ಜಮಖಂಡಿಯಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಪರೀಕ್ಷೆ ಬರೆದರು, ಹೊರಗಿನವರು ಕೇಂದ್ರದೊಳಗೆ ನುಗ್ಗಿ ಗಲಾಟೆ ಮಾಡಿದರು!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 28, 2022 | 7:29 PM

ಹಿಜಾಬ್ ಧರಿಸಿಯೇ ಪರೀಕ್ಷಾ ಹಾಲ್ ನೊಳಗೆ ಹೋಗಿ ವಿದ್ಯಾರ್ಥಿನಿಯರು ತಪ್ಪು ಮಾಡಿದ್ದಾರೆ. ರಾಜ್ಯ ಹೈಕೋರ್ಟ್ ಆದೇಶವನ್ನು ಎಲ್ಲಾ ಕಡೆ ಪಾಲಿಸಲಾಗುತ್ತಿದೆ. ಪಾಲಿಸದಿರುವುದು ಆದೇಶದ ಉಲ್ಲಂಘನೆ, ಅದರಲ್ಲಿ ದೂಸರಾ ಮಾತೇ ಇಲ್ಲ.

ಜಮಖಂಡಿ: ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲೆ ಜಮಖಂಡಿ (Jamakhandi) ಒಂದು ಪರೀಕ್ಷಾ ಕೇಂದ್ರವಾಗಿದ್ದು (examination centre) ರಾಜ್ಯದ ಉಳಿದ ಭಾಗಗಳ ಹಾಗೆ ಸೋಮವಾರ ಎಸ್ ಎಸ್ ಎಲ್ ಸಿ ಪರೀಕ್ಷೆ (SSLC exams) ಆರಂಭವಾಯಿತು. ಆದರೆ ಪರೀಕ್ಷೆ ಬರೆಯಲು ಹಾಜರಿದ್ದ ವಿದ್ಯಾರ್ಥಿಗಳಿಗೆ ಪ್ರಶ್ನೆ ಮತ್ತು ಉತ್ತರ ಪತ್ರಿಕೆಗಳನ್ನು ಹಂಚುವಾಗಲೇ ಸದರಿ ಕೇಂದ್ರವು ವಿವಾದಕ್ಕೊಳಗಾಯಿತು. ಈ ಕೇಂದ್ರದ ಮೇಲ್ವಿಚಾರಕರು ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರಿಗೆ ಅದನ್ನು ತೆಗೆದಿಟ್ಟು ಪರೀಕ್ಷೆ ಬರೆಯಲು ಸೂಚಿಸಿಲ್ಲ. ವಿದ್ಯಾರ್ಥಿನಿಯರು ಅದನ್ನು ಧರಿಸಿಯೇ ಪರೀಕ್ಷೆ ಬರೆದಿದ್ದಾರೆ. ಸೋಜಿಗ ಹುಟ್ಟಿಸುವ ಸಂಗತಿ ಏನೆಂದರೆ ರವಿವಾರದಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರು ಈ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದ್ದರಂತೆ.

ಹಿಜಾಬ್ ಧರಿಸಿಯೇ ಪರೀಕ್ಷಾ ಹಾಲ್ ನೊಳಗೆ ಹೋಗಿ ವಿದ್ಯಾರ್ಥಿನಿಯರು ತಪ್ಪು ಮಾಡಿದ್ದಾರೆ. ರಾಜ್ಯ ಹೈಕೋರ್ಟ್ ಆದೇಶವನ್ನು ಎಲ್ಲಾ ಕಡೆ ಪಾಲಿಸಲಾಗುತ್ತಿದೆ. ಪಾಲಿಸದಿರುವುದು ಆದೇಶದ ಉಲ್ಲಂಘನೆ, ಅದರಲ್ಲಿ ದೂಸರಾ ಮಾತೇ ಇಲ್ಲ. ಪರೀಕ್ಷಾ ಕೇಂದ್ರದ ಮೇಲ್ವಿಚಾರಕ ಮತ್ತು ಸಂಬಂಧಪಟ್ಟವರು ಸಹ ತಪ್ಪಿತಸ್ಥರು, ಅನುಮಾನವೇ ಬೇಡ.

ಈ ಸಂಗತಿ ಅಂದರೆ, ಅಂದರೆ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಪರೀಕ್ಷೆ ಬರೆದಿದ್ದು ಹೊರಗಿನವರಿಗೆ ಗೊತ್ತಾಗುವುದು ತಡವಾಗಿಲ್ಲ. ಕೂಡಲೇ ಒಂದಷ್ಟು ಜನ ಕೇಂದ್ರದೊಳಗೆ ನುಗ್ಗಿ ಗಲಾಟೆ ಮಾಡಲಾರಂಭಿಸಿದ್ದಾರೆ. ಗಮನಿಸಬೇಕಾದ ಅಂಶವೇನೆಂದರೆ ಅವರು ಪರೀಕ್ಷೆ ನಡೆಯುತ್ತಿರುವ ಹಾಲ್ ಗಳಿಗೂ ನುಗ್ಗಿ ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದಾರೆ. ಇದು ಕೂಡ ತಪ್ಪು ಮಾರಾಯ್ರೇ. ಪರೀಕ್ಷಾ ಕೇಂದ್ರದ ಹೊರಗೆ ಪೊಲೀಸ್ ಕಾವಲು ಇರುತ್ತದೆ. ಅವರು ಹೊರಗಿನವರನ್ನು ಒಳಗೆ ಬಿಡಬಾರದು, ಬಿಡುವುದಿಲ್ಲ. ಅಲ್ಲದೆ ಪರೀಕ್ಷಾ ಕೇಂದ್ರಗಳ ಸುತ್ತ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ. ಇವರು ಅದ್ಹೇಗೆ ಒಳಗಡೆ ಬಂದರು?

ಕೇಂದ್ರದ ಒಳಗೆ ಹೋಗಿ ಅವರು ಗಲಾಟೆ ಮಾಡುತ್ತಿದ್ದಾರೆ. ಮಕ್ಕಳು ಪರೀಕ್ಷೆ ಬರೆಯುತ್ತಿದ್ದಾರೆ ಎಂಬ ಯೋಚನೆಯೂ ಅವರಿಗಿಲ್ಲದೆ ಹೋಗಿದೆ. ಅವರು ಜಮಖಂಡಿ ತಾಲ್ಲೂಕು ಶಿಕ್ಷಣಾಧಿಕಾರಿ ಕಚೇರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದರೆ ಮುಗಿದು ಹೋಗಿತ್ತು, ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳುತ್ತಿದ್ದರು.

 ಇದನ್ನೂ ಓದಿ: SSLC ವಾರ್ಷಿಕ ಪರೀಕ್ಷೆ: ಪರೀಕ್ಷಾ ಕೇಂದ್ರಗಳ ಸುತ್ತ ಮಾರ್ಚ್ 28ರಿಂದ 15 ದಿನಗಳ ಕಾಲ ನಿಷೇಧಾಜ್ಞೆ ಜಾರಿ