
ಟೋಕಿಯೊ ಒಲಂಪಿಕ್ಸ್ನಲ್ಲಿ ಗೆದ್ದ ಭಾರತದ ವೇಟ್ಲಿಫ್ಟರ್ ಮೀರಾಬಾಯಿ ಚಾನು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮುಂದಿನ ಪೀಳಿಗೆಗೆ ಮಾದರಿ ವ್ಯಕ್ತಿಯಾಗಿ ಹೊರಹೊಮ್ಮಿದ ಇವರ ಸಾಧನೆಯನ್ನು ನೋಡಿ ಪುಟ್ಟ ಮಕ್ಕಳೂ ಸಹ ಇವರಂತೆಯೇ ಆಗಲು ಇಚ್ಛಿಸುತ್ತಿದ್ದಾರೆ. ಇಲ್ಲೋರ್ವ ಪುಟ್ಟ ಬಾಲಕಿ ವೇಟ್ಲಿಫ್ಟ್ ಹಿಡಿದು ಮೀರಾಬಾಯಿ ಚಾನು ಅವರ ಹಾಗೆ ವೇಟ್ಲಿಫ್ಟಿಂಗ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಗಮನಿಸುವಂತೆ ಪುಟ್ಟ ಬಾಲಕಿ ವೇಟ್ಲಿಫ್ಟಿಂಗ್ ಮಾಡುತ್ತಿದ್ದಾಳೆ. ಅವಳ ಹಿಂದಿರುವ ಟಿವಿಯಲ್ಲಿ ಮೀರಾಬಾಯಿ ಚಾನು ವೇಟ್ಲಿಫ್ಟಿಂಗ್ ಮಾಡುತ್ತಿರುವ ದೃಶ್ಯ ಕಾಣಬಹುದು. ಪದಕ ಗೆದ್ದು ಖುಷಿಯಂತೆಯೇ, ಬಾಲಕಿಯೂ ಸಹ ಅಭಿನಯಿಸುತ್ತಿದ್ದಾಳೆ. ಮೀರಾಬಾಯಿ ಚಾನು ಅವರಂತೆಯೇ ಆಗುವ ಬಾಲಕಿಯ ಕನಸಿಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬಾಲಕಿಯ ತಂದೆ ವೇಟ್ಲಿಫ್ಟರ್. ಹಾಗಿರುವಾಗ ವೇಟ್ಲಿಫ್ಟಿಂಗ್ ಕಲೆ ಅವಳ ರಕ್ತದಲ್ಲಿಯೇ ಬಂದಿದೆ. ಮೀರಾಬಾಯಿ ಚಾನು ಅವರೂ ಸಹ ಈ ಪುಟ್ಟ ಬಾಲಕಿಯ ವಿಡಿಯೋ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಸೋ.. ಕ್ಯೂಟ್. ಜಸ್ಟ್ ಲವ್ ದಿಸ್ ಎಂದು ಬರೆದುಕೊಂಡಿದ್ದಾರೆ.
ವೇಟ್ಲಿಫ್ಟರ್ ಸತೀಶ್ ಅವರು ವಿಡಿಯೋ ಹಂಚಿಕೊಂಡಿದ್ದು ಜೂನಿಯರ್ ಮೀರಾಬಾಯಿ ಚಾನು. ಇವರು ಎಲ್ಲರಿಗೆ ಸ್ಪೂರ್ತಿ ಎಂದು ಶೀರ್ಷಿಕೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಅಭಿಪ್ರಾಯಗಳ ಸುರಿಮಳೆಯೇ ಬಂದಿದೆ. ಪುಟ್ಟ ಬಾಲಕಿಯು ಮೀರಾಬಾಯಿ ಅವರಂತೆ ಆಗಲು ಕನಸು ಕಾಣುತ್ತಿರುವುದು ಹೆಮ್ಮೆಯ ವಿಷಯ ಎಂದು ಹೇಳಿದ್ದಾರೆ. ಇನ್ನು ಕೆಲವರು ವೀರಾಬಾಯಿ ಚಾನು ಅವರಿಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ವಿಡಿಯೋ 2 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. 21 ಸಾವಿರಕ್ಕೂ ಹೆಚ್ಚು ಲೈಕ್ಸ್ಗಳು ಬಂದಿವೆ.
ಇದನ್ನೂ ಓದಿ:
PHOTOS: ಭಾರತಕ್ಕೆ ವಾಪಸ್ಸಾದ ಬೆಳ್ಳಿ ಹುಡುಗಿ ಮೀರಾಬಾಯಿ ಚಾನು; ಡಿವೈಎಸ್ಪಿ ಹುದ್ದೆ ನೀಡಿ ಗೌರವಿಸಿದ ಮಣಿಪುರ ಸರ್ಕಾರ
Published On - 12:17 pm, Tue, 27 July 21