ದೇಶದ ಕೆಲ ಭಾಗಗಳಲ್ಲಿ ತೌಕ್ತೆ ಚಂಡಮಾರುತ ಅಬ್ಬರಿಸಿ ಹೋದ ಬೆನ್ನಲ್ಲೇ ಯಾಸ್ ಕೆಲ ಪ್ರದೇಶಗಳಿಗೆ ಅಪ್ಪಳಿಸಿದೆ. ಪಶ್ಚಿಮ ಬಂಗಾಳ, ಒಡಿಶಾ ರಾಜ್ಯಗಳಲ್ಲಿ ನಿನ್ನೆ (ಮೇ 26) ಮುಂಜಾನೆಯಿಂದಲೇ ತೀವ್ರ ಸ್ವರೂಪಕ್ಕೆ ತಿರುಗಿರುವ ಯಾಸ್ ಇಂದು ಕೂಡಾ ಮಳೆ ಸುರಿಸುತ್ತಿದ್ದು, ಈಗಾಗಲೇ ಸಾಕಷ್ಟು ಹಾನಿ ಮಾಡಿದೆ. ಚಂಡಮಾರುತದಿಂದ ನಲುಗಿದ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದ್ದು, ಅಪಾಯಕ್ಕೆ ಸಿಲುಕಿದ ಹಲವರನ್ನು ಪಾರು ಮಾಡಲಾಗುತ್ತಿದೆ. ಇದೇ ವೇಳೆ ಯಾಸ್ ಚಂಡಮಾರುತಕ್ಕೆ ಸಂಬಂಧಿಸಿದ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಜನ ವಿವಿಧ ವೇದಿಕೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಯಾಸ್ಗೆ ಸಂಬಂಧಿಸಿದಂತೆ ವೈರಲ್ ಆದ ವಿಡಿಯೋಗಳ ಪೈಕಿ ಒಂದು ಸುದ್ದಿ ಮಾತ್ರ ಭಾರೀ ಸದ್ದು ಮಾಡುತ್ತಿದೆ. ಆ ವಿಡಿಯೋದಲ್ಲಿರುವ ವ್ಯಕ್ತಿ ಮಾಧ್ಯಮವೊಂದರ ಪ್ರತಿನಿಧಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ರೀತಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಯಾಸ್ ಚಂಡಮಾರುತದ ತೀವ್ರತೆ ಹೇಗಿದೆ ಎಂದು ಪತ್ರಕರ್ತರೊಬ್ಬರು ವರದಿ ಮಾಡುತ್ತಿದ್ದ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಅಲ್ಲಿ ಕಾಣಿಸಿಕೊಂಡಿದ್ದಾನೆ. ವಾತಾವರಣ ಸಂಪೂರ್ಣ ಹದಗೆಟ್ಟ ಪರಿಸ್ಥಿತಿಯಲ್ಲಿ ನೀವೇಕೆ ಹೊರಬಂದಿದ್ದೀರಿ ಎಂದು ಮಾಧ್ಯಮದ ಪ್ರತಿನಿಧಿ ಕೇಳಿದ ಪ್ರಶ್ನೆಗೆ ವ್ಯಕ್ತಿ ಥಟ್ಟನೆ ಉತ್ತರ ನೀಡಿದ್ದಾನೆ.
ವಾತಾವರಣ ಇಷ್ಟು ಹದಗೆಟ್ಟಿರುವಾಗ ಏಕೆ ಹೊರಬಂದಿದ್ದೀರಿ ಎಂದು ಮಾಧ್ಯಮದ ಪ್ರತಿನಿಧಿ ಕೇಳಿದ ಪ್ರಶ್ನೆಗೆ ಕಿಂಚಿತ್ತೂ ಯೋಚಿಸದೆ ಪ್ರತಿಕ್ರಿಯೆ ನೀಡಿದ ವ್ಯಕ್ತಿ, ನೀವು ಹೊರಗೆ ಬಂದಿದ್ದೀರಲ್ಲಾ ಹಾಗಾಗಿ ನಾನೂ ಬಂದಿದ್ದೇನೆ ಎಂದಿದ್ದಾನೆ. ಆಗ ಅದಕ್ಕೆ ಉತ್ತರಿಸಿದ ಪತ್ರಕರ್ತ ನಾನು ನನ್ನ ಕೆಲಸ ಮಾಡುತ್ತೇನೆ ಎಂದಿದ್ದಾರೆ. ಈ ಉತ್ತರಕ್ಕೂ ಫಟ್ಟನೆ ಪ್ರತ್ಯುತ್ತರ ನೀಡಿದ ವ್ಯಕ್ತಿ ನಾನು ಹೊರಗೆ ಬಾರದೇ ಇದ್ದಿದ್ದರೆ ನೀವು ಯಾರನ್ನ ತೋರಿಸುತ್ತಿದ್ದಿರಿ ಎನ್ನುವ ಮೂಲಕ ಹುಬ್ಬೇರುವಂತೆ ಮಾಡಿದ್ದಾನೆ.
Such a kind hearted man. Doing so much for the humanity.
Respect. pic.twitter.com/SCB1zhA5SQ
— Arun Bothra (@arunbothra) May 26, 2021
ಮೊದಲು ಸುದ್ದಿ ವಾಹಿನಿ ಹಂಚಿಕೊಂಡ ಈ ವಿಡಿಯೋವನ್ನು ನಂತರ ಒಬ್ಬೊಬ್ಬರಾಗಿ ಹಂಚಿಕೊಂಡಿದ್ದು, ಇದೀಗ ಭಾರೀ ವೈರಲ್ ಆಗಿದೆ. ಕೆಲವರು ಆ ವ್ಯಕ್ತಿ ಫಟಾಫಟ್ ಎಂದು ಉತ್ತರಿಸಿದ ರೀತಿಗೆ ವಾವ್ ಎಂದಿದ್ದರೆ ಇನ್ನು ಕೆಲವೊಂದಷ್ಟು ಜನ ಚಂಡಮಾರುತ ಭೀಕರವಾಗಿ ಅಬ್ಬರಿಸುತ್ತಿರುವ ಸಂದರ್ಭದಲ್ಲಿ ಹೊರಗೆ ಅಡ್ಡಾಡುತ್ತಿರುವುದಲ್ಲದೇ ಅಸಡ್ಡೆ ತೋರುವುದು ಸರಿಯಲ್ಲ ಎಂದಿದ್ದಾರೆ.
ಇದನ್ನೂ ಓದಿ:
ಬಿಸಿಲು ಇರುವಾಗ ಹೊರಗೆ ಬರಬಹುದಾ ಎಂದು ಕೇಳಿದ ವ್ಯಕ್ತಿಗೆ ಸಖತ್ ತಿರುಗೇಟು ಕೊಟ್ಟ ಪೊಲೀಸರು; ವೈರಲ್ ಆಯ್ತು ಟ್ವೀಟ್
ಪತ್ರಕರ್ತರ ಪ್ರಶ್ನೆಗೆ ಸಿಡಿಮಿಡಿಗೊಂಡು ಸ್ಯಾನಿಟೈಜರ್ ಸ್ಪ್ರೇ ಮಾಡಿದ ಥಾಯ್ಲೆಂಡ್ ಪ್ರಧಾನಿ ಪ್ರಯುತ್ ಚಾನ್ ಓಚಾ