
ಚೆನ್ನಾಗಿ ಓದಿ ಒಂದೊಳ್ಳೆ ಉದ್ಯೋಗ ಗಿಟ್ಟಿಸಿಕೊಂಡು ತಂದೆ ತಾಯಿಯನ್ನು (parents) ಚೆನ್ನಾಗಿ ನೋಡಿಕೊಳ್ಳಬೇಕೆಂಬ ಕನಸು ಪ್ರತಿಯೊಬ್ಬ ಮಕ್ಕಳದ್ದು. ಅವರ ಸಣ್ಣ ಪುಟ್ಟ ಕನಸುಗಳನ್ನು ಈಡೇರಿಸುವ ಸಮಯ ಬಂದ್ರೆ ಅದಕ್ಕಿಂತ ಖುಷಿ ಏನಿದೆ. ಇದಕ್ಕೆ ಸಾಕ್ಷಿಯಾಗಿದೆ ಈ ವಿಡಿಯೋ. ಯುವಕನೊಬ್ಬ ತನ್ನ ತಂದೆ ತಾಯಿಯನ್ನು ಮೊದಲ ಬಾರಿಗೆ ವಿಮಾನದಲ್ಲಿ ಕರೆದೊಯ್ದಿದ್ದಾನೆ. ಈ ಹೃದಯ ಸ್ಪರ್ಶಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದು ನೆಟ್ಟಿಗರ ಗಮನ ಸೆಳೆದಿದೆ.
ಬಾಬಿ (Bobby) ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ತನ್ನ ಕನಸು ಹೆತ್ತವರ ಜತೆಗೆ ಕಳೆದ ಸುಂದರ ಕ್ಷಣ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದ ಶೀರ್ಷಿಕೆಯಲ್ಲಿ, ಕನಸು ನನಸಾಯಿತು. ಮಧ್ಯಮ ವರ್ಗದ ಕುಟುಂಬದಿಂದ ಬಂದ ನನಗೆ, ವಿಮಾನದಲ್ಲಿ ಪ್ರಯಾಣಿಸುವುದು ಯಾವಾಗಲೂ ಒಂದು ಕನಸಿನಂತೆಯೇ ಭಾಸವಾಗುತ್ತಿತ್ತು. ಚಿಕ್ಕವನಿದ್ದಾಗ, ಆಕಾಶದತ್ತ ನೋಡುತ್ತಾ, ಒಂದು ದಿನ, ನನ್ನ ಕುಟುಂಬವನ್ನು ವಿಮಾನದಲ್ಲಿ ಕರೆದೊಯ್ಯುತ್ತೇನೆ ಎಂದು ಮನಸ್ಸಿನಲ್ಲೇ ಅಂದುಕೊಳ್ಳುತ್ತಿದ್ದೆ. ಇಂದು, ಆ ಕನಸು ನನಸಾಗಿದೆ. ನನ್ನ ತಂದೆ ತಾಯಿ ಮೊದಲ ಬಾರಿಗೆ ಈ ಅನುಭವವನ್ನು ಪಡೆಯುವುದನ್ನು ನೋಡುವುದು, ಅವರಲ್ಲಿನ ಉತ್ಸಾಹ ಮತ್ತು ಸಂತೋಷವನ್ನು ಕಣ್ಣಾರೆ ಕಾಣುವುದು. ಇದನ್ನು ವಿವರಿಸಲು ಪದಗಳೇ ಸಾಲಲ್ಲ.
ಇದು ಅವರ ಕನಸೂ ಆಗಿತ್ತು, ಅದನ್ನು ನನಸಾಗಿಸಲು ನನಗೆ ಸಾಧ್ಯವಾಗಿದ್ದಕ್ಕೆ ನನಗೆ ತುಂಬಾ ಸಂತೋಷವಾಗುತ್ತಿದೆ. ಇದು ಕೇವಲ ಒಂದು ವಿಮಾನ ಪ್ರಯಾಣವಲ್ಲ; ಇದೊಂದು ಭಾವನೆ, ನೀಡಿದ ಮಾತನ್ನು ಉಳಿಸಿಕೊಂಡ ಕ್ಷಣ ಹಾಗೂ ಕನಸುಗಳು ನಿಜವಾಗುತ್ತವೆ ಎಂಬುದಕ್ಕೆ ಇದುವೇ ಸಾಕ್ಷಿ. ಒಂದು ಕನಸು ನನಸಾಗಿದೆ, ಇನ್ನೂ ಅನೇಕ ಕನಸುಗಳು ಈಡೇರಬೇಕಿವೆ. ಇದು ಕೇವಲ ಆರಂಭವಷ್ಟೇ ಎಂದು ಭಾವನಾತ್ಮಕವಾಗಿ ಬರೆಯಲಾಗಿದೆ.
ಈ ವಿಡಿಯೋದಲ್ಲಿ ಬಾಲ್ಯದಲ್ಲಿ ಕಂಡ ಕನಸನ್ನು ನನಸು ಮಾಡಿದ ಖುಷಿ ಯುವಕನಿಗಿದೆ. ಈ ಕ್ಲಿಪಿಂಗ್ ನಲ್ಲಿ ತಂದೆ ತಾಯಿ ವಿಮಾನದಲ್ಲಿ ಪ್ರಯಾಣಿಸಿರುವುದು, ಕುಟುಂಬದ ಜತೆಗೆ ಕಳೆದ ಸುಂದರ ಕ್ಷಣಗಳನ್ನು ನೀವಿಲ್ಲಿ ನೋಡಬಹುದು.ಹೆತ್ತವರ ಖುಷಿ ನೋಡಲು ಎರಡು ಕಣ್ಣು ಸಾಲದು
ಇದನ್ನೂ ಓದಿ: ವಿದೇಶಿ ಜೀವನಕ್ಕೆ ಗುಡ್ ಬೈ, ಮಗುವಿನ ಚಿಕಿತ್ಸೆಗಾಗಿ ರಾಪಿಡೋ ಚಾಲಕನಾದ ತಂದೆ
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ನಿಮ್ಮನ್ನು ಮಗನಾಗಿ ಪಡೆದ ಹೆತ್ತವರೇ ಪುಣ್ಯವಂತರು ಎಂದಿದ್ದಾರೆ. ಇನ್ನೊಬ್ಬರು, ಹೆತ್ತವರ ಮೊಗದಲ್ಲಿ ಖುಷಿ ನೋಡಿ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರ, ಈ ದಿನದ ಬೆಸ್ಟ್ ವಿಡಿಯೋ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ