Viral News: ನನಗಿಲ್ಲಿ ಹಣ ಮುಖ್ಯವಾಗಿರಲಿಲ್ಲ, ಭ್ರಷ್ಟಾಚಾರದ ವಿರುದ್ಧ ಹೋರಾಡಬೇಕಿತ್ತು
Agra : ಮಥುರಾದ ವ್ಯಕ್ತಿಯೊಬ್ಬರು ರೈಲ್ವೇ ಇಲಾಖೆಯೊಂದಿಗೆ 20 ರೂಪಾಯಿಗಾಗಿ ಮಾಡಿದ ಕಾನೂನು ಹೋರಾಟಕ್ಕೆ 22 ವರ್ಷಗಳ ನಂತರ ಜಯ ಸಂದಿದೆ.
ಆಗ್ರಾ : ತುಂಗನಾಥ ಚತುರ್ವೇದಿ ಎಂಬುವವರು ತಮಗಾದ ಅನ್ಯಾಯದ ವಿರುದ್ಧ 23 ವರ್ಷಗಳ ಹಿಂದೆ ರೈಲ್ವೇ ಇಲಾಖೆ ವಿರುದ್ಧ ದೂರು ಸಲ್ಲಿಸಿದ್ದರು. ಇದೀಗ 20 ರೂಪಾಯಿಗೆ ಶೇ. 12 ರಷ್ಟು ಬಡ್ಡಿಯೊಂದಿಗೆ ಒಂದು ತಿಂಗಳಲ್ಲಿ ಅವರಿಗೆ ಹಣವನ್ನು ಪಾವತಿಸುವಂತೆ ನ್ಯಾಯಾಲಯ ರೈಲ್ವೆ ಇಲಾಖೆಗೆ ಆದೇಶಿಸಿದೆ. ಮುಂದಿನ 30 ದಿನಗಳ ಕಾಲ ಹಣ ಪಾವತಿಸದಿದ್ದರೆ ಬಡ್ಡಿ ದರವನ್ನು ಶೇ.15ಕ್ಕೆ ಪರಿಷ್ಕರಿಸಲಾಗುತ್ತದೆ. ಒಟ್ಟಾರೆಯಾಗಿ ತುಂಗನಾಥ್ ಅವರಿಗೆ ಆರ್ಥಿಕ ನಷ್ಟ, ಮಾನಸಿಕ ಆಯಾಸ, ಮತ್ತು ಪ್ರಕರಣದ ವೆಚ್ಚಕ್ಕಾಗಿ ಹೆಚ್ಚುವರಿಯಾಗಿ ರೂ 15,000 ನೀಡಬೇಕೆಂದು ನ್ಯಾಯಾಲಯ ಆದೇಶಿಸಿದೆ. ಮಾಹಿತಿಯ ಪ್ರಕಾರ, ಪ್ರಕರಣವನ್ನು 25.12.1999 ರಂದು ದಾಖಲಿಸಲಾಗಿತ್ತು.
ತುಂಗನಾಥ್, ‘ನಾನು ಮೊರಾದಾಬಾದ್‌ಗೆ ಟಿಕೆಟ್ ಖರೀದಿಸಲು ಆ ದಿನ ಸ್ನೇಹಿತನೊಂದಿಗೆ ಮಥುರಾ ಕಂಟೋನ್ಮೆಂಟ್ ರೈಲು ನಿಲ್ದಾಣಕ್ಕೆ ಹೋಗಿದ್ದೆ. ಟಿಕೆಟ್ ಕೌಂಟರಿನಲ್ಲಿ ಆ ವ್ಯಕ್ತಿಗೆ 100 ರೂಪಾಯಿ ಕೊಟ್ಟೆ. ಆದರೆ, ಅವರು ರೂ. 70 ಬದಲಿಗೆ ರೂ. 90 ಕಡಿತಗೊಳಿಸಿದರಲ್ಲದೆ ಬಾಕಿ ಮೊತ್ತವನ್ನು ಹಿಂದಿರುಗಿಸಲಿಲ್ಲ. ಈಶಾನ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ (ಗೋರಖ್‌ಪುರ), ಮಥುರಾ ಕಂಟೋನ್ಮೆಂಟ್ ರೈಲು ನಿಲ್ದಾಣದ ಸ್ಟೇಷನ್ ಮಾಸ್ಟರ್ ಮತ್ತು ಟಿಕೆಟ್ ಬುಕ್ಕಿಂಗ್ ಕ್ಲರ್ಕ್ ವಿರುದ್ಧ ಜಿಲ್ಲಾ ಗ್ರಾಹಕ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದೆ. ಈ ಪ್ರಕರಣವನ್ನು ದಾಖಲಿಸಿದ್ದು ರೂ 20ಗೆ ಅಲ್ಲ, ಇದು ಸಾರ್ವಜನಿಕ ಹಿತಾಸಕ್ತಿಯ ಹಿನ್ನೆಲೆಯಲ್ಲಿ’ ಎಂದಿದ್ದಾರೆ.
ತುಂಗನಾಥ ಅವರ ಮಗ ಮತ್ತು ವಕೀಲ ರವಿಕಾಂತ ಚತುರ್ವೇದಿ, ‘120 ಕ್ಕೂ ಹೆಚ್ಚು ವಿಚಾರಣೆಗಳು ನಡೆದ ನಂತರ, ಆಗಸ್ಟ್ 5 ರಂದು ತುಂಗನಾಥ ಅವರ ಪರವಾಗಿ ನ್ಯಾಯಾಲಯವು ತೀರ್ಪು ಪ್ರಕಟಿಸಿತು. ತನ್ನ ವಿರುದ್ಧ ಸಲ್ಲಿಸಿದ ದೂರುಗಳನ್ನು ರೈಲ್ವೇ ಇಲಾಖೆಯು ವಿಶೇಷ ನ್ಯಾಯಾಲಯದ ವಿಚಾರಣೆಗೆ ಉಲ್ಲೇಖಿಸುವ ಜವಾಬ್ದಾರಿ ತೆಗೆದುಕೊಳ್ಳಬೇಕೇ ಹೊರತು ಗ್ರಾಹಕರಲ್ಲ ಎಂದು ಹೇಳಿ ಈ ಪ್ರಕರಣವನ್ನು ವಜಾಗೊಳಿಸಲು ಪ್ರಯತ್ನಿಸಿತು. ಆಗ ಗ್ರಾಹಕ ನ್ಯಾಯಾಲಯಕ್ಕೆ ದೂರು ಸಲ್ಲಿಸಬೇಕಾಯಿತು. ಏತನ್ಮಧ್ಯೆ, ರೈಲ್ವೆ ಅಧಿಕಾರಿಗಳು ನ್ಯಾಯಾಲಯದ ಹೊರಗೆ ಸಮಸ್ಯೆ ಬಗೆಹರಿಸಿಕೊಳ್ಳಲು ನನ್ನ ತಂದೆಯನ್ನು ಸಂಪರ್ಕಿಸಿದರು, ಆದರೆ ತಂದೆ ಅದನ್ನು ಸ್ಪಷ್ಟವಾಗಿ ನಿರಾಕರಿಸಿದರು’ ಎಂದಿದ್ದಾರೆ.
ಆರು ವರ್ಷಗಳಿಂದ ಸಂಧಿವಾತದಿಂದ ಬಳಲುತ್ತಿರುವ ತುಂಗನಾಥ, ‘ಇದು ಸುದೀರ್ಘವಾದ ಕಾನೂನು ಹೋರಾಟವಾಗಿತ್ತು. ರೈಲ್ವೆ ಆಡಳಿತದ ತಪ್ಪನ್ನು ಸಾಬೀತುಪಡಿಸಲು ನಾನು 120 ವಿಚಾರಣೆಗಳಿಗೆ ಹಾಜರಾಗಬೇಕಾಯಿತು. ಈ ಹೋರಾಟದಿಂದ ಹಿಂದೆ ಸರಿಯುವಂತೆ ನನ್ನ ಕುಟುಂಬ ಮತ್ತು ಸ್ನೇಹಿತರು ಸಾಕಷ್ಟು ಸಲ ಪ್ರಯತ್ನಿಸಿದರು. ಇದು ಸಮಯ, ಶ್ರಮ ವ್ಯರ್ಥವೆಂದು ಗೊತ್ತಿದ್ದರೂ ನಾನು ಮುಂದುವರಿಯುತ್ತಲೇ ಇದ್ದೆ. ಇಲ್ಲಿ ಹಣ ಮುಖ್ಯವಾಗಿರಲಿಲ್ಲ ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕೆ ಇದು ಸಂಬಂಧಿಸಿದ್ದಾಗಿತ್ತು’ ಎಂದಿದ್ದಾರೆ.
ಇನ್ನಷ್ಟು ಟ್ರೆಂಡಿಂಗ್ ನ್ಯೂಸ್ ಗಾಗಿ ಕ್ಲಿಕ್ ಮಾಡಿ
Published On - 11:36 am, Fri, 12 August 22