Zomato Woman Delivery Agent : ಮಕ್ಕಳನ್ನು ಕಟ್ಟಿಕೊಂಡು ಕೆಲಸಕ್ಕೆ ಹೋಗುವುದು ಹೊಸ ವಿಷಯವೇನಲ್ಲ. ಈಗಲೂ ಹೊಲಗದ್ದೆಗಳಿಗೆ ಕೂಲಿನಾಲಿಗೆ ಮಕ್ಕಳನ್ನು ಎತ್ತಿಕೊಂಡೇ ಕುಟುಂಬಕ್ಕಾಗಿ ದುಡಿಯುವ ಗಟ್ಟಿಗಿತ್ತಿಯರು ನಮ್ಮ ನಡುವೆ ಇದ್ದಾರೆ. ಮಹಾನಗರಗಳ ಕಾರ್ಪೊರೇಟ್ ಆಫೀಸುಗಳಲ್ಲಿ ಕ್ರೀಚ್ಗಳಿರುತ್ತವೆ. ಹಾಗಾಗಿ ತುಸು ನೆಮ್ಮದಿಯಿಂದ ಆ ತಾಯಂದಿರು ಕೆಲಸ ಮಾಡಬಹುದು. ಉಳಿದವರಿಗೆ ಡೇಕೇರ್ ಗತಿ. ಅದೂ ನಿಭಾಯಿಸಲು ಸಾಧ್ಯವಿಲ್ಲದವರು ಹೀಗೆ ಮಕ್ಕಳನ್ನು ಎದೆಗೆ ಕಟ್ಟಿಕೊಂಡೇ ಕೆಲಸಕ್ಕೆ ತೆರಳುವ ಧೈರ್ಯಕ್ಕೆ ಮುಂದಾಗಬೇಕು. ಈಗಿಲ್ಲಿ ವೈರಲ್ ಆಗಿರುವ ವಿಡಿಯೋ ಇಂಥ ಧೈರ್ಯವನ್ನು ಸಾಂಕೇತಿಸುವಂಥದ್ದೇ. ವ್ಯವಸ್ಥೆ ಕೊಡುವ ಇಂಥ ಸವಾಲುಗಳನ್ನು ಇನ್ನೂ ಅದೆಷ್ಟು ಶತಮಾನಗಳ ಕಾಲ ನಮ್ಮ ದೇಶದ ಹೆಣ್ಣುಮಗಳು ಎದುರಿಸುತ್ತಲೇ ಇರಬೇಕು? ಎನ್ನುವುದು ಈ ವಿಡಿಯೋ ನೋಡಿದಾಗ ಕಾಡದೇ ಇರದು. ಇಂಥ ಕಾಡುವಿಕೆಯಲ್ಲಿ ನವೆಯದೆ ಮತ್ತೆ ಎದ್ದು ನಿಲ್ಲುವುದು ಹೆಣ್ಣಿನ ಸ್ವಭಾವ. ಈ ಛಲದ ಹಾದಿ ಹಂತಹಂತವಾಗಿ ಪೀಳಿಗೆಯಿಂದ ಪೀಳಿಗೆಗೆ ಗಟ್ಟಿಗೊಳ್ಳುತ್ತಲೇ ಸಾಗಿದೆ. ಇದಕ್ಕೆ ನಿದರ್ಶನ ಇಲ್ಲಿರುವ ಈ ವಿಡಿಯೋ.
ಝೊಮ್ಯಾಟೋದ ಈ ಮಹಿಳಾ ಡೆಲಿವರಿ ಏಜೆಂಟ್ ಕೈಗೂಸನ್ನು ಎತ್ತಿಕೊಂಡೇ ಮನೆಮನೆಗೆ ತೆರಳಿ ಫುಡ್ ಡೆಲಿವರಿ ಮಾಡುತ್ತಿರುವ ಈ ವಿಡಿಯೋ ನೋಡಿದ ಯಾರಿಗೂ ಕರುಳು ಹಿಂಡುವುದಲ್ಲವೆ? ಸುಮಾರು 10 ಲಕ್ಷಕ್ಕೂ ಹೆಚ್ಚು ನೆಟ್ಟಿಗರು ಈ ವಿಡಿಯೋ ಮೆಚ್ಚಿದ್ದಾರೆ. ಸೌರಭ್ ಪಂಜಾನ್ವಿ ಎನ್ನುವ ಫುಡ್ ಬ್ಲಾಗರ್ ಈ ವಿಡಿಯೋ ಚಿತ್ರೀಕರಿಸಿದ್ದಾರೆ. ಅಚ್ಚರಿಗೊಂಡು ನಿತ್ಯದ ಕಾರ್ಯವಿಧಾನದ ಬಗ್ಗೆ ಸೌರಭ್ ಅವಳೊಂದಿಗೆ ಮಾತಿಗಿಳಿದಾಗ, ಹೌದು ನಾನು ಮಗುವನ್ನು ಹೀಗೆ ಕಟ್ಟಿಕೊಂಡೇ ಇಡೀ ದಿನ ಕೆಲಸ ಮಾಡುತ್ತೇನೆ. ಜೊತೆಗೆ ಇನ್ನೊಂದು ಮಗುವೂ ಇದೆ. ಒಟ್ಟಿಗೆ ಕರೆದೊಯ್ಯುತ್ತೇನೆ ಎಂದಿದ್ದಾಳೆ. ಈ ವಿಡಿಯೋ 1 ಮಿಲಿಯನ್ ವೀಕ್ಷಣೆ ಗಳಿಸಿದೆ.
ನೆಟ್ಟಿಗರು ಇವಳ ಸಾಹಸದಿಂದ ಸ್ಫೂರ್ತಿಗೊಂಡು, ‘ಒಬ್ಬ ವ್ಯಕ್ತಿ ಮನಸ್ಸು ಮಾಡಿದರೆ ಏನೂ ಮಾಡಬಹುದು ಎನ್ನುವುದಕ್ಕೆ ಇವರು ಉತ್ತಮ ಉದಾಹರಣೆ. ಇಂಥವರನ್ನು ನೋಡಿ ಕಲಿಯಬೇಕು’ ಎಂದಿದ್ದಾರೆ.
ಈ ವಿಡಿಯೋಗೆ ಪ್ರತಿಕ್ರಿಯಿಸಿದ ಝೊಮ್ಯಾಟೋ, ‘ ಮಕ್ಕಳ ಆರೈಕೆಗೆ ಸಂಬಂಧಿಸಿದ ಸೌಲಭ್ಯಗಳನ್ನು ಒದಗಿಸುವ ಹಿನ್ನೆಲೆಯಲ್ಲಿ ಈ ಮಹಿಳಾ ಡೆಲಿವರಿ ಏಜೆಂಟ್ ಸಂಪರ್ಕ ವಿವರವನ್ನು ಹಂಚಿಕೊಳ್ಳಲು ಕೇಳಿಕೊಂಡಿದೆ.’
ಇಂಥ ಹೆಣ್ಣುಮಕ್ಕಳು ಯಾವಾಗ ನಿರಾಳವಾಗಿ ಉಸಿರಾಡುವರೋ?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 11:51 am, Tue, 23 August 22