A different cop: ದೆಹಲಿ ಪೊಲೀಸ್ ನಲ್ಲಿ ಮುಖ್ಯಪೇದೆಯಾಗಿ ಕೆಲಸ ಮಾಡುವ ಥಾನ್ ಸಿಂಗ್ ಕೊಳಗೇರಿ ಮಕ್ಕಳಿಗಾಗಿ ಶಾಲೆ ನಡೆಸುತ್ತಾರೆ!

A different cop: ದೆಹಲಿ ಪೊಲೀಸ್ ನಲ್ಲಿ ಮುಖ್ಯಪೇದೆಯಾಗಿ ಕೆಲಸ ಮಾಡುವ ಥಾನ್ ಸಿಂಗ್ ಕೊಳಗೇರಿ ಮಕ್ಕಳಿಗಾಗಿ ಶಾಲೆ ನಡೆಸುತ್ತಾರೆ!

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 01, 2023 | 7:53 AM

ತಮ್ಮ ಶಾಲೆಗೆ ಬರುವ ಮಕ್ಕಳಿಗೆ ಸಮಗ್ರ ಶಿಕ್ಷಣ ಮತ್ತು ಅದಕ್ಕೆ ಪೂರಕವಾದ ವಾತಾವರಣ ಕಲ್ಪಿಸಲು ಥಾನ್ ಸಿಂಗ್ ಭಗೀರಥ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.

ನವದೆಹಲಿ: ಕಳೆದ 7 ವರ್ಷಗಳಿಂದ ದೆಹಲಿಯ ಕೆಂಪು ಕೋಟೆ ಬಳಿ ಕೊಳಗೇರಿಯ (slum area) ಮಕ್ಕಳಿಗಾಗಿ ಒಂದು ಶಾಲೆಯನ್ನು ನಡೆಸುವ ಮೂಲಕ ದೆಹಲಿ ಪೊಲೀಸ್ ಗೆ (Delhi Police) ಸೇರಿದ ಮುಖ್ಯಪೇದೆಯೊಬ್ಬರು ಸರ್ಕಾರಗಳು ಮಾಡಬೇಕಿರುವ ಕೆಲಸವನ್ನು ತಾವು ಮಾಡುತ್ತಿದ್ದಾರೆ. ಇಲ್ಲಿ ವಿದ್ಯಾಭ್ಯಾಸ ಮಾಡುವವರು ಕೂಲಿ ಕಾರ್ಮಿಕರು, ರಿಕ್ಷಾ ಚಾಲಕರು ಮತ್ತು ಇತರ ಚಿಕ್ಕಪುಟ್ಟ ಕೆಲಸ ಮಾಡುತ್ತಾ ಜೀವನ ಸಾಗಿಸುವ ಜನರ ಮಕ್ಕಳು. ಕೇವಲ 4 ಮಕ್ಕಳಿಂದ ಶುರುವಾದ ಶಾಲೆಯಲ್ಲಿ ಈಗ 80 ಮಕ್ಕಳಿದ್ದಾರೆ. ಇಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸುವ ಮಕ್ಕಳು ಮುಂದಿನ ವಿದ್ಯಾಭ್ಯಾಸಕ್ಕಾಗಿ ಇತರ ಶಾಲೆಗಳನ್ನು ಸೇರುತ್ತಾರೆ. ಅಂದಹಾಗೆ, ಈ ಶಾಳೆ ನಡೆಸುತ್ತಿರುವ ಮಹಾನುಭಾವರ ಹೆಸರು ಥಾನ್ ಸಿಂಗ್ (Than Singh).

‘ದೆಹಲಿ ಉತ್ತರವಯದ ಡಿಸಿಪಿ ಸಾಗರ್ ಸಿಂಗ್ ಕಾಲ್ಸಿ ಅವರು ಶಿಕ್ಷಣ ನಿರ್ದೇಶಾನಲಯಕ್ಕೆ ನೀಡಿದ ಶಿಫಾರಸ್ಸು ಪತ್ರದ ನೆರವಿನಿಂದ ನಮ್ಮ ಶಾಲೆಯಲ್ಲಿ ಓದುತ್ತಿದ್ದ 60 ಮಕ್ಕಳಿಗೆ ನಗರದ ಬೇರೆ ಶಾಲೆಗಳಲ್ಲಿ ದಾಖಲಾತಿ ಕೊಡಿಸಿದ್ದೇವೆ. ಆ ಶಾಲೆಗಳಲ್ಲಿ ಅವರೆಲ್ಲ ಈಗಾಗಲೇ ಒಂದು ವರ್ಷದ ವಿದ್ಯಾಭ್ಯಾಸ ಪೂರೈಸಿದ್ದಾರೆ. ಏಳನೇ ತರಗತಿಯಲ್ಲಿದ್ದವರು 8ನೇ ತರಗತಿಗೆ ಹೋಗಿದ್ದಾರೆ. ನಮ್ಮ ಶಾಲೆಯ ಮಕ್ಕಳು ಉತ್ತಮ ಸಾಧನೆ ಮಾಡಿದ್ದಾರೆ ಅಂತ ಹೇಳಲು ಖುಷಿಯಾಗುತ್ತದೆ. ಫಲಿತಾಂಶದ ನನ್ನನ್ನು ಶಾಲೆಗೆ ಕರೆಸಲಾಗಿತ್ತು, ನಮ್ಮ ಹುಡುಗನೊಬ್ಬ 85% ಅಂಕಗಳನ್ನು ಪಡೆದಿದ್ದಾನೆ,’ ಎಂದು ಥಾನ್ ಸಿಂಗ್ ಹೇಳುತ್ತಾರೆ.

ಇದನ್ನೂ ಓದಿ: IPL 2023 Live Streaming GT vs CSK: ಹಾಟ್​ಸ್ಟಾರ್​ನಲ್ಲಿ ಇರಲ್ಲ ಐಪಿಎಲ್ 2023: ಗುಜರಾತ್-ಚೆನ್ನೈ ಪಂದ್ಯ ಹೇಗೆ ವೀಕ್ಷಿಸುವುದು?

ಇಂಥ ಅವಕಾಶಹೀನ ಪರಿಸರಗಳಲ್ಲಿ ಬೆಳೆದು ಈಗ ಕಾಲೇಜುಗಳಲ್ಲಿ ಓದುತ್ತಿರುವ ಯುವ ವಿದ್ಯಾರ್ಥಿಗಳು ತಾವಾಗಿಯೇ ಮುಂದೆ ಥಾನ್ ಸಿಂಗ್ ಅವರ ಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗೆ ಪಾಠ ಮಾಡುತ್ತಾರೆ.

‘ಆರಂಭದಿಂದ ಅಂದರೆ ಕಳೆದ 7 ವರ್ಷಗಳಿಂದ ನಾನು ಇಲ್ಲಿನ ಮಕ್ಕಳಿಗೆ ಪಾಠ ಮಾಡುತ್ತಿದ್ದೇವೆ, ನನ್ನ ಅನುಭವದ ಬಗ್ಗೆ ಹೇಳುವುದಾದರೆ ಅದು ಅದ್ಭುತ! ಯಾಕೆಂದರೆ ಇಲ್ಲಿನ ಮಕ್ಕಳೊಂದಿಗೆ ಅತ್ಯುತ್ತಮ ಬಾಂಧವ್ಯ ಹೊಂದಿದ್ದೇನೆ. ನಾನು ಕೂಡ ಇಂಥ ಪರಿಸರದಲ್ಲೇ ಬೆಳೆದಿರುವದರಿಂದ ಈ ಮಕ್ಕಳಿಗೆ ಪಾಠ ಮಾಡುವುದು ಬಹಳ ಖುಷಿ ನೀಡುತ್ತದೆ. ಅವರ ಪರಿಸ್ಥಿತಿಯನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ,’ ಎಂದು ಅಂಕಿತಾ ಶರ್ಮ ಹೆಸರಿನ ವಲಂಟೀರ್ ಹೇಳುತ್ತಾರೆ.

‘ನನ್ನ ಅನುಭವವೂ ರೋಚಕವಾಗಿದೆ. ಈ ಮಕ್ಕಳು ನಿಜಕ್ಕೂ ಪ್ರತಿಭಾವಂತರು. ಮೊದಲು ನಾನು ಟ್ಯೂಷನ್ ನೀಡುತ್ತಿದ್ದೆ, ಆದರೆ ಆ ಮಕ್ಕಳಲ್ಲಿ ಕಾಣದ ಏಕಾಗ್ರತೆ, ಬದ್ಧತೆಯನ್ನು ಈ ಮಕ್ಕಳಲ್ಲಿ ನಾನು ಕಾಣುತ್ತೇನೆ,’ ಎಂದು ತಾನ್ಯಾ ಹೆಸರಿನ ಇನ್ನೊಬ್ಬ ವಲಂಟೀರ್ ಹೇಳುತ್ತಾರೆ.

ತಮ್ಮ ಶಾಲೆಗೆ ಬರುವ ಮಕ್ಕಳಿಗೆ ಸಮಗ್ರ ಶಿಕ್ಷಣ ಮತ್ತು ಅದಕ್ಕೆ ಪೂರಕವಾದ ವಾತಾವರಣ ಕಲ್ಪಿಸಲು ಥಾನ್ ಸಿಂಗ್ ಭಗೀರಥ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.

‘ಮನರಂಜನೆ, ಕ್ರೀಡೆ ಮೊದಲಾದ ಸೌಲಭ್ಯಗಳನ್ನು ನಾವು ಮಕ್ಕಳಿಗೆ ಕಲ್ಪಿಸುತ್ತಿದ್ದೇವೆ. ಹೆಣ್ಣು ಮಕ್ಕಳಿಗೆ ಗುಡ್ ಟಚ್ ಮತ್ತು ಬ್ಯಾಡ್ ಟಚ್ ನಡುವಿನ ವ್ಯತ್ಯಾಸ ತಿಳಿ ಹೇಳುತ್ತಿದ್ದೇವೆ. ಬೀದಿ ನಾಟಕಗಳನ್ನು ಅವರಿಂದ ಆಡಿಸುತ್ತೇವೆ. ಬೇರೆ ಬೇರೆ ಸಮುದಾಯಗಳಿ ನಮ್ಮ ನೆರವಿಗೆ ಬರುತ್ತಿವೆ. ಗುರುದ್ವಾರ ಸಿಸ್ ಗಂಜ್ ಸಾಹಿಬ್ ನವರು ಮಕ್ಕಳಿಗೆ ಊಟದ ವ್ಯವಸ್ಥೆ ಮಾಡುವ ಜೊತೆಗೆ ಕಂಪ್ಯೂಟರ್ ಗಳನ್ನು ಒದಗಿಸುತ್ತಾರೆ. ಇಲ್ಲಿಗೆ ಬರುವ ಎಲ್ಲರಿಗೂ ಸ್ವಾಗತವಿದೆ. ಈ ಶಾಲೆ ಎಲ್ಲರಿಗಾಗಿ,’ ಎಂದು ಥಾನ್ ಸಿಂಗ್ ಹೆಮ್ಮೆಯಿಂದ ಹೇಳುತ್ತಾರೆ.

ಇದನ್ನೂ ಓದಿ: Goa Resort: ಗೋವಾದ ರೆಸಾರ್ಟ್​ನಲ್ಲಿ ಸಿಬ್ಬಂದಿಯಿಂದ ವಿದೇಶಿ ಮಹಿಳೆಗೆ ಕಿರುಕುಳ, ಚಾಕು ಇರಿತ

‘ಇದು ನಿಜಕ್ಕೂ ಒಂದು ಮಹಾನ್ ಶಾಲೆ. ನಮಗಿಲ್ಲಿ ಉತ್ತಮ ಶಿಕ್ಷಣ ನೀಡಲಾಗುತ್ತಿದೆ. ನಾವು ಆಟಗಳನ್ನಾಡುತ್ತೇವೆ, ಡ್ಯಾನ್ಸ್ ಮಾಡುತ್ತೇವೆ. ಇಲ್ಲಿನ ಪ್ರತಿಕ್ಷಣ ನಮಗೆ ಸಂತಸದ ಸಮಯ. ನಮ್ಮ ಅಂಕಲ್ (ಥಾನ್ ಸಿಂಗ್) ಬಹಳ ಒಳ್ಳೆಯವರು, ನಮಗೆ ಎಲ್ಲವನ್ನು ಅವರು ಒದಗಿಸಿದ್ದಾರೆ,’ ಎಂದು ಸಾಕ್ಷಿ ಹೆಸರಿನ ವಿದ್ಯಾರ್ಥಿನಿ ಹೇಳುತ್ತಾಳೆ.

‘ ಸರ್, ಖುದ್ದು ನಾನು ಕೊಳಗೇರಿಯಲ್ಲಿ ಬೆಳೆದವನು, ಜೆಜೆ ಕಾಲೊನಿಯಲ್ಲಿ ದೊಡ್ಡವನಾದವನು. ಬಡತನ ಏನು ಅಂತ ನನಗೆ ಚೆನ್ನಾಗಿ ಗೊತ್ತು. ಅದನ್ನೇ ನಾನು ಮಕ್ಕಳಿಗೆ ಹೇಳುತ್ತೇನೆ. ಸ್ಲಂ ಪ್ರದೇಶದಲ್ಲಿ ಹುಟ್ಟಿ ಬೆಳೆದ ನಾನು ದೆಹಲಿ ಪೊಲೀಸ್ ನಲ್ಲಿ ಸೇವೆ ಸಲ್ಲಿಸುವ ಯೋಗ್ಯತೆ ಗಿಟ್ಟಿಸಬಹದಾದರೆ ನಿಮ್ಮಿಂದ ಯಾಕಾಗಲಾರದು? ಈ ಮಕ್ಕಳನ್ನು ಅಪರಾದ ಜಗತ್ತನಿಂದ ದೂರ ಇಡುವುದು ನಮ್ಮ ಉದ್ದೇಶವಾಗಿದೆ,’ ಎಂದು ಥಾನ್ ಸಿಂಗ್ ಹೇಳುತ್ತಾರೆ.

ತಮ್ಮ ಸಹೋದ್ಯೋಗಿ ಮತ್ತು ಹಿರಿಯ ಅಧಿಕಾರಿಗಳು ಸಂಪೂರ್ಣ ಬೆಂಬಲ ನೀಡುತ್ತಾರೆ, ಶಾಲೆ ನಡೆಸುವುದನನ್ನು ಮುಂದುವರಿಸಲು ಪ್ರೋತ್ಸಾಹಿಸುತ್ತಾರೆ ಎಂದು ಥಾನ್ ಸಿಂಗ್ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ