ಅಫಘಾನಿಸ್ತಾನವನ್ನು ವಶಪಡಿಸಿಕೊಂಡಿರುವ ತಾಲಿಬಾನ್​ಗೆ ಈಶಾನ್ಯ ಪ್ರಾಂತ್ಯ ಪಂಜಶೀರ್ ನಿಯಂತ್ರಣಕ್ಕೆ ತೆಗೆದುಕೊಳ್ಳುವುದು ಸುಲಭವಾಗದು!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 23, 2021 | 4:26 PM

ಅಹ್ಮದ್ ಶಾ ಮಸ್ಸೂದ್ ಹುಟ್ಟುಹಾಕಿದ ನಾರ್ದರ್ನ್ ಅಲೈಯನ್ಸ್ ತಾಲಿಬಾನಿಗಳಿಗೆ ಸಿಂಹಸ್ವಪ್ನವಾಗಿತ್ತು. ಯಾರಿಗೂ ಹೆದರದ ತಾಲಿಬಾನಿಗಳು ತಜಾಕ್ ಮತ್ತು ಹಜಾರಾ ಹೆಸರಿನ ಪರಾಕ್ರಮಿ ಸಮುದಾಯಗಳ ಜನರನ್ನೊಳಗಗೊಂಡ ಪಂಜಶೀರ್ ಮುಂದೆ ಕುರಿಗಳಾಗುತ್ತಾರೆ.

ತಾಲಿಬಾನಿಗಳು ಅಫಘಾನಿಸ್ತಾನವನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಅಟ್ಟಹಾಸ ಮೆರೆಯುತ್ತಿರಬಹುದು, ಆದರೆ ಅವರು ಇನ್ನೂ ಅಫಘಾನಿಸ್ತಾನದ ಈಶಾನ್ಯ ಭಾಗಕ್ಕಿರುವ ಪಂಜಶೀರ್ ಪ್ರಾಂತ್ಯದ ಕಡೆ ತಲೆ ಹಾಕಿಲ್ಲ. ಸುಮಾರು ಎರಡು ಲಕ್ಷ ಜನಸಂಖ್ಯೆಯ ಈ ಪ್ರಾಂತ್ಯದ ಜನರನ್ನು ತಡವಿಕೊಳ್ಳುವುದು ಅಪಾಯಕ್ಕೆ ಆಹ್ವಾನವಿತ್ತಂತೆ ಎಂದು ತಾಲಿಬಾನಿಗಳಿಗೆ ಚೆನ್ನಾಗಿ ಗೊತ್ತಿದೆ. ಪಂಜಶೀರ್ ನಿಸ್ಸಂದೇಹವಾಗಿ ಪರಾಕ್ರಮಿ ಯುದ್ಧವೀರರ ನಾಡು. ಅಹ್ಮದ್ ಶಾ ಮಸ್ಸೂದ್ ನೇತೃತ್ವದಲ್ಲಿ ಪಂಜಶೀರ್ ಜನ 80ರ ದಶಕದಲ್ಲಿ ರಷ್ಯನ್ನರನ್ನು ಮತ್ತು 90 ದಶಕಗಳಲ್ಲಿ ತಾಲಿಬಾನಿಗಳನ್ನು ಬಗ್ಗು ಬಡಿದಿದ್ದರು. ತಾಲಿಬಾನಿಗಳು ಯಾವುದೇ ವಿರೋಧವಿಲ್ಲದೆ ಆಫಘಾನಿಸ್ತಾನವನ್ನು ವಶಪಡಿಸಿಕೊಂಡಿದ್ದರೂ ಅವರಿಗೆ ಪ್ರಬಲ ವಿರೋಧ ಪಂಜಶೀರ್ ಪ್ರಾಂತ್ಯದಲ್ಲಿ ಎದುರಾಗಲಿದೆ.

ಪಂಜಶೀರ್ ಸಿಂಹ ಎಂದೇ ಖ್ಯಾತರಾಗಿದ್ದ ಅಹ್ಮದ್  ಶಾ ಮಸೂದ್ ಅವರ ಮಗ ಅಹ್ಮದ್ ಮಸ್ಸೂದ್, ಅವರ ಸಹೋದರ ಅಹ್ಮದ್ ವಲಿ ಮಸ್ಸೂದ್ ಮತ್ತು ಹಿಂದೆ ಶಾ ಮಸ್ಸೂದ್ ಅವರ ಆಪ್ತ ಮತ್ತು ಅಫಘಾನಿಸ್ತಾನದ ಉಪಾಧ್ಯಕ್ಷರಾಗಿದ್ದ ಅಮ್ರುಲ್ಲಾಹ್ ಸಾಲೆಹ್ ಜೊತೆಗೂಡಿ ನ್ಯಾಶನಲ್ ರೆಸಿಸ್ಟನ್ಸ್ ಫ್ರಂಟ್ ಆಫ್ ಅಫಘಾನಿಸ್ತಾನ ಎಂಬ ಒಕ್ಕೂಟವನ್ನು ಸ್ಥಾಪಿಸಿದ್ದು, ತಾಲಿಬಾನಿಗಳ ವಿರುದ್ಧ ಯುದ್ಧ ಸಾರುವ ಎಚ್ಚರಿಕೆ ನೀಡಿದ್ದಾರೆ.

ಅಹ್ಮದ್ ಶಾ ಮಸ್ಸೂದ್ ಹುಟ್ಟುಹಾಕಿದ ನಾರ್ದರ್ನ್ ಅಲೈಯನ್ಸ್ ತಾಲಿಬಾನಿಗಳಿಗೆ ಸಿಂಹಸ್ವಪ್ನವಾಗಿತ್ತು. ಯಾರಿಗೂ ಹೆದರದ ತಾಲಿಬಾನಿಗಳು ತಜಾಕ್ ಮತ್ತು ಹಜಾರಾ ಹೆಸರಿನ ಪರಾಕ್ರಮಿ ಸಮುದಾಯಗಳ ಜನರನ್ನೊಳಗಗೊಂಡ ಪಂಜಶೀರ್ ಮುಂದೆ ಕುರಿಗಳಾಗುತ್ತಾರೆ. ಮತ್ತೊಂದು ಗಮನಾರ್ಹ ಸಂಗತಿಯೆಂದರೆ ಪಂಜಶೀರ್ ಯುರೋಪಿಯನ್ ಒಕ್ಕೂಟದ ಜೊತೆ ಉತ್ತಮ ಬಾಂಧವ್ಯ ಹೊಂದಿದೆ.

ಯುದ್ಧ ಆರಂಭಗೊಂಡರೆ ಯುರೋಪಿಯನ್ ಒಕ್ಕೂಟ ನೆರವು ಹಸ್ತ ಚಾವುವುದು ನಿಶ್ಚಿತ ಅಂತ ಹೇಳಲಾಗುತ್ತಿದೆ. ತಾಲಿಬಾನಿಗಳಿಗೆ ಈ ಪ್ರಾಂತ್ಯವನ್ನು ವಶಕ್ಕೆ ತೆಗೆದುಕೊಳ್ಳದ ಹೊರತು, ಅಫಘಾನಿಸ್ತಾನದ ಮೇಲೆ ಪ್ರಭುತ್ವ ಸಾಧಿಸಿದಂತಾಗದು. ಅವರು ಯಾವ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಅನ್ನೋದು ಕುತೂಹಲಕಾರಿ ಸಂಗತಿಯಾಗಿದೆ.

ಇದನ್ನೂ ಓದಿ: ಕಾಬೂಲ್​ನಿಂದ ಭಾರತವನ್ನು ತಲುಪಿದ ಪುಟ್ಟ ಮಕ್ಕಳು ಖುಷಿಯಿಂದ ಮುದ್ದಾಡುತ್ತಿರುವ ದೃಶ್ಯ; ಹೃದಯಸ್ಪರ್ಶಿ ವಿಡಿಯೋ ವೈರಲ್