ಅಸ್ಸಾಂ ಪ್ರವಾಹದಿಂದ 5.35 ಲಕ್ಷ ಜನರಿಗೆ ತೊಂದರೆ; ಪೂರ್ತಿ ಬೆಂಬಲದ ಭರವಸೆ ನೀಡಿದ ಪ್ರಧಾನಿ ಮೋದಿ
ಅಸ್ಸಾಂನಲ್ಲಿ ಪ್ರವಾಹ ಉಂಟಾಗಿ 5 ಲಕ್ಷಕ್ಕೂ ಹೆಚ್ಚು ಜನರು ತೊಂದರೆಗೆ ಸಿಲುಕಿದ್ದಾರೆ. ಇಲ್ಲಿನ ಪ್ರವಾಹ ಪರಿಸ್ಥಿತಿಯ ಕುರಿತು ಪ್ರಧಾನಿ ಮೋದಿ ಅಸ್ಸಾಂ, ಸಿಕ್ಕಿಂ ಮುಖ್ಯಮಂತ್ರಿಗಳು ಮತ್ತು ಮಣಿಪುರ ರಾಜ್ಯಪಾಲರೊಂದಿಗೆ ಮಾತನಾಡಿದ್ದಾರೆ. ಕೇಂದ್ರ ಸರ್ಕಾರದಿಂದ ಸಂಪೂರ್ಣ ಬೆಂಬಲದ ಭರವಸೆ ನೀಡಿದ್ದಾರೆ. ಅಸ್ಸಾಂ ತೀವ್ರ ಪ್ರವಾಹ ಬಿಕ್ಕಟ್ಟಿನಿಂದ ಕಂಗೆಟ್ಟಿದ್ದು, 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ 5.35 ಲಕ್ಷಕ್ಕೂ ಹೆಚ್ಚು ಜನರ ಮೇಲೆ ಪರಿಣಾಮ ಬೀರಿದೆ.
ಗುವಾಹಟಿ, ಜೂನ್ 3: ಅಸ್ಸಾಂನಲ್ಲಿ (Assam Flood) ಸಂಭವಿಸಿದ ತೀವ್ರ ಪ್ರವಾಹವು 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ 5.35 ಲಕ್ಷಕ್ಕೂ ಹೆಚ್ಚು ಜನರ ಮೇಲೆ ಪರಿಣಾಮ ಬೀರಿದೆ. ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ. ಇಲ್ಲಿ ಪ್ರವಾಹ, ಭೂಕುಸಿತದಿಂದಾಗಿ ಇದುವರೆಗೆ 11 ಸಾವುಗಳು ವರದಿಯಾಗಿವೆ. ಈ ಹಿನ್ನೆಲೆಯಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ. ಕೇಂದ್ರ ಸರ್ಕಾರದ ಸಂಪೂರ್ಣ ಸಹಾಯದ ಭರವಸೆ ನೀಡಿದ್ದಾರೆ.
ಅಸ್ಸಾಂನಲ್ಲಿ ಇಂದು ಕೂಡ ರೆಡ್ ಅಲರ್ಟ್ ಘೋಷಿಸಲಾಗಿದೆ. ಪ್ರಸ್ತುತ, 165 ಪರಿಹಾರ ಶಿಬಿರಗಳು 31,212 ನಿರಾಶ್ರಿತರಿಗೆ ಆಶ್ರಯ ನೀಡುತ್ತಿವೆ ಮತ್ತು 157 ಪರಿಹಾರ ವಿತರಣಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಪ್ರವಾಹವು ಅಸ್ಸಾಂನಲ್ಲಿ ಸುಮಾರು 12,610 ಹೆಕ್ಟೇರ್ ಕೃಷಿ ಭೂಮಿಯನ್ನು ಮುಳುಗಿಸಿದೆ. ಕಳೆದ 24 ಗಂಟೆಗಳಲ್ಲಿ 94 ಪ್ರಾಣಿಗಳು ಕೊಚ್ಚಿ ಹೋಗಿವೆ ಎಂದು ವರದಿಯಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ