Viral Video: ಮನೆ ಬಳಿ ಕಾಣಿಸಿಕೊಂಡ ನಾಗರಹಾವಿಗೆ ಮಾತಿನಲ್ಲೇ ಸಮಾಧಾನ ಹೇಳಿ ವಾಪಾಸು ಕಳುಹಿಸಿದ ಮಹಿಳೆ

ಕಾಂಪೌಡಿನ ಬಳಿಯಿದ್ದ ಹಾವಿನ ಮರಿಯನ್ನು ನೋಡಿದ ಮಹಿಳೆ ಕೈಯ್ಯಲ್ಲಿ ಚಿಕ್ಕ ಕೋಲೊಂದನ್ನು ಹಿಡಿದು ಹೋಗು, ಹೋಗು ಎಂದು ಸನ್ನೆ ಮಾಡುತ್ತಾ ಸರ್ಪವನ್ನು ಆಚೆಗೆ ಕಳುಹಿಸುವ ದೃಶ್ಯ ಅಕ್ಕಪಕ್ಕದವರ ಮೊಬೈಲ್​ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Viral Video: ಮನೆ ಬಳಿ ಕಾಣಿಸಿಕೊಂಡ ನಾಗರಹಾವಿಗೆ ಮಾತಿನಲ್ಲೇ ಸಮಾಧಾನ ಹೇಳಿ ವಾಪಾಸು ಕಳುಹಿಸಿದ ಮಹಿಳೆ
ನಾಗರ ಹಾವನ್ನು ಆಚೆಗೆ ಕಳುಹಿಸಿದ ಮಹಿಳೆ
Edited By:

Updated on: Sep 12, 2021 | 11:27 AM

ಭಾರತೀಯ ಸಂಸ್ಕೃತಿಯಲ್ಲಿ ಪ್ರಕೃತಿ, ಪರಿಸರ, ಪ್ರಾಣಿ, ಪಕ್ಷಿಗಳೆಲ್ಲವನ್ನೂ ಪೂಜನೀಯ ಸ್ಥಾನದಲ್ಲಿ ನೋಡಲಾಗುತ್ತದೆ. ಅದರಲ್ಲೂ ನಾಗರಹಾವಿಗೆ ಕಲಿಯುಗದ ಪ್ರತ್ಯಕ್ಷ ದೈವ ಎಂಬ ಪಟ್ಟವನ್ನೇ ಕೊಡಲಾಗಿದೆ. ನಾಗರಹಾವನ್ನು ಕಂಡರೆ ದೇವರೆಂದು ಕೈಮುಗಿಯುವುದು ನಮಗೆ ಗೊತ್ತೋ ಗೊತ್ತಿಲ್ಲದೆಯೋ ರೂಢಿಯಾಗಿ ಬಿಟ್ಟಿರುತ್ತದೆ. ಅಷ್ಟೇ ಅಲ್ಲದೇ ಎಲ್ಲಿಯಾದರೂ ನಾಗರ ಹಾವು ಸತ್ತಿರುವುದು ಕಂಡರೆ ಅದಕ್ಕೆ ಶಾಸ್ತ್ರಬದ್ಧವಾಗಿ ಒಂದಷ್ಟು ಕ್ರಿಯೆಗಳನ್ನು ಮಾಡಲಾಗುತ್ತದೆ ಕೂಡಾ. ಹೀಗಾಗಿ ಸಾಧಾರಣವಾಗಿ ಮನೆಯ ಸಮೀಪ ನಾಗರ ಹಾವು ಕಂಡರು ಸಹ ಯಾರೂ ಅದಕ್ಕೆ ನೋವು ಮಾಡದೇ ಭಯ ಭಕ್ತಿಯಿಂದಲೇ ದೂರ ಕಳುಹಿಸುತ್ತಾರೆ.

ಈ ಸಂಗತಿಯನ್ನು ಪುಷ್ಠೀಕರಿಸುವಂತಹ ವಿಡಿಯೋ ಒಂದು ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಪುಟಾಣಿ ಮರಿ ನಾಗರ ಹಾವೊಂದು ಮನೆಯ ಬಳಿ ಬಂದಾಗ ಮಹಿಳೆಯೊಬ್ಬರು ಅದನ್ನು ಆಚೆಗೆ ಕಳುಹಿಸುವ ಪರಿ ಎಲ್ಲರ ಮನಗೆದ್ದಿದೆ. ತಮಿಳುನಾಡಿನ ಕೊಯಂಬತ್ತೂರಿನ ಸಮೀಪ ಈ ಘಟನೆ ನಡೆದಿದ್ದು, ಹಾವಿನ ಮರಿಯನ್ನು ಮೆಲ್ಲಗೆ ಮಾತಾಡಿಸುತ್ತಾ ಆಚೆಗೆ ಕಳುಹಿಸುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕಾಂಪೌಡಿನ ಬಳಿಯಿದ್ದ ಹಾವಿನ ಮರಿಯನ್ನು ನೋಡಿದ ಮಹಿಳೆ ಕೈಯ್ಯಲ್ಲಿ ಚಿಕ್ಕ ಕೋಲೊಂದನ್ನು ಹಿಡಿದು ಹೋಗು, ಹೋಗು ಎಂದು ಸನ್ನೆ ಮಾಡುತ್ತಾ ಸರ್ಪವನ್ನು ಆಚೆಗೆ ಕಳುಹಿಸುವ ದೃಶ್ಯ ಅಕ್ಕಪಕ್ಕದವರ ಮೊಬೈಲ್​ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪುಟಾಣಿ ಸರ್ಪಕ್ಕೆ ನೋವಾಗದಂತೆ ನಿಧಾನಕ್ಕೆ ಕೋಲನ್ನು ಹತ್ತಿರ ತೆಗೆದುಕೊಂಡು ಹೋಗಿ ಆಚೆಗೆ ಹೋಗು ಎಂದು ಮಹಿಳೆ ಹೇಳುವಾಗ ಅವರ ಮಾತನ್ನು ಅರ್ಥ ಮಾಡಿಕೊಂಡವರಂತೆ ವರ್ತಿಸುವ ಹಾವು ನಿಧಾನಕ್ಕೆ ಗೇಟಿನಿಂದ ಆಚೆ ದಾಟಿದೆ.

ಗೇಟಿಂದ ಹೊರ ಬಂದ ಬಳಿಕವೂ ಪುಟಾಣಿ ಹೆಡೆಯನ್ನು ಬಿಚ್ಚಿಕೊಂಡು ಮಹಿಳೆಯನ್ನೇ ದಿಟ್ಟಿಸುತ್ತಾ ಹಿಮ್ಮುಖವಾಗಿ ಚಲಿಸಿದ ಹಾವು ಅಲ್ಲಿಂದ ಹೊರಡುವ ಸೂಚನೆ ನೀಡಿದೆ. ಅದು ಹೆಡೆ ಬಿಚ್ಚಿದಾಗಲೂ ಯಾವುದೇ ಭಯ ವ್ಯಕ್ತಪಡಿಸಿದ ಮಹಿಳೆ ಹೋಗು, ಹೋಗು ಎಂದು ಅದರ ಮುಂದೆಯೇ ನಿಂತು ಹೇಳುವ ದೃಶ್ಯ ಎಲ್ಲರ ಮನಗೆದ್ದಿದೆ. ಪ್ರಾಣಿ ಮತ್ತು ಮನುಷ್ಯರ ನಡುವೆ ಸಂಘರ್ಷ ನಡೆಯುವ ಸುದ್ದಿಯೇ ಹೆಚ್ಚಾಗಿರುವ ಸಂದರ್ಭದಲ್ಲಿ ಇಂಥದ್ದೊಂದು ವಿಡಿಯೋ ಸಹಜವಾಗಿ ಎಲ್ಲರ ಹೃದಯ ತಟ್ಟಿದೆ. ಜತೆಗೆ, ಮಹಿಳೆಯ ಧ್ವನಿಯನ್ನು ಅರ್ಥ ಮಾಡಿಕೊಂಡಂತೆ ಹಾವು ವರ್ತಿಸಿರುವುದನ್ನು ನೋಡಿ ಇದು ನಿಜಕ್ಕೂ ಕಲಿಯುಗದ ದೈವ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ:
Viral Video: ಹಾವು ರಕ್ಷಕನ ಕೌಶಲ್ಯ ನೋಡಿ ಆಶ್ಚರ್ಯಗೊಂಡ ನೆಟ್ಟಿಗರು; ವಿಡಿಯೋ ವೈರಲ್​ 

Viral Video: ಈ ವೃದ್ಧ ಮಹಿಳೆಗೆ ದೈತ್ಯ ಆನೆಯೇ ಮೊಮ್ಮಗ; ಕೈ ತುತ್ತು ತಿನ್ನಿಸುವ ಹೃದಯಸ್ಪರ್ಶಿ ವಿಡಿಯೋ ಸಿಕ್ಕಾಪಟ್ಟೆ ವೈರಲ್

(Woman gently requests cobra to leave her house in Coimbatore video gone viral)