ತೆಲಂಗಾಣದ ಆಸ್ಪತ್ರೆಯಲ್ಲಿ ರೋಗಿಯ ಬೆಡ್ ಕೆಳಗೆ ಹಾವು ಪತ್ತೆ, ಈ ತಿಂಗಳಲ್ಲಿ ಇದು ಎರಡನೇ ಪ್ರಕರಣ

| Updated By: ಶ್ರೀದೇವಿ ಕಳಸದ

Updated on: Oct 25, 2022 | 11:26 AM

MGM Hospital : ತೆಲಂಗಾಣದ ಎಂ.ಜಿ.ಎಂ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಇಂಥ ಪ್ರಕರಣಗಳಿಂದಾಗಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆರೋಗ್ಯ ಸಚಿವರನ್ನು ಟ್ಯಾಗ್ ಮಾಡಿ ಗಮನಹರಿಸಲು ಕೇಳಿಕೊಳ್ಳುತ್ತಿದ್ದಾರೆ.

ತೆಲಂಗಾಣದ ಆಸ್ಪತ್ರೆಯಲ್ಲಿ ರೋಗಿಯ ಬೆಡ್ ಕೆಳಗೆ ಹಾವು ಪತ್ತೆ, ಈ ತಿಂಗಳಲ್ಲಿ ಇದು ಎರಡನೇ ಪ್ರಕರಣ
Snake Found Under Patients Bed at Telangana Hospital 2nd Such Case in a Month
Follow us on

Viral Video : ತೆಲಂಗಾಣದ ವಾರಂಗಲ್‌ನ ಮಹಾತ್ಮಾ ಗಾಂಧೀ ಸ್ಮಾರಕ ಆಸ್ಪತ್ರೆಯಲ್ಲಿ ರೋಗಿಯ ಹಾಸಿಗೆಯ ಕೆಳಗೆ ಹಾವು ಪತ್ತೆಯಾಗಿದ್ದು ಇದೀಗ ಈ ಆಘಾತಕಾರಿ ವಿಡಿಯೋ ವೈರಲ್ ಆಗಿದೆ. ಹಾಸಿಗೆಯ ಮೇಲೆ ಮಲಗಿದ ರೋಗಿಯೊಬ್ಬರಿಗೆ ಈ ಹಾವು ಕಾಣಿಸಿಕೊಂಡ ಪರಿಣಾಮ ಉಳಿದ ರೋಗಿಗಳು ಭಯಭೀತರಾಗಿದ್ಧಾರೆ. ತಕ್ಷಣವೇ ಆಸ್ಪತ್ರೆಯ ಸಿಬ್ಬಂದಿ, ಆಸ್ಪತ್ರೆಯ ಆಡಳಿತ ವರ್ಗಕ್ಕೆ ಈ ವಿಷಯ ತಿಳಿಸಿದ್ದಾರೆ. ಟ್ವಿಟರ್ ಖಾತೆದಾರ ಮತ್ತು ಪತ್ರಕರ್ತ ಆಶೀಶ್ ವೀಡಿಯೋ ಟ್ವೀಟ್ ಮಾಡಿದ್ದಾರೆ.

ಆಶೀಶ್, ‘ಈ ಆಸ್ಪತ್ರೆಯು ಅತೀ ಹಳೆಯ ಮತ್ತು ದೊಡ್ಡ ಸರ್ಕಾರಿ ಆಸ್ಪತ್ರೆ. ಈ ತಿಂಗಳಲ್ಲಿ ಇದು ಎರಡನೇ ಘಟನೆ. ಅಕ್ಟೋಬರ್ 13 ರಂದು ರೋಗಿಯ ಬಚ್ಚಲುಕೋಣೆಯಲ್ಲಿ ನಾಗರಹಾವು ಕಾಣಿಸಿಕೊಂಡಿತ್ತು. ಇಷ್ಟೇ ಅಲ್ಲ, ಮಾರ್ಚ್​ನಲ್ಲಿ ರೋಗಿ ಶ್ರೀನಿವಾಸ್ ಅವರು ಕಿಡ್ನಿ ಸಮಸ್ಯೆ ಮತ್ತು ತೀವ್ರ ಉಸಿರಾಟದ ಸಮಸ್ಯೆಯಿಂದ ಐಸಿಯಗೆ ದಾಖಲಾಗಿದ್ದರು. ಆಗ ಇವರ ಕೈಕಾಲುಗಳಿಗೆ ಇಲಿಗಳು ಕಚ್ಚಿದ ಪರಿಣಾಮ, ಗಾಯಗಳುಂಟಾಗಿದ್ದವು. ಈ ಘಟನೆಯಿಂದ ಅವರ ಪರಿಸ್ಥಿತಿ ಗಂಭೀರವಾಗಿ ಎರಡು ದಿನಗಳ ಬಳಿಕ ಮರಣವನ್ನಪ್ಪಿದ್ದರು’ ಎಂದು ನೋಟ್ ಬರೆದಿದ್ದಾರೆ.

ನೆಟ್ಟಿಗರು ಈ ಘಟನೆಗಳಿಂದ ಆಕ್ರೋಶಗೊಂಡಿದ್ದಾರೆ. ಆಸ್ಪತ್ರೆಯ ಜಾಗಗಳು ಸ್ವಚ್ಛ ಮತ್ತು ಇಂಥ ಪ್ರಾಣಿ, ಕ್ರಿಮಿಗಳಿಂದ ಮುಕ್ತವಾಗಿರಬೇಕು. 24 ಗಂಟೆಗಳ ಕಾಲವೂ ಸಿಸಿಟಿವಿ ಕ್ಯಾಮೆರಾ ಚಾಲನೆಯಲ್ಲಿರಬೇಕು ಎಂದಿದ್ದಾರೆ ಒಬ್ಬರು. ನನ್ನನ್ನು ನಂಬಿ ಅಣ್ಣಾ ,ಇಂಥದೆಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ತೀರಾ ಸಾಮಾನ್ಯ ಎಂದಿದ್ದಾರೆ ಇನ್ನೂ ಒಬ್ಬರು. ಆರೋಗ್ಯ ಸಚಿವ ಹರೀಶ್​ ಅವರನ್ನು ಟ್ಯಾಗ್ ಮಾಡಿ, ನಿಮಗೆ ರಾಜಕಾರಣದಿಂದ ಬಿಡುವು ಮಾಡಿಕೊಂಡು ಸ್ವಲ್ಪ ಇತ್ತಕಡೆ ಗಮನಕೊಡಿ ಎಂದಿದ್ದಾರೆ ಹಲವರು. ಸಾವಿರಾರು ರೋಗಿಗಳು ಆಸ್ಪತ್ರೆಗೆ ಭೇಟಿ ನೀಡುವಂತೆ ಈ ಹಾವೂ ಚಿಕಿತ್ಸೆಗಾಗಿ ಆಸ್ಪತ್ರೆಗೆ ಭೇಟಿ ಕೊಟ್ಟಿದೆ ಎಂದು ಇನ್ನೊಬ್ಬರು ಹೇಳಿದ್ದಾರೆ. ಇಷ್ಟೆಲ್ಲ ಸಮಸ್ಯೆಗಳು ಇಲ್ಲಿ ಉಂಟಾಗುತ್ತಿದ್ದರೂ ಯಾರೊಬ್ಬರೂ ತಿರುಗಿ ನೋಡುತ್ತಿಲ್ಲವಲ್ಲ ಎಲ್ಲಿದ್ದೀರಿ ರಾಜಕಾರಣಿಗಳೆಲ್ಲ ಎಂದಿದ್ದಾರೆ ಹಲವರು.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:16 am, Tue, 25 October 22