ಸಕಲೇಶಪುರ ಕಾಡಂಚಿನಲ್ಲಿ ನಿಂತು ರಸ್ತೆ ಮೇಲೆ ಸಂಚರಿಸುವ ವಾಹನ ಮತ್ತು ಜನರನ್ನು ಗುರಾಯಿಸುತ್ತಿದೆ ಒಂಟಿ ಸಲಗ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 23, 2022 | 1:28 AM

ಕಾಡಾನೆ ಹಾವಳಿ ಪದೇಪದೆ ಆಗುತ್ತಿದೆ ಎಂದು ಸುತ್ತಮುತ್ತಲಿನ ಊರುಗಳಲ್ಲಿ ವಾಸಿಸುವ ಜನ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸರ್ಕಾರದ ಗಮನಕ್ಕೆ ತಂದರೂ ಇದುವರೆಗೆ ಯಾವುದೇ ಕ್ರಮ ತೆಗೆದುಕೊಳ್ಳಲಾಗಿಲ್ಲ ಎಂದು ಜನ ದೂರುತ್ತಿದ್ದಾರೆ.

ಸಕಲೇಶಪುರ: ಕಾರಿನಲ್ಲಿ ಪ್ರಯಾಣಿಸುತ್ತಾ ಮಾಡಿರುವ ಈ ವಿಡಿಯೋ ರಾಷ್ಟ್ರೀಯ ಹೆದ್ದಾರಿ (National Highway) ಮತ್ತು ಕಾಡಿನ (forest) ನಡುವೆ ಅಡ್ಡಗೋಡೆ ಇರದೆ ಹೋಗಿದ್ದರೆ, ಪ್ರಾಯಶಃ ಶೂಟ್ ಮಾಡುವುದು ಸಾಧ್ಯವಾಗುತ್ತಿರಲಿಲ್ಲ. ಮದವೇರಿದ ಕಾಡಾನೆಯೊಂದು (wild elephant) ರಸ್ತೆ ನಡುವೆ ಬಂದು ನಿಂತುಬಿಟ್ಟರೆ ವಿಡಿಯೋ ಮಾಡುವ ಮಾತು ಹಾಗಿರಲಿ, ನಮ್ಮ ಮೊದಲ ಲಕ್ಷ್ಯ ಅಲ್ಲಿಂದ ಓಡಿ ಪ್ರಾಣ ರಕ್ಷಿಸಿಕೊಳ್ಳುವುದಾಗಿರುತ್ತದೆ. ಅಂದಹಾಗೆ, ಈ ವಿಡಿಯೋವನ್ನು ಸಕಲೇಶಪುರ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸುವಾಗ ಶೂಟ್ ಮಾಡಲಾಗಿದೆ. ರಸ್ತೆಗೆ ಹೊಂದಿಕೊಂಡಂತೆಯೇ ಕಾಡಿದೆ ಮತ್ತು ಈ ಒಂಟಿ ಸಲಗ ಅದರ ಅಂಚಿಗೆ ಬಂದು ನಡೆದಾಡುತ್ತಿದೆ. ಅದರ ಉದ್ದೇಶ ಕಾಡಿನಿಂದ ಆಚೆ ಬರುವುದಾಗಿರಬಹುದು. ಸಾಮಾನ್ಯವಾಗಿ ಒಂಟಿ ಸಲಗಗಳು ಹೀಗೆ ಸಂಗಾತಿಯನ್ನು ಅರಸಿ ಹೀಗೆ ಗುಂಪಿನಿಂದ ಪ್ರತ್ಯೇಕಗೊಳ್ಳುತ್ತುವಂತೆ. ಅದು ಯಾಕೆ ಅಂತ ನಿಮಗೆ ಗೊತ್ತಿದೆ.

ಆನೆಗಳ ಹಿಂಡಿನಲ್ಲೂ ಒಂದು ಹಿರಿಯ ಸಲಗ ನೇತೃತ್ವ ವಹಿಸಿಕೊಂಡಿರುತ್ತದೆ. ಗುಂಪಿನಲ್ಲಿರುವ ಹೆಣ್ಣಾನೆಗಳು ನಾಯಕನಿಗೆ ಮಾತ್ರ ನಿಷ್ಠರಾಗಿರಬೇಕು. ಹಿಂಡಿನ ಬೇರೆ ಯುವ ಗಂಡಾನೆಗಳಿಗೆ ಹೆಣ್ಣಾನೆಗಳ ಸಾಂಗತ್ಯ ದಕ್ಕುವುದಿಲ್ಲ. ಲೀಡರ್ ಸತ್ತ ಮೇಲೆ ಇಲ್ಲವೇ ಅದರ ಪ್ರಾಯ ಕಳೆದು ಓಡಾಡಲು ಸಹ ಶಕ್ತಿ ಇಲ್ಲದಂಥ ಸ್ಥಿತಿ ತಲುಪಿದಾಗ ಮಾತ್ರ ಬೇರೊಂದು ಯುವ ಮತ್ತು ಬಲಿಷ್ಠ ಅನೆ ನೇತೃತ್ವ ವಹಿಸಿಕೊಂಡು ಹೆಣ್ಣಾನೆಗಳ ಸಖ್ಯ ಪಡೆಯುತ್ತದೆ. ಕಾಮಾತುರಗೊಳ್ಳುವ ಇತರ ಯುವ ಆನೆಗಳು ಬೇರೆ ಎಲ್ಲಾದರೂ ಹೆಣ್ಣಾನೆ ಸಿಕ್ಕೀತು ಎಂಬ ಆಸೆಯೊಂದಿಗೆ ಹೀಗೆ ಒಂಟಿಯಾಗಿ ಓಡಾಡುತ್ತಿರುತ್ತವಂತೆ.

ಈ ಶಿರಾಡಿ ಘಾಟ್ ರಸ್ತೆ ಪಕ್ಕ ಕೆಂಪುಹೊಳೆ ಬಳಿ ಹೀಗೆ ಒಂಟಿಯಾಗಿ ಓಡಾಡುತ್ತಿರುವ ಸಲಗವೂ ಪ್ರಾಯಶಃ ಸಂಗಾತಿಯೊಂದನ್ನು ಅರಸುತ್ತಿರಬಹುದು. ಕಾಡಾನೆ ಹಾವಳಿ ಪದೇಪದೆ ಆಗುತ್ತಿದೆ ಎಂದು ಸುತ್ತಮುತ್ತಲಿನ ಊರುಗಳಲ್ಲಿ ವಾಸಿಸುವ ಜನ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸರ್ಕಾರದ ಗಮನಕ್ಕೆ ತಂದರೂ ಇದುವರೆಗೆ ಯಾವುದೇ ಕ್ರಮ ತೆಗೆದುಕೊಳ್ಳಲಾಗಿಲ್ಲ ಎಂದು ಜನ ದೂರುತ್ತಿದ್ದಾರೆ.

ಇದನ್ನೂ ಓದಿ:   ಗೂಡಿಗೆ ನುಗ್ಗಿದ ಕರಡಿಯೊಂದಿಗೆ ಕಾದಾಟಕ್ಕಿಳಿದ ಹಂದಿಗಳು: ವಿಡಿಯೋ ವೈರಲ್​

Published on: Mar 22, 2022 06:27 PM