ಮುಂಬೈ: ಸೇತುವೆಯಿಂದ ಸಮುದ್ರಕ್ಕೆ ಹಾರಲೆತ್ನಿಸಿದ ಮಹಿಳೆಯನ್ನು ರಕ್ಷಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಮಹಿಳೆಯನ್ನು ರೀಮಾ ಮುಖೇಶ್ ಪಟೇಲ್(56) ಎಂದು ಗುರುತಿಸಲಾಗಿದ್ದು, ಇವರು ಅಟಲ್ ಸೇತು ಎಂದೂ ಕರೆಯಲ್ಪಡುವ ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್‍ನಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಲು ಯತ್ನಿಸಿದ್ದಾರೆ. ಆದರೆ ಮಹಿಳೆಯನ್ನು ಕ್ಯಾಬ್ ಡ್ರೈವರ್ ಮತ್ತು ಪೊಲೀಸ್ ಸಿಬ್ಬಂದಿಗಳು ರಕ್ಷಿಸಿದ್ದಾರೆ. ಆ.16ರಂದು ಸಂಜೆ ಈ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸ್ಥಳೀಯ ಅಧಿಕಾರಿಗಳು ಈ ವಿಡಿಯೋವನ್ನು ಬಿಡುಗಡೆ ಮಾಡಿದ್ದಾನೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ಸಿಸಿಟಿವಿ ವೀಡಿಯೋದಲ್ಲಿ ಅಟಲ್ ಸೇತುವಿನ ಸುರಕ್ಷತಾ ತಡೆಗೋಡೆಯ ಮೇಲೆ ಮಹಿಳೆ ಕುಳಿತಿರುವುದು ಕಂಡುಬಂದಿದೆ. ಕ್ಯಾಬ್ನಲ್ಲಿ ಬಂದಿದ್ದ ಮಹಿಳೆಯ ಆತಂಕಕಾರಿ ವರ್ತನೆಯನ್ನು ಗಮನಿಸಿದ ಚಾಲಕ ತಕ್ಷಣವೇ ಪೊಲೀಸರಿಗೆ ಎಚ್ಚರಿಕೆ ನೀಡಿದ್ದಾನೆ.
ಮಹಿಳೆ ಇದ್ದಕ್ಕಿದ್ದಂತೆ ಸಮುದ್ರಕ್ಕೆ ಹಾರಲು ಮುಂದಾಗಿದ್ದು, ಈ ವೇಳೆ ಅಲ್ಲಿದ್ದ ಕ್ಯಾಬ್ ಡ್ರೈವರ್ ಆಕೆಯನ್ನು ಹಿಡಿದುಕೊಂಡಿದ್ದಾನೆ. ಬಳಿಕ ಪೊಲೀಸರು ಸೇರಿ ಮಹಿಳೆಯನ್ನು ಸುರಕ್ಷಿತವಾಗಿ ಎಳೆದೊಯ್ಯುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: Richard Lugner: 2 ತಿಂಗಳ ಹಿಂದಷ್ಟೇ 6ನೇ ಮದುವೆಯಾಗಿದ್ದ 91 ವರ್ಷದ ಬಿಲಿಯನೇರ್ ನಿಧನ
ಮಹಿಳೆಯ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು? ಎಂಬುದರ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಇನ್ನೂ ತನಿಖೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. @CPMumbaiPolice ಎಂಬ ಟ್ವಿಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಇಂದು (ಆ.17) ಬೆಳಗ್ಗೆ 1.47ಕ್ಕೆ ಹಂಚಿಕೊಂಡಿರುವ ವಿಡಿಯೋ ಇದೀಗಾಗಲೇ 3ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:43 pm, Sat, 17 August 24