ಜವಾಹಿರಿ ಬದುಕಿಲ್ಲ, ಸತ್ತಿದ್ದಾನೆ ಅಂತ ಎಲ್ಲಿ ನಿಂತು ಬೇಕಾದರೂ ಚಾಲೆಂಜ್ ಮಾಡುತ್ತೇನೆ: ಲಕ್ಷ್ಮಣ್, ಕೆಪಿಸಿಸಿ ವಕ್ತಾರ
ಅಲ್-ಜವಾಹಿರಿಯನ್ನು ಅಮೇರಿಕ 5 ವರ್ಷಗಳ ಹಿಂದೆಯೇ ಕೊಂದುಹಾಕಿದೆ, ಅವರು ಈಗ ಬದುಕಿಲ್ಲ, ಸತ್ತುಹೋಗಿದ್ದಾರೆ ಅಂತ ಅಲ್ಲಿನ ಫೆಡರಲ್ ಬ್ಯೂರೋ ಆಫ್ ಇನ್ನೆಸ್ಟಿಗೇಷನ್ (ಎಫ್ ಬಿ ಐ) ಹೇಳಿದೆ. ಪರಿಸ್ಥಿತಿ ಹೀಗಿರುವಾಗ ಜವಾಹಿರಿ ವಿಡಿಯೋ ಮಾಡಿ ಬಿಡುಗಡೆ ಮಾಡುವ ಪ್ರಶ್ನೆ ಹೇಗೆ ಉದ್ಭವಿಸುತ್ತದೆ ಎಂದು ಲಕ್ಷ್ಮಣ್ ಹೇಳುತ್ತಾರೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿಯ ವಕ್ತಾರ (ಕೆಪಿಸಿಸಿ) ಎಮ್ ಲಕ್ಷ್ಮಣ್ (M Laxman) ಶುಕ್ರವಾರದಂದು ಮೈಸೂರಲ್ಲಿ ಸುದ್ದಿಗೋಷ್ಟಿಯೊಂದನ್ನು ನಡೆಸಿ ಮಂಡ್ಯದ ಕಾಲೇಜು ವಿದ್ಯಾರ್ಥಿನಿ ಮುಸ್ಕಾನ್ ಖಾನ್ (Muskan Khan) ಅವರನ್ನು ಮೆಚ್ಚಿ ಅಲ್-ಖೈದಾ ಉಗ್ರ ಅಯ್ಮನ್ ಅಲ್-ಜವಾಹಿರಿ (Ayman Al-Zawahiri) ಮಾತಾಡಿ ಬಿಡುಗಡೆ ಮಾಡಿರುವ ವಿಡಿಯೋ ಬಿಜೆಪಿ ಮತ್ತು ಆರ್ ಎಸ್ ಎಸ್ ಸೃಷ್ಟಿ ಎಂದು ಪಕ್ಷದ ಹಿರಿಯ ನಾಯಕ ಸಿದ್ದರಾಮಯ್ಯ ಅವರು ಗುರುವಾರ ಬಾಗಲಕೋಟೆಯಲ್ಲಿ ಹೇಳಿರುವುನ್ನು ತಾನು ಸಂಪೂರ್ಣವಾಗಿ ಬೆಂಬಲಿಸುವುದಾಗಿ ಹೇಳಿದರು. ಸಮರ್ಥನೆ ಯಾಕೆ ಅಂತ ಅವರು ವಿವರಿಸಿ ಹೇಳುತ್ತಾರೆ.
ಅಲ್-ಖೈದಾ ಮುಖ್ಯಸ್ಥ ಅಲ್-ಜವಾಹಿರಿ ಬಗ್ಗೆ ಇಂಟರ್ನೆಟ್ ನಲ್ಲಿ ಸರ್ಚ್ ಮಾಡಿದರೆ ಎಲ್ಲ ಮಾಹಿತಿ ಸಿಗುತ್ತದೆ. ಅಲ್-ಖೈದಾ ಸಂಘಟನೆಯನ್ನು ಬಹಳ ಹಿಂದೆಯೇ ಬ್ಯಾನ್ ಮಾಡಲಾಗಿದೆ, ಅದೀಗ ಅಸ್ತಿತ್ವದಲ್ಲಿಲ್ಲ ಎಂದು ಲಕ್ಷ್ಮಣ್ ಹೇಳುತ್ತಾರೆ. ಅಲ್ಲದೆ ಸಂಘಟನೆ ಮುಖ್ಯಸ್ಥ ಅಲ್-ಜವಾಹಿರಿಯನ್ನು ಅಮೇರಿಕ 5 ವರ್ಷಗಳ ಹಿಂದೆಯೇ ಕೊಂದುಹಾಕಿದೆ, ಅವರು ಈಗ ಬದುಕಿಲ್ಲ, ಸತ್ತುಹೋಗಿದ್ದಾರೆ ಅಂತ ಅಲ್ಲಿನ ಫೆಡರಲ್ ಬ್ಯೂರೋ ಆಫ್ ಇನ್ನೆಸ್ಟಿಗೇಷನ್ (ಎಫ್ ಬಿ ಐ) ಹೇಳಿದೆ. ಪರಿಸ್ಥಿತಿ ಹೀಗಿರುವಾಗ ಜವಾಹಿರಿ ವಿಡಿಯೋ ಮಾಡಿ ಬಿಡುಗಡೆ ಮಾಡುವ ಪ್ರಶ್ನೆ ಹೇಗೆ ಉದ್ಭವಿಸುತ್ತದೆ ಎಂದು ಲಕ್ಷ್ಮಣ್ ಹೇಳುತ್ತಾರೆ.
ಈ ಹಿನ್ನೆಲೆಯಲ್ಲೇ ಸಿದ್ದರಾಮಯ್ಯನವರು ವಿಡಿಯೋ ಬಿಜೆಪಿ ಮತ್ತು ಆರ್ ಎಸ್ ಎಸ್ ಸೃಷ್ಟಿಯಾಗಿದೆ ಎಂದಿದ್ದಾರೆ ಎನ್ನುವ ಲಕ್ಷ್ಮಣ್ ಅವರು, ಜವಾಹಿರಿ ಬದುಕಿಲ್ಲ ಅಂತ ತಾವು ಎಲ್ಲಿ ಬೇಕಾದರೂ ಚಾಲೆಂಜ್ ಮಾಡುವುದಾಗಿ ಹೇಳುತ್ತಾರೆ.
ಇದನ್ನೂ ಓದಿ: ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿಯೋ ಅಥವಾ ಅಲ್ ಖೈದಾ ಮುಖ್ಯಸ್ಥನಾ? ರಾಜ್ಯದ ಜನರೇ ತೀರ್ಮಾನಿಸಬೇಕು -ಕೆಎಸ್ ಈಶ್ವರಪ್ಪ