ಹಸಿಗೂಸಿನೊಂದಿಗೆ ಪರೀಕ್ಷಾ ಕೇಂದ್ರಕ್ಕೆ ಬಂದ ಮಹಿಳೆಗೆ ನೆರವಾಗಿದ್ದು ಒಬ್ಬ ಮಮತಾಮಯಿ ಆರೋಗ್ಯ ಕಾರ್ಯಕರ್ತೆ!
ಆದರೆ, ಗಂಡ ಮತ್ತು ಅವನ ಮನೆಯವರ ಸಹಕಾರದಿಂದ ಮದುವೆಯಾದ ಮೇಲೂ ಓದು ಮುಂದುವರೆಸಿದ ಮಹಿಳೆಯರ ಉದಾಹರಣೆಗಳೂ ನಮಗೆ ಸಿಗುತ್ತವೆ. ಅದಕ್ಕೆ ಸಾಕ್ಷಿಯಾಗಿ ಇಲ್ಲೊಬ್ಬ ಮಹಿಳೆಯಿದ್ದಾರೆ.
ಗ್ರಾಮೀಣ ಭಾಗಗಳಲ್ಲಿ ಹೆಣ್ಣುಮಕ್ಕಳಿಗೆ ವಯಸ್ಕರಾಗುವ ಮೊದಲೇ ಮದುವೆ ಮಾಡಿಬಿಡುವ ಪದ್ಧತಿ ಈಗಲೂ ಜಾರಿಯಲ್ಲಿದೆ. ಓದುವ ಮತ್ತು ಓದಿ ಸ್ವಾವಲಂಬಿ ಬದುಕು ನಡೆಸಬೇಕೆಂದು ತುಡಿತ ಇರುವ ಅನೇಕ ಹೆಣ್ಣುಮಕ್ಕಳು ಪಾಲಕರ ಬಲವಂತಕ್ಕೆ ಮಣಿದು ಮದುವೆ ಮಾಡಿಕೊಂಡು ಗಂಡ-ಮಕ್ಕಳು, ಅತ್ತೆ-ಮಾವನ ಸೇವೆಯಲ್ಲಿ ಕಳೆದುಹೋಗಿಬಿಡುತ್ತಾರೆ. ಇಂಥ ಅಸಹಾಯಕ ಮಹಿಳೆಯರ ಅಸಂಖ್ಯಾತ ನಿದರ್ಶನಗಳು ನಮಗೆ ಸಿಗುತ್ತವೆ. ಆದರೆ, ಗಂಡ ಮತ್ತು ಅವನ ಮನೆಯವರ ಸಹಕಾರದಿಂದ ಮದುವೆಯಾದ ಮೇಲೂ ಓದು ಮುಂದುವರೆಸಿದ ಮಹಿಳೆಯರ ಉದಾಹರಣೆಗಳೂ ನಮಗೆ ಸಿಗುತ್ತವೆ. ಅದಕ್ಕೆ ಸಾಕ್ಷಿಯಾಗಿ ಇಲ್ಲೊಬ್ಬ ಮಹಿಳೆಯಿದ್ದಾರೆ. ಈ ವಿಡಿಯೋನಲ್ಲಿ ನಿಮಗೆ ಇಬ್ಬರು ಮಹಿಳೆಯರು ಕಾಣಿಸುತ್ತಾರೆ. ಮಗುವನ್ನು ತನ್ನ ಮಡಿಲಲ್ಲಿ ಮಲಗಿಸಿಕೊಂಡಿರುವವರು ಆಶಾ ಕಾರ್ಯಕರ್ತೆ (ASHA worker) ಉಮಾ ಶಾರದಹಳ್ಳಿ (Uma Sharadahalli). ಅವರ ಮಡಿಲಲ್ಲಿರುವ ಮಗು ಅವರದಲ್ಲ. ಅವರ ಎದುರುಗಡೆ ಕೂತು ಮಗುವಿಗೆ ಪ್ರಶ್ನೆಪತ್ರಿಕೆಯಿಂದ ಗಾಳಿ ಹಾಕುತ್ತಿರುವ ತಸ್ಲೀಮಾ ಮಕಾಂದಾರ್ (Tasleema Makandar) ಅವರ ಮಗು ಅದು. ತಸ್ಲೀಮಾ ಆಗಷ್ಟೇ ಪರೀಕ್ಷೆ ಬರೆದು ಹೊರಬಂದಿದ್ದಾರೆ. ಅವರು ಒಳಗಡೆ ಪರೀಕ್ಷೆ ಬರೆಯುವಾಗ ಅಂದರೆ ಮೂರು ಗಂಟೆಗೂ ಹೆಚ್ಚಿನ ಅವಧಿವರೆಗೆ ಉಮಾ ಅವರೇ ಮಗುವಿಗೆ ತಾಯಿಯಾಗಿದ್ದರು!
ಹೃದಯಕ್ಕೆ ಮುದ ನೀಡುವ ಈ ದೃಶ್ಯ ಕಂಡುಬಂದಿದ್ದು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿರುವ ಅಭ್ಯುದಯ ಪರೀಕ್ಷಾ ಕೇಂದ್ರದ ಆವರಣದಲ್ಲಿ. ತಸ್ಲೀಮಾ ಅವರು ಬಾಹ್ಯ ಅಭ್ಯರ್ಥಿಯಾಗಿ ಎಸ್ ಎಸ್ ಎಸ್ ಸಿ ಪರೀಕ್ಷೆ ಬರೆಯುತ್ತಿದ್ದಾರೆ. ಅವರಿಗೆ ನಾಲ್ಕು ತಿಂಗಳಿನ ಮಗವೊಂದಿದೆ. ಮಗುವನ್ನು ಮನೆಯಲ್ಲಿ ಬಿಟ್ಟು ಬರಲಾಗದಂಥ ಅಸಹಾಯಕ ಪರಿಸ್ಥಿತಿ ಅವರಿಗಿರಬಹುದು.
ಆದರೆ, ಪರೀಕ್ಷಾ ಕೇಂದ್ರಕ್ಕೆ ಬಂದ ನಂತರ ಅವರಿಗೆ ಉಮಾ ಸಿಕ್ಕಿದ್ದಾರೆ. ತಾಯಿ ಹೃದಯದ ಉಮಾ ಅವರಿಗೆ ತಸ್ಲೀಮಾ ಅವರ ಸಂಕಷ್ಟ ಅರ್ಥವಾಗಿದೆ. ಮಗುವನ್ನು ತಸ್ಲೀಮಾರಿಂದ ಇಸಿದುಕೊಂಡು, ನಿಶ್ಚಿಂತೆಯಿಂದ ಪರೀಕ್ಷೆ ಬರೆದು ಬನ್ನಿ, ನೀವು ಆಚೆ ಬರೋವರಗೆ ನೋಡಿಕೊಳ್ಳುತ್ತೇನೆ ಎಂದು ಆಶ್ವಾಸನೆ ನೀಡಿ ಒಳಗೆ ಕಳಿಸಿದ್ದಾರೆ. ತಸ್ಲೀಮಾ ಬರೋವರೆಗೆ ಉಮಾ ಮಗುವನ್ನು ಆಡಿಸುತ್ತಾ, ಮಲಗಿಸುತ್ತಾ ನೋಡಿಕೊಂಡಿದ್ದಾರೆ.
ಇದನ್ನೂ ಓದಿ: SSLC ವಾರ್ಷಿಕ ಪರೀಕ್ಷೆ: ಪರೀಕ್ಷಾ ಕೇಂದ್ರಗಳ ಸುತ್ತ ಮಾರ್ಚ್ 28ರಿಂದ 15 ದಿನಗಳ ಕಾಲ ನಿಷೇಧಾಜ್ಞೆ ಜಾರಿ