ಮಂಗಗಳು ಕುಚೇಷ್ಠೆಯಿಂದ ಜನರ ಮನಸ್ಸನ್ನು ಗೆದ್ದಿದ್ದರೂ ಅವುಗಳಿಗೆ ಬುದ್ಧಿ ಇಲ್ಲವೆಂದು ತಿಳಿದುಕೊಳ್ಳುವುದು ಮನಷ್ಯನ ಭ್ರಮೆ. ಸಾಮಾನ್ಯವಾಗಿ ತಾನು ಬುದ್ಧಿವಂತ ಎಂದು ತೋರಿಸಿಕೊಳ್ಳು ಮನಷ್ಯನಿಂದಲೇ ಏನನ್ನಾದರೂ ಕದಿಯಲು ಕೋತಿಗಳು ತಮ್ಮ ಬುದ್ಧಿವಂತಿಕೆಯನ್ನು ಉಪಯೋಗಿಸುತ್ತವೆ. ಕೆಲವು ಬಾರಿ ಕೋತಿಗಳು ಆಹಾರ ಹುಡುಕುವ ಸಮಯದಲ್ಲಿ ತಮಗೆ ಬೇಕಾದ್ದು ಸಿಗದಿದ್ದಾಗ ಸ್ಮಾರ್ಟ್ಫೋನ್ಗಳು, ಸನ್ಗ್ಲಾಸ್ಗಳು ಅಥವಾ ಇತರ ವಸ್ತುಗಳನ್ನು ಜನರಿಂದ ಕಸಿದುಕೊಳ್ಳಲು ಆಸಕ್ತಿ ತೋರಿಸುತ್ತವೆ. ಇದಕ್ಕೆ ಸಂಬಂಧಿಸಿದ ಅನೇಕ ವಿಡಿಯೋಗಳನನ್ನು ನೋಡಿರುತ್ತೀರಿ. ಕೆಲವರು ಸ್ವತಃ ಇಂತಹ ಘಟನೆಯನ್ನು ಅನುಭವಿಸಿರುತ್ತಾರೆ. ಇದೀಗ ಮಂಗವೊಂದು ವ್ಯಕ್ತಿಯೊಬ್ಬರು ಬ್ಯಾಗ್ ಒಳಗೆ ಕೈಹಾಕುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.
ಪ್ರವಾಸಿ ತಾಣಗಳಿಗೆ ಜನರು ಬರುವಾಗ ಖಾಲಿ ಕೈಯಲ್ಲಿ ಬುರುವುದಿಲ್ಲ ಕೈಯಲ್ಲಿ ಚಿಪ್ಸ್, ಹಣ್ಣುಗಳು ಇತ್ಯಾದಿಗಳನ್ನು ತೆಗೆದುಕೊಂಡು ಬರುತ್ತಾರೆ. ಹೀಗೆ ತಂದ ಆಹಾರವನ್ನು ಕೆಲವರು ಕೋತಿಗಳಿಗೂ ನೀಡುತ್ತಾರೆ. ನೀಡದಿದ್ದಾಗ ಅವುಗಳೇ ಕಸಿದುಕೊಳ್ಳಲು ಬರುತ್ತವೆ. ಅದೇ ರೀತಿ ವ್ಯಕ್ತಿಯೊಬ್ಬ ಬೆನ್ನಿಗೆ ಬ್ಯಾಗ್ ಹಾಕಿ ಕುಳಿತುಕೊಂಡಿರುತ್ತಾನೆ. ಈ ವೇಳೆ ಹಿಂಬದಿಯಿಂದ ಬಂದ ಮಂಗಣ್ಣ ಬ್ಯಾಗ್ನ ಜಿಪ್ ಅನ್ನು ತೆರೆಯುತ್ತದೆ. ಮೊದಲು ಮುಂಭಾಗದ ಜಿಪ್ ಅನ್ನು ತೆರೆದಾಗ ಕೈಗೆ ಏನೂ ಸಿಗುವುದಿಲ್ಲ. ಹೀಗಾಗಿ ಬ್ಯಾಗ್ನ ಮತ್ತೊಂದು ಜಿಪ್ ತೆರೆಯುತ್ತದೆ. ಈ ವೇಳೆ ಅದರೊಳಗೆ ಇಣುಕಿ ನೋಡಿದ ಮಂಗಣ್ಣನಿಗೆ ಅದರಲ್ಲೇನೋ ಇದ್ದಂಗೆ ಕಾಣಿಸುತ್ತದೆ, ಅದರಂತೆ ಕೈ ಹಾಕಿ ನೋಡಿದಾಗ ಆ್ಯಪಲ್ ಸಿಗುತ್ತದೆ. ವಾವ್ಹ್ ಒಳ್ಳೆ ಹಣ್ಣು ಸಿಕ್ಕಿತು ಎಂದು ಅಂದುಕೊಂಡ ಕೋತಿ ಅದನ್ನು ಕೊಂಡೊಯ್ಯುವುದನ್ನು ವೈರಲ್ ವಿಡಿಯೋದಲ್ಲಿ ಕಾಣಬಹುದು.
ಈ ವಿಡಿಯೋವನ್ನು waowafrica ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, 1,04,901 ವೀಕ್ಷಣೆಗಳು ಕಂಡಿದ್ದು, 6ಸಾವಿರಕ್ಕೂ ಹೆಚ್ಚು ಲೈಕ್ಗಳು ಬಂದಿವೆ. ವಿಡಿಯೋ ನೋಡಿದ ನೆಟ್ಟಿಗರು, ಕೋತಿ ಪರಿಣಿತ ಕಳ್ಳನಂತೆ ಕಾಣುತ್ತಿದೆ ಎಂದು ಹಾಸ್ಯಾಸ್ಪದವಾಗಿ ಹೇಳಿದ್ದಾರೆ. ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿ, “ಅವನು ಒಳ್ಳೆಯ ರಾಜಕಾರಣಿಯಾಗುತ್ತಾನೆ” ಎಂದಿದ್ದಾರೆ.
ಮತ್ತಷ್ಟು ವೈರಲ್ ವಿಡಿಯೋಗಳನ್ನು ವೀಕ್ಷಣೆ ಮಾಡಲು ಇಲ್ಲಿ ಕ್ಲಿಕ್ ಮಾಡಿ
Published On - 1:36 pm, Sun, 18 September 22