
ಹೋಳಿ ಹಬ್ಬವನ್ನು ಅತ್ಯಂತ ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಗುತ್ತದೆ. ಬಣ್ಣಗಳ ಹಬ್ಬವನ್ನು ಪ್ರತೀ ವರ್ಷ ಫಾಲ್ಗುಣ ಮಾಸದ ಹುಣ್ಣಿಮೆಯ ದಿನದಂದು ಆಚರಿಸಲಾಗುತ್ತದೆ. ಒಂದೊಂದು ಕಡೆಗಳಲ್ಲಿ ಒಂದೊಂದು ರೀತಿಯ ಆಚರಣೆ ಹಾಗೂ ಸಂಪ್ರದಾಯವಿದ್ದು, ಆದರೆ ತುಳುನಾಡಿನಲ್ಲಿ ಹೋಳಿ ಕುಣಿತ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ. ಮರಾಠಿ ಸಮುದಾಯ ಮತ್ತು ಕುಡುಬಿ ಜನಾಂಗ ತುಳುನಾಡಿನ ಸಂಸ್ಕೃತಿಯೊಂದಿಗೆ ವಿಶಿಷ್ಟ ಕಲೆಯಾಗಿ ಆಚರಿಸಿಕೊಂಡು ಬರುತ್ತಿವೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಮರಾಠಿ ಸಮುದಾಯದವರ ಹೋಳಿ ಹಬ್ಬದ ಸಡಗರ ಸಂಭ್ರಮವು ಎಲ್ಲರ ಗಮನ ಸೆಳೆಯುತ್ತಿವೆ.
ಉಡುಪಿಯ ಕಂಡೀರಾ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತುಳುನಾಡಿನ ಮರಾಠ ಜನಾಂಗದವರ ವಿಶಿಷ್ಟ ಹೋಳಿ ಆಚರಣೆಯ ವಿಡಿಯೋವೊಂದನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದೊಂದಿಗೆ ‘ದಶಮಿಯಿಂದ ಹುಣ್ಣಿಮೆಯವರೆಗೆ ಮನೆ ಮನೆಗೆ ಹೋಗಿ ಕುಣಿದು, ರಾಮಾಯಣದ ಹಾಡುಗಳನ್ನು ಹಾಡಿ ಹಾರೈಸುವ ಸುಂದರ ಆಚರಣೆ’ ಎಂದು ಬರೆದುಕೊಳ್ಳಲಾಗಿದೆ. ಈ ಕರಾವಳಿಯ ಈ ವಿಶಿಷ್ಟ ಹೋಳಿ ಆಚರಣೆಯ ವಿಡಿಯೋವೊಂದು ನೆಟ್ಟಿಗರ ಗಮನ ಸೆಳೆಯುತ್ತಿವೆ.
ಈ ವಿಡಿಯೋದಲ್ಲಿ ಮರಾಠಿ ಸಮುದಾಯದ ಪುರುಷರು ವಿಶೇಷವಾದ ವೇಷ ಭೂಷಣ ತೊಟ್ಟು ಮನೆ ಮನೆಗೆ ಭೇಟಿ ನೀಡಿ ನೃತ್ಯ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ತುಳಜಾ ಭವಾನಿ ಇವರ ಆರಾಧ್ಯ ದೇವತೆವಾಗಿದ್ದು, ಆಕೆಗೆ ಪೂಜೆ ಸಲ್ಲಿಸಿದ ಬಳಿಕ ಕೂಡು ಕುಟುಂಬದ ಯಜಮಾನರೊಂದಿಗೆ ತಂಡ ಕಟ್ಟಿಕೊಂಡು ಇವರು ಮನೆಮನೆಗೆ ತೆರಳುತ್ತಾರೆ. ಏಕಾದಶಿಯಿಂದ ಐದು ದಿನ ಈ ಜನಪದ ಮೇಳ ಸಂಚಾರಕ್ಕೆ ಹೊರಡುತ್ತದೆ ಎಂದು ಹೋಳಿ ಹಬ್ಬದ ಆಚರಣೆಯ ಕ್ರಮವನ್ನು ಈ ಸಮುದಾಯದವರು ವಿವರಿಸಿದ್ದಾರೆ.
ಇದನ್ನೂ ಓದಿ: ತನ್ನ ತೊಡೆಯ ಚರ್ಮದಿಂದ ತಾಯಿಗೆ ಪಾದುಕೆ ಮಾಡಿದ ಕಲಿಯುಗದ ಶ್ರವಣ ಕುಮಾರ
ಈ ವಿಡಿಯೋದಲ್ಲಿ ಕುಣಿತದಾರಿಗಳು ಹಿಜಾರ, ನೆರಿ ಅಂಗಿ, ಶಲ್ಯ , ಕಾಲ್ಗೆಜ್ಜೆ, ತಲೆಗೆ ರುಮಾಲು ಸುತ್ತಿ ಅದಕ್ಕೆ ಕಿರೀಟ ಹಾಗೂ ಹೂವುಗಳನ್ನು ಸುತ್ತಿರುವುದನ್ನು ನೋಡಬಹುದಾಗಿದೆ. ಹೋಳಿ ಹಬ್ಬದ ನೃತ್ಯಕ್ಕೆ ಗುಮ್ಮಟೆಯು ಪ್ರಮುಖ ಆಕರ್ಷಣೆಯಾಗಿದ್ದು, ತಾಳ ಹಾಗೂ ಗುಮ್ಮಟೆಯನ್ನು ಬಾರಿಸುತ್ತ ಹೋಳಿ ನೃತ್ಯ ಮಾಡುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಕರಾವಳಿಯ ಮರಾಠ ಜನಾಂಗದ ಹೋಳಿ ಆಚರಣೆಗೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿವೆ.
Published On - 2:50 pm, Sat, 23 March 24