Asia Cup 2025: ಕ್ಲೀನ್ ಬೌಲ್ಡ್ ಆಗಿದ್ದರೂ ಡಿಆರ್‌ಎಸ್ ತೆಗೆದುಕೊಂಡ ರಶೀದ್ ಖಾನ್; ವಿಡಿಯೋ
Asia Cup 2025: ಏಷ್ಯಾಕಪ್ 2025 ರ ಬಿ ಗುಂಪಿನ ಪಂದ್ಯದಲ್ಲಿ ಶ್ರೀಲಂಕಾ ಅಫ್ಘಾನಿಸ್ತಾನವನ್ನು ಸೋಲಿಸಿ ಸೂಪರ್ 4ಕ್ಕೆ ಪ್ರವೇಶಿಸಿತು. ಅಫ್ಘಾನಿಸ್ತಾನದ ನಾಯಕ ರಶೀದ್ ಖಾನ್ ಕ್ಲೀನ್ ಬೌಲ್ಡ್ ಆದರೂ ಡಿಆರ್‌ಎಸ್ ಕೇಳಿದ್ದು ವೈರಲ್ ಆಗಿದೆ. ಅಂಪೈರ್ ವಿವರಿಸಿದ ನಂತರ ತನ್ನ ತಪ್ಪನ್ನು ಅರಿತುಕೊಂಡ ರಶೀದ್ ನಿರಾಶರಾಗಿ ಪೆವಿಲಿಯನ್‌ಗೆ ಮರಳಿದರು. ಈ ಪಂದ್ಯದಲ್ಲಿ ರಶೀದ್ 24 ರನ್ ಗಳಿಸಿದರು.
ಏಷ್ಯಾಕಪ್ 2025 ರಲ್ಲಿ ಬಿ ಗುಂಪಿನ ಕೊನೆಯ ಲೀಗ್ ಪಂದ್ಯ ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ ನಡುವೆ ನಡೆಯಿತು. ಈ ಪಂದ್ಯವನ್ನು ಗೆದ್ದುಕೊಳ್ಳುವುದರೊಂದಿಗೆ ಶ್ರೀಲಂಕಾ ತಂಡ ಸೂಪರ್ 4 ಸುತ್ತಿಗೆ ಅರ್ಹತೆ ಪಡೆದರೆ, ಅಫ್ಘನ್ ತಂಡ ಟೂರ್ನಿಯಿಂದ ಹೊರಬಿದ್ದಿತು. ಇನ್ನು ಇದೇ ಪಂದ್ಯದಲ್ಲಿ ಅಫ್ಘನ್ ತಂಡದ ನಾಯಕ ರಶೀದ್ ಖಾನ್ ಕ್ಲೀನ್ ಬೌಲ್ಡ್ ಆಗಿದ್ದರೂ ಸಹ ಅಂಪೈರ್ ಬಳಿ ಬಳಿ ಡಿಆರ್‌ಎಸ್ ಕೇಳಿದರು. ಕೂಡಲೇ ಅಂಪೈರ್ ಪರಿಸ್ಥಿತಿಯನ್ನು ವಿವರಿಸಿದಾಗ ತನ್ನ ತಪ್ಪನ್ನು ಅರಿತುಕೊಂಡು ರಶೀದ್ ನಿರಾಶೆಯಿಂದ ಪೆವಿಲಿಯನ್‌ಗೆ ಮರಳಿದರು. ಇದೀಗ ಅದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವಾಸ್ತವವಾಗಿ ಅಫ್ಘಾನಿಸ್ತಾನದ ಇನ್ನಿಂಗ್ಸ್ 18 ನೇ ಓವರ್ನಲ್ಲಿ ನಾಯಕ ರಶೀದ್ ಖಾನ್ ಮತ್ತು ಮೊಹಮ್ಮದ್ ನಬಿ ಕ್ರೀಸ್‌ನಲ್ಲಿದ್ದರು. ಇತ್ತ ಲಂಕಾ ವೇಗಿ ತುಷಾರ ಮೊದಲ ಎಸೆತದಲ್ಲಿ ನಿಧಾನಗತಿಯ ಯಾರ್ಕರ್ ಎಸೆದರು. ಈ ಎಸೆತವನ್ನು ಆಡುವಲ್ಲಿ ರಶೀದ್ ಖಾನ್ ಸಂಪೂರ್ಣವಾಗಿ ವಿಫಲರಾದರು. ಇದರಿಂದಾಗಿ ಚೆಂಡು ಅವರ ಬ್ಯಾಕ್ ಪ್ಯಾಡ್‌ಗೆ ಬಡಿದು ಸ್ಟಂಪ್‌ಗೆ ಬಡಿಯಿತು.
ಚೆಂಡು ಸ್ಟಂಪ್‌ಗೆ ಬಡಿದ ತಕ್ಷಣ, ತುಷಾರ ಎಲ್‌ಬಿಡಬ್ಲ್ಯೂಗಾಗಿ ಮೇಲ್ಮನವಿ ಸಲ್ಲಿಸಿದರು. ಆದರೆ ಈಗಾಗಲೇ ರಶೀದ್ ಬೌಲ್ಡ್ ಆಗಿದ್ದಾರೆ ಎಂಬುದು ತುಷಾರಗೆ ತಿಳಿದಿರಲಿಲ್ಲ. ಅಷ್ಟೇ ಅರಿವಿಲ್ಲದ ರಶೀದ್, ಅಂಪೈರ್ ಎಲ್‌ಬಿಡಬ್ಲ್ಯೂ ನೀಡಿದ್ದಾರೆಂದು ಭಾವಿಸಿ ರಿವ್ಯೂಗೆ ಸಿಗ್ನಲ್ ನೀಡಿದರು, ಆದರೆ ಅಂಪೈರ್ ತುಷಾರ್ ಕಡೆಗೆ ಬೆರಳು ತೋರಿಸುತ್ತಾ ರಶೀದ್ ಬೌಲ್ಡ್ ಆಗಿದ್ದಾರೆಂದು ಸೂಚಿಸಿದರು, ಏಕೆಂದರೆ ಚೆಂಡು ಅದಾಗಲೇ ಸ್ಟಂಪ್‌ಗೆ ಬಡಿದು ಬೇಲ್ಸ್‌ನ ಕೆಳಗೆ ಬೀಳಿಸಿತ್ತು. ಈ ಪಂದ್ಯದಲ್ಲಿ ರಶೀದ್ ಖಾನ್ 23 ಎಸೆತಗಳಲ್ಲಿ ಎರಡು ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ 24 ರನ್ ಗಳಿಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

