ಅಮ್ಮನ ಲಿಪ್​ಸ್ಟಿಕ್ಕು, ಅಪ್ಪನ ಕಾರು; ಗೀಚುವುದೇ ನಮ್ಮ ಜನ್ಮಸಿದ್ಧ ಹಕ್ಕು! ಸರಿ ಇದೆ ಮಗಾ

| Updated By: ಶ್ರೀದೇವಿ ಕಳಸದ

Updated on: Oct 22, 2022 | 1:37 PM

Scribbling : ಗೋಡೆಗೆ ಬೇಡ ಅಂತೀರಿ, ಟೇಬಲ್​ಗೆ ಬೇಡ ಅಂತೀರಿ, ಟೀವಿಗೂ ಬೇಡ ಅಂತೀರಿ. ಮತ್ತೆಲ್ಲಿ ಗೀಚಬೇಕು ನಾನು? ಅದಕ್ಕೆ ಅಪ್ಪನ ಕಾರಿಗೆ ಹೀಗೆಲ್ಲ ಗೀಚಿ ನನ್ನ ಗಾಡಿ ತಗೊಂಡು ಓಟ! ಶ್,​ ಹೇಳಬೇಡಿ ನಾನೆಲ್ಲಿದೀನಿ ಅಂತ ಅವರಿಗೆ.

ಅಮ್ಮನ ಲಿಪ್​ಸ್ಟಿಕ್ಕು, ಅಪ್ಪನ ಕಾರು; ಗೀಚುವುದೇ ನಮ್ಮ ಜನ್ಮಸಿದ್ಧ ಹಕ್ಕು! ಸರಿ ಇದೆ ಮಗಾ
Little Boy Scribbles On White Car With Lipstick
Follow us on

Viral Video : ಗೀಚುವಿಕೆಗೂ ಮಕ್ಕಳ ಮಾನಸಿಕ ಬೆಳವಣಿಗೆಗೂ ಸಂಬಂಧವಿದೆ. ಪೆನ್ಸಿಲ್​, ರಬ್ಬರ್​, ಪೆನ್ನು, ಪೇಂಟು ಹೀಗೆ ಏನನ್ನೂ ಕೈಯಲ್ಲಿ ಹಿಡಿದು ಗೀಚುವುದರಿಂದ ಮೆದುಳು ಪ್ರಚೋದನೆಗೆ ಒಳಗಾಗುತ್ತದೆ. ಶೇಖರಣೆಗೊಂಡ ಒತ್ತಡ ಈ ಪ್ರಕ್ರಿಯೆಯಿಂದ ಬಿಡುಗಡೆ ಪಡೆದು ಮಗುವಿನ ಮನಸ್ಸು ಪ್ರಫುಲ್ಲಿತವಾಗುತ್ತದೆ. ಹಾಗಾಗಿ ಮಗುವಿನ ಗೀಚುವಿಕೆಯನ್ನು ತಡೆಯಬೇಡಿ ಎನ್ನುತ್ತಾರೆ ಮನೋವೈದ್ಯರು. ನಿಜ, ಅದು ಹೀಗೆ ಎಲ್ಲೆಂದರಲ್ಲಿ ಗೀಚಿದರೆ ನಿಭಾಯಿಸಲು ಕಷ್ಟವೇ. ಹಾಗಾಗಿ ಈ ಗೀಚುವಿಕೆಗೆ ಒಂದು ಸರಿಯಾದ ವ್ಯವಸ್ಥೆಯನ್ನು ಸಾಮಾನ್ಯವಾಗಿ ತಂದೆತಾಯಿಗಳು ಕಲ್ಪಿಸಿಕೊಡುತ್ತಾರೆ. ಪೇಪರ್​ ಮೇಲೋ, ಬೋರ್ಡಿನ ಮೇಲೋ ಹೀಗೆ. ಆದರೂ ಮಕ್ಕಳು ಕೇಳವು! ಗೋಡೆಯೇ ಆಗಬೇಕು, ಟೇಬಲ್ಲೇ ಆಗಬೇಕು ಅನ್ನುತ್ತವೆ. ಏಕೆಂದರೆ ಗೀಚುತ್ತಿದ್ದಾಗ ಹೊಮ್ಮುವ ಸೂಕ್ಷ್ಮವಾದ ಕರಕರ ಶಬ್ದವನ್ನು ಮಕ್ಕಳು ಆನಂದಿಸುತ್ತವೆ. ಇದ್ಯಾವುದಕ್ಕೂ ನೀವು ಅವಕಾಶ ಮಾಡಿಕೊಡದಿದ್ದರೆ ಈಗ ನೋಡಿ ಈ ವಿಡಿಯೋದ ಗತಿ ಉಂಟಾಗುತ್ತದೆ!

ತೀರಾ ಕಟ್ಟಿಹಾಕಿದರೆ ಮಕ್ಕಳು ಹೀಗೆಲ್ಲ ಅದ್ಭುತವಾಗಿ ಹಾದಿ ಹುಡುಕಿಕೊಳ್ಳುತ್ತವೆ. ಒಂದು ಡಝನ್​ನಷ್ಟು ತನ್ನ ಅಮ್ಮನ ಲಿಪ್​ಸ್ಟಿಕ್​ ತಂದು, ತನ್ನ ಅಪ್ಪನ ಕಾರಿಗೆ ಹೀಗೆಲ್ಲ ಗೀಚಿದೆ ಈ ಮಗು. ಅಷ್ಟೇ ಅಲ್ಲ, ನಂತರ ಅಪ್ಪ ಅಮ್ಮ ಕ್ಲಾಸ್​ ತೆಗೆದುಕೊಳ್ಳುತ್ತಾರೆ ಎನ್ನುವುದು ಗೊತ್ತಲ್ಲ, ತಕ್ಷಣವೇ ತನ್ನ ಸೈಕಲ್​ ಏರಿ ಅಲ್ಲಿಂದ ತಪ್ಪಿಸಿಕೊಳ್ಳಲು ನೋಡಿದೆ. ಎಂಥ ಮುದ್ದು ಕಿರಾತಕ ಇದು ಈಗಲೇ?

1 ಮಿಲಿಯನ್​ಗಿಂತಲೂ ಹೆಚ್ಚು ಜನ ಈ ವಿಡಿಯೋ ನೋಡಿ ಮನಸೋತಿದ್ದಾರೆ. ಹಲವಾರು ಜನ ಮಗುವನ್ನು ಶ್ಲಾಘಿಸಿದ್ದಾರೆ. ‘ಬೀದಿಬೀದಿ ತಿರುಗಿಕೊಂಡು ಹೋಗುವ ಬದಲಾಗಿ ಇವನು ಹೀಗೆ ಮಾಡಿದ್ದು ಒಳ್ಳೆಯದೇ’ ಎಂದಿದ್ದಾರೆ ಒಬ್ಬರು. ‘ಇವನು ಮತ್ತಷ್ಟು ಸುಂದರಗೊಳಿಸಿದ್ದಾನೆ ಈ ಕಾರನ್ನು’ ಎಂದಿದ್ದಾರೆ ಮತ್ತೊಬ್ಬರು. ‘ಬಿಡಬೇಡಿ ಇವನಿಗೆ ದಂಡ ಹಾಕಿ!’ ಎಂದು ಮುದ್ದಾಗಿ ಗದರಿದ್ದಾರೆ ಮತ್ತೊಬ್ಬರು. ‘ಹೀಗೆ ಮಾಡು ಎಂದು ಇವನಮ್ಮನೇ ಕಳಿಸಿರಲು ಸಾಕು!’ ಎಂದಿದ್ದಾರೆ ಮಗದೊಬ್ಬರು. ‘ಇವನು ಭವಿಷ್ಯದ ಕಾರ್​ ವಿನ್ಯಾಸಕ’ ಎಂದಿದ್ದಾರೆ ಇನ್ನೂ ಒಬ್ಬರು.

ನಿಮಗೆ ಅದೇ ಲಿಪ್​ಸ್ಟಿಕ್​ ಹಚ್ಚಿ ಹಚ್ಚಿ ಬೇಸರವಾಗಿದ್ದರೆ ಮತ್ತು ನಿಮ್ಮ ಕಾರಿಗೆ ವಿನ್ಯಾಸ ಬೇಕಿದ್ದರೆ ಈ ಮುದ್ದುಮಗುವನ್ನು ಸಂಪರ್ಕಿಸಿ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 1:25 pm, Sat, 22 October 22