ಹನುಮನ ಭಕ್ತ ಶಂಸುದ್ದೀನ್ ಹಿಂದೂ ಮತ್ತು ಮುಸ್ಲಿಂ ಸಮುದಾಯದ ಜನ ಪ್ರೀತಿ, ಸೌಹಾರ್ದತೆಯಿಂದ ಜೀವಿಸಲಿ ಅನ್ನುತ್ತಾರೆ
ಎರಡೂ ಸಮುದಾಯಗಳ ಜನ ಕೂತು ಚರ್ಚಿಸಿದರೆ ಸಮಸ್ಯೆಗಳು ಬಗೆಹರಿದುಬಿಡುತ್ತವೆ. ಆದರೆ ವೃಥಾ ಕಾರಣ ಅವುಗಳನ್ನು ವಿವಾದಗಳನ್ನಾಗಿ ಮಾಡಲಾಗಿದೆ. ಈ ವಿವಾದಗಳು ಮಕ್ಕಳ ಮೇಲೆ ಬಹಳ ಕೆಟ್ಟ ಪರಿಣಾಮ ಬೀರುತ್ತಿವೆ, ಎಂದು ಶಂಸುದ್ದೀನ್ ಹೇಳುತ್ತಾರೆ.
ಕೊಪ್ಪಳ: ಈ ವಿಡಿಯೋವನ್ನು ಸೂಕ್ಷ್ಮವಾಗಿ ಅವಲೋಕಿಸಿ ಮಾರಾಯ್ರೇ. ಮಾತಾಡುತ್ತಿರುವ ವ್ಯಕ್ತಿಯ ಹೆಸರು ಶಂಸುದ್ದೀನ್ (Shamsuddin) ಮತ್ತು ಅವರು ಕೊಪ್ಪಳದವರು (Koppal). ತಮ್ಮ ಮನೇಲಿ ಶಂಸುದ್ದೀನ್ ಈ ವಿಡಿಯೋ ಶೂಟ್ ಮಾಡಿದ್ದಾರೆ. ಅವರ ಹಿಂಭಾಗದಲ್ಲಿ ನಿಮಗೆ ಹನುಮಾನನ (Hanuman) ಫೋಟೋ ಕಾಣುತ್ತದೆ. ಅದ್ಹೇಗೆ ಅಂತ ನಿಮಗೆ ಆಶ್ಚರ್ಯವಾಗಬಹುದು. ಅಸಲು ಸಂಗತಿಯೇನೆಂದರೆ, ಶಂಸುದ್ದೀನ್ ಹನುಮಾನನ ಭಕ್ತರು! ಅವರು ಮಾತ್ರ ಅಲ್ಲ, ಅವರ ತಂದೆ ಮತ್ತು ತಾತ ಸಹ ಹನುಮಾನ ದೇವರಿಗೆ ನಡೆದುಕೊಳ್ಳುತ್ತಿದ್ದರು. ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ ಎಂದು ಅವರು ಹೇಳುತ್ತಾರೆ. ನಮ್ಮ ಊರಲ್ಲಿ, ನಮ್ಮ ಭಾಗದಲ್ಲಿ ಹಿಂದೂ-ಮುಸಲ್ಮಾನರು ಅಣ್ಣ ತಮ್ಮಂದಿರ ಹಾಗೆ ಜೀವನ ನಡೆಸುತ್ತಿದ್ದಾರೆ, ಅವರ ಹಬ್ಬಗಳನ್ನು ನಾವು ಮಾಡುತ್ತೇವೆ, ನಮ್ಮ ಹಬ್ಬಗಳಿಗೆ ಹಿಂದೂಗಳು ಬಂದು ಊಟ ಮಾಡಿಹೋಗುತ್ತಾರೆ. ನಮ್ಮಲ್ಲಿ ಒಂದಿಷ್ಟೂ ಭೇದಭಾವವಿಲ್ಲ, ಮುಂದೆಯೂ ನಾವು ಹೀಗೆಯೇ ಸಹಜೀವನ ನಡೆಸುತ್ತೇವೆ ಎಂದು ಶಂಸುದ್ದೀನ್ ಹೇಳುತ್ತಾರೆ.
ಯಾರೋ ಒಂದಷ್ಟು ಜನರ ಕೃತ್ಯಗಳಿಂದ ಇಡೀ ಸಮುದಾಯಗಳಿಗೆ ಕೆಟ್ಟ ಹೆಸರು ಬರುತ್ತದೆ. ಹಿಜಾಬ್, ಅಜಾನ್, ಹಲಾಲ್ ಕಟ್, ದೇವಸ್ಥಾನಗಳ ಆವರಣ ಮತ್ತು ಜಾತ್ರೆಗಳಲ್ಲಿ ಮುಸಲ್ಮಾನರು ವ್ಯಾಪಾರ ಮಾಡದಂತೆ ನಿಷೇಧ ಇವೆಲ್ಲ ಗೊಂದಲ ಸೃಷ್ಟಿಸುವ ವಿಷಯಗಳೇ ಅಲ್ಲ. ಎರಡೂ ಸಮುದಾಯಗಳ ಜನ ಕೂತು ಚರ್ಚಿಸಿದರೆ ಸಮಸ್ಯೆಗಳು ಬಗೆಹರಿದುಬಿಡುತ್ತವೆ. ಆದರೆ ವೃಥಾ ಕಾರಣ ಅವುಗಳನ್ನು ವಿವಾದಗಳನ್ನಾಗಿ ಮಾಡಲಾಗಿದೆ. ಈ ವಿವಾದಗಳು ಮಕ್ಕಳ ಮೇಲೆ ಬಹಳ ಕೆಟ್ಟ ಪರಿಣಾಮ ಬೀರುತ್ತಿವೆ, ಎಂದು ಶಂಸುದ್ದೀನ್ ಹೇಳುತ್ತಾರೆ.
ನಾವ್ಯಾರೂ ಈ ವಿಷಯಗಳನ್ನು ದೊಡ್ಡದನ್ನಾಗಿ ಮಾಡೋದು ಬೇಡ. ಕನ್ನಡನಾಡು ಶಾಂತಿ ಸೌಹಾರ್ದತೆಗಳಿಗೆ ಹೆಸರಾಗಿರುವ ನಾಡು. ನಾವೆಲ್ಲ ಇಲ್ಲೇ ಹುಟ್ಟಿದ್ದೇವೆ ಮತ್ತು ಸಾಯುವುದು ಸಹ ಇಲ್ಲೇ. ಹಾಗಾಗಿ, ಮೊದಲು ಹೇಗೆ ನಮ್ಮಲ್ಲಿ ಭ್ರಾತೃತ್ವದ ಭಾವನೆ ಇತ್ತೋ ಅದನ್ನೇ ಮುಂದುವರಿಸಿಕೊಂಡು ಹೋಗೋಣ ಎಂದು ಕೈ ಮುಗಿದು ಕೇಳಿಕೊಳ್ಳುತ್ತೇನೆ, ಭಗವಾನ್ ಆಂಜನೇಯ ಎಲ್ಲರಿಗೂ ಸದ್ಬುದ್ಧಿಯನ್ನು ಕೊಡಲಿ ಎಂಬ ಪ್ರಾರ್ಥನೆಯೊಂದಿಗೆ ಕಳಕಳಿಯ ಮನವಿ ಮಾಡುತ್ತೇನೆ ಎಂದು ಶಂಸುದ್ದೀನ್ ಹೇಳುತ್ತಾರೆ.
ಇದನ್ನೂ ಓದಿ: ಅಜಾನ್ ಶತಮಾನಗಳಿಂದ ನಡೆದುಕೊಂಡು ಬಂದಿರುವ ಪದ್ಧತಿಯಾಗಿದೆ, ರೇಣುಕಾಚಾರ್ಯ ಒಬ್ಬ ಮತಾಂಧ: ಸಿದ್ದರಾಮಯ್ಯ