ಉಗ್ರ ಕೃತ್ಯ ಎಸಗಿದವರು ನಿಮ್ಮ ಅಣ್ಣ ತಮ್ಮಂದಿರಾ? ಕಾಂಗ್ರೆಸ್ ನಾಯಕರಿಗೆ ಕಾರಜೋಳ ಪ್ರಶ್ನೆ
ದೆಹಲಿ ಸ್ಫೋಟ ಪ್ರಕರಣದ ಕುರಿತು ಕಾಂಗ್ರೆಸ್ ನಾಯಕರ ಹೇಳಿಕೆಗಳನ್ನು ಮಾಜಿ ಸಚಿವ ಗೋವಿಂದ ಕಾರಜೋಳ ತೀವ್ರವಾಗಿ ಖಂಡಿಸಿದ್ದಾರೆ. ಉಗ್ರ ಕೃತ್ಯ ಎಸಗಿದವರು ನಿಮ್ಮ ಅಣ್ಣತಮ್ಮಂದಿರಾ ಎಂದು ಪ್ರಶ್ನಿಸಿರುವ ಕಾರಜೋಳ, ಜಮೀರ್ ಅಹಮದ್ ಖಾನ್ ಅವರ ಹೇಳಿಕೆಯನ್ನು ಟೀಕಿಸಿದ್ದಾರೆ. ಕಾಂಗ್ರೆಸ್ ನಾಯಕರ ಹೀನ ಮನಸ್ಥಿತಿ ಇದು ಎಂದು ಅವರು ಟೀಕಿಸಿದ್ದಾರೆ.
ಚಿತ್ರದುರ್ಗ, ನವೆಂಬರ್ 13: ದೆಹಲಿ ಸ್ಫೋಟದ ಕುರಿತು ಕಾಂಗ್ರೆಸ್ ನಾಯಕರ ನಿಲುವನ್ನು ಬಿಜೆಪಿ ನಾಯಕ ಗೋವಿಂದ ಕಾರಜೋಳ ತೀವ್ರವಾಗಿ ಟೀಕಿಸಿದ್ದಾರೆ. ದೇಶದಲ್ಲಿ ಅಶಾಂತಿ ಉಂಟುಮಾಡುವ ‘ಹೀನ ಮನಸ್ಥಿತಿ’ ಕಾಂಗ್ರೆಸ್ ನಾಯಕರಿಗಿದೆ ಎಂದು ಅವರು ಆರೋಪಿಸಿದ್ದು, ಉಗ್ರ ಚಟುವಟಿಕೆಯಲ್ಲಿ ಭಾಗವಹಿಸಿದವರು ಕಾಂಗ್ರೆಸ್‌ನ ‘ಅಣ್ಣತಮ್ಮಂದಿರಾ’ ಎಂದು ಪ್ರಶ್ನಿಸಿದ್ದಾರೆ.
ಸಚಿವ ಜಮೀರ್ ಅಹ್ಮದ್ ಖಾನ್ ಅವರು, ಬಿಹಾರ ಚುನಾವಣೆ ಸಂದರ್ಭದಲ್ಲೇ ದೆಹಲಿ ಸ್ಫೋಟ ಸಂಭವಿಸಿದೆ ಎಂದು ಹೇಳಿದ್ದಕ್ಕೆ ಪ್ರತಿಕ್ರಿಯಿಸಿ, ಆ ರೀತಿಯ ಹೇಳಿಕೆ ಮೂರ್ಖತನದ ಪರಮಾವಧಿ. ಯಾವುದೇ ಸಾಕ್ಷಾಧಾರಗಳಿಲ್ಲದೆ ಇಂತಹ ಹೇಳಿಕೆಗಳನ್ನು ನೀಡುವುದನ್ನು 140 ಕೋಟಿ ಜನ ಗಮನಿಸುತ್ತಿದ್ದಾರೆ ಎಂದರು. ಉಮರ್, ಮಹಮ್ಮದ್, ಶಾಹಿದ್, ಜಮೀರ್ ಹೆಸರಿನವರು ಈ ಕೃತ್ಯದಲ್ಲಿ ಭಾಗವಹಿಸಿದ್ದರೆ, ಅವರ ಬಗ್ಗೆ ಕಾಂಗ್ರೆಸ್ ನಾಯಕರು ಸಹಾನುಭೂತಿ ಏಕೆ ಹೊಂದಿದ್ದಾರೆ ಎಂದು ಕಾರಜೋಳ ಖಾರವಾಗಿ ಪ್ರಶ್ನಿಸಿದ್ದಾರೆ.

