ಕಾರವಾರ: ಮಾವಿನಕುರ್ವೆ ಬಂದರು ಬಳಿ ಬಂಡೆಗೆ ಢಿಕ್ಕಿ ದೋಣಿ ಮುಳುಗಡೆ, ಅದರಲ್ಲಿದ್ದ 7 ಮೀನುಗಾರರು ಸುರಕ್ಷಿತ
ಮುಳುಗಡೆಯಾದ ದೋಣಿಯು ದೀಕ್ಷಿತ್ ಕೋಟ್ಯಾನ್ ಹೆಸರಿನ ವ್ಯಕ್ತಿಯದಾಗಿತ್ತು. ಸಿಹಾನ್ ಫಿಶರೀಸ್ ದೋಣಿ ಮೀನು ಹಿಡಿಯಲು ಅರಬ್ಬೀ ಸಮುದ್ರಕ್ಕಿಳಿದಿತ್ತು ಮತ್ತು ಮಾರ್ಚ್ 4 ಬೆಳಗಿನ ಜಾವ ದಡಕ್ಕೆ ಹಿಂತಿರುಗುವಾದ ಬಂಡೆಗೆ ಬಲವಾಗಿ ಢಿಕ್ಕಿ ಹೊಡೆದಿದೆ.
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಮಾವಿನಕುರ್ವೆ ದೀಪಸ್ತಂಭದ (Mavinkurve port) ಹತ್ತಿರ ಮೀನುಗಾರರ ಬೋಟ್ ಅರಬ್ಬೀ ಸಮುದ್ರದ ತಳಭಾಗದಲ್ಲಿದ್ದ ಬಂಡೆಗೆ (rock) ಢಿಕ್ಕಿ ಹೊಡೆದು ಮುಳುಗಡೆಯಾಗುತ್ತಿರುವ ದೃಶ್ಯ ಸೆರೆಯಾಗಿದೆ. ಆದರೆ ಸಮಾಧಾನಕರ ಸಂಗತಿಯೆಂದರೆ ದೋಣಿಯಲ್ಲಿದ್ದ ಮೀನುಗಾರರರನ್ನು ಜೈ ಶ್ರೀರಾಮ್ ಬೋಟ್ (Jai Sriram boat) ನಲ್ಲಿದ್ದವರು ರಕ್ಷಿಸಿ ಸುರಕ್ಷಿತವಾಗಿ ದಡ ತಲುಪಿಸಿದ್ದಾರೆ. ಅಂದಹಾಗೆ ದುರಂತಕ್ಕೀಡಾದ ಸದರಿ ದೋಣಿಯ ಹೆಸರು ಸಿಹಾನ್ ಫಿಶರೀಸ್ (Sihan Fisheries). ದೋಣಿ ಮುಳುಗಿದ್ದರಿಂದ ಅದರ ಕಿಮ್ಮತ್ತು ಸೇರಿ ಅದರಲ್ಲಿದ್ದ ಸುಮಾರು 80 ಲಕ್ಷ ರೂ. ಬೆಲೆ ಬಾಳುವ ವಸ್ತುಗಳು ಅರಬ್ಬೀ ಸಮುದ್ರದ ಪಾಲಾಗಿವೆ.
ಬಂದರು ಇಲ್ಲವೇ ಸಮುದ್ರ ತೀರದ ಹತ್ತಿರ ಇಂಥ ದುರಂತಗಳು ಆಗಾಗ ಸಂಭವಿಸುತ್ತಿರುತ್ತವೆ. ನಮಗೆ ಲಭ್ಯವಾಗಿರುವ ಮಾಹಿತಿಯಂತೆ ಭಟ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂಲಗಳ ಪ್ರಕಾರ ಮುಳುಗಡೆಯಾದ ದೋಣಿಯು ದೀಕ್ಷಿತ್ ಕೋಟ್ಯಾನ್ ಹೆಸರಿನ ವ್ಯಕ್ತಿಯದಾಗಿತ್ತು. ಸಿಹಾನ್ ಫಿಶರೀಸ್ ದೋಣಿ ಮೀನು ಹಿಡಿಯಲು ಅರಬ್ಬೀ ಸಮುದ್ರಕ್ಕಿಳಿದಿತ್ತು ಮತ್ತು ಮಾರ್ಚ್ 4 ಬೆಳಗಿನ ಜಾವ ದಡಕ್ಕೆ ಹಿಂತಿರುಗುವಾದ ಬಂಡೆಗೆ ಬಲವಾಗಿ ಢಿಕ್ಕಿ ಹೊಡೆದಿದೆ.
ಢಿಕ್ಕಿಯ ರಭಸಕ್ಕೆ ದೋಣಿಯ ಕೆಳಭಾಗ ಸೀಳಿ ಅದರಲ್ಲಿ ನೀರು ತುಂಬಿಕೊಳ್ಳಲಾರಂಭಿಸಿದ್ದರಿಂದ ಕ್ರಮೇಣ ಮುಳುಗಲಾರಂಭಿಸಿದೆ. ಅದರ ಸುತ್ತಮುತ್ತ ಇದ್ದ ದೋಣಿಗಳು ಕೂಡಲೇ ಸಹಾಯಕ್ಕೆ ಧಾವಿಸಿವೆ. ಹಾಗಾಗೇ ಸಿಹಾನ್ ಫಿಶರೀಸ್ ದೋಣಿಯಲ್ಲಿದ್ದ 7 ಮೀನುಗಾರರ ಪ್ರಾಣ ಉಳಿದಿದೆ.