿವೆ.

ವಿಯೆಟ್ನಾಂ ವಿಮಾನ ನಿಲ್ದಾಣದಲ್ಲಿ ನೆಲದ ಮೇಲೆಯೇ ಕುಳಿತು ಊಟ ಮಾಡಿದ ಭಾರತೀಯ ಪ್ರವಾಸಿಗರು: ವಿಡಿಯೋ ವೈರಲ್​​
ವಿಯೆಟ್ನಾಂ ವಿಮಾನ ನಿಲ್ದಾಣದಲ್ಲಿ ನೆಲದ ಮೇಲೆಯೇ ಕುಳಿತು ಊಟ ಮಾಡಿದ ಭಾರತೀಯ ಪ್ರವಾಸಿಗರು

Updated on: Nov 09, 2026 | 7:35 AM

ವಿಯೆಟ್ನಾಂ, ನವೆಂಬರ್​​ 09: ಭಾರತೀಯ ಪ್ರವಾಸಿಗರ ಗುಂಪೊಂದು ವಿಯೆಟ್ನಾಂನ ವಿಮಾನ ನಿಲ್ದಾಣವೊಂದರಲ್ಲಿ ನೆಲದ ಮೇಲೆಯೇ ಕುಳಿತು ಊಟ ಮಾಡುವ ಮೂಲಕ ಸಾರ್ವಜನಿಕರ ಗಮನ ಸೆಳೆದಿದೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ, ಭಾರತೀಯ ಪ್ರವಾಸಿಗರ ಗುಂಪೊಂದು ವಿಮಾನ ನಿಲ್ದಾಣದ ನೆಲದ ಮೇಲೆ ಕುಳಿತುಕೊಂಡು ಸುತ್ತಲೂ ಆಹಾರ ಪದಾರ್ಥಗಳನ್ನು ಹರಡಿಕೊಂಡು ಊಟ ಮಾಡುತ್ತಿರುವುದು ಕಂಡುಬಂದಿದೆ. ವಿದೇಶದ ವಿಮಾನ ನಿಲ್ದಾಣದಲ್ಲಿ ಸಾರ್ವಜನಿಕ ಸ್ಥಳಗಳನ್ನು ಇಷ್ಟೊಂದು ನಿರ್ಲಕ್ಷ್ಯದಿಂದ ಬಳಸುತ್ತಿರುವುದಕ್ಕೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಉದ್ಯಮಿ ಹರ್ಷ್ ಗೋಯೆಂಕಾ ಆಕ್ರೋಶ

ಭಾರತೀಯ ಪ್ರವಾಸಿಗರ ನಾಗರಿಕ ಪ್ರಜ್ಞೆಯ ಬಗ್ಗೆ ಉದ್ಯಮಿ ಹರ್ಷ್ ಗೋಯೆಂಕಾ ಪ್ರಶ್ನೆ ಎತ್ತಿದ್ದಾರೆ. ಈ ವಿಡಿಯೋಗೆ ಪ್ರತಿಕ್ರಿಯಿಸಿರುವ ಗೋಯೆಂಕಾ, ತಮ್ಮ ಎಕ್ಸ್ ಖಾತೆಯಲ್ಲಿ ಅದನ್ನು ಹಂಚಿಕೊಂಡಿದ್ದಾರೆ. ವಿಯೆಟ್ನಾಂ ಇತ್ತೀಚಿನ ದಿನಗಳಲ್ಲಿ ಭಾರತೀಯ ಪ್ರವಾಸಿಗರ ನೆಚ್ಚಿನ ಪ್ರವಾಸಿ ತಾಣವಾಗಿ ಬೆಳೆಯುತ್ತಿದೆ. ಆದರೆ, ಇಂತಹ ಘಟನೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಪ್ರವಾಸಿಗರ ಬಗ್ಗೆ ಇರುವ ಅಭಿಪ್ರಾಯದ ಮೇಲೆ ಪರಿಣಾಮ ಬೀರಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಪಿಕ್ನಿಕ್ ಸ್ಥಳದಂತೆ ಪರಿಗಣಿಸಿರುವ ಪ್ರವಾಸಿಗರ ವರ್ತನೆಯನ್ನು ಉದ್ಯಮಿ ಟೀಕಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡುವುದು ಮತ್ತು ನಾಗರಿಕ ಶಿಷ್ಟಾಚಾರ ಪಾಲಿಸುವುದು ಮೂಲಭೂತ ಜವಾಬ್ದಾರಿಯಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ನದಿಯಲ್ಲಿ ಈಜಾಡುತ್ತಿದ್ದ ಕೇರ್ ಟೇಕರ್‌ನನ್ನು ಅಟ್ಟಾಡಿಸಿಕೊಂಡು ಹೋದ ಮರಿಯಾನೆ

ಸಾರ್ವಜನಿಕ ಸ್ಥಳಗಳಲ್ಲಿ ಆಹಾರವನ್ನು ಹರಡಿಕೊಂಡು, ಕಸ ಎಸೆಯುವ ಪ್ರವೃತ್ತಿಯನ್ನೂ ಅವರು ಖಂಡಿಸಿದ್ದಾರೆ. ವಿದೇಶಗಳಿಗೆ ಪ್ರಯಾಣಿಸುವಾಗ ಜವಾಬ್ದಾರಿಯುತವಾಗಿ ವರ್ತಿಸುವುದನ್ನು ಭಾರತೀಯರು ಯಾವಾಗ ಕಲಿಯುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಸಾರ್ವಜನಿಕ ಸ್ಥಳಗಳನ್ನು ನಿರ್ಲಕ್ಷಿಸಿ, ಸ್ವಚ್ಛತೆಯ ಮೂಲಭೂತ ನಿಯಮಗಳನ್ನು ಪಾಲಿಸದ ಪ್ರವಾಸಿಗರ ಗುಂಪಿನ ವಿರುದ್ಧ ಇನ್ನೂ ಅನೇಕರು ಟೀಕೆ ವ್ಯಕ್ತಪಡಿಸಿದ್ದಾರೆ. ಇಂತಹ ಪ್ರವಾಸಿಗರನ್ನು ಗುರುತಿಸಿ ಅವರ ಪಾಸ್‌ಪೋರ್ಟ್‌ಗಳನ್ನು ರದ್ದುಗೊಳಿಸಬೇಕು ಎಂದು ಒಬ್ಬರು ಸಲಹೆ ನೀಡಿದ್ದರೆ, ಇಂತಹ ವರ್ತನೆಗಳನ್ನು ತಡೆಯಲು ಕಠಿಣ ಕ್ರಮಗಳ ಜೊತೆಗೆ ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಮಗದೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
Loading...
Unable to load recommendations.
Follow Us