ಕಮಲಾಕರ ಭಟ್ ಮತ್ತೊಂದು ಸೀಕ್ರೆಟ್ ಬಯಲು! ಗೋಶಾಲೆ ಹೆಸರಿನಲ್ಲಿ ಕೋಟಿ ಕೋಟಿ ಆಸ್ತಿ ಗಳಿಸಿದ್ದ ಜ್ಯೋತಿಷಿ

Edited By:

Updated on: Feb 06, 2026 | 1:52 PM

ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಜ್ಯೋತಿಷಿ ಕಮಲಾಕರ್ ಭಟ್ ಆಸ್ತಿಪಾಸ್ತಿಗಳು ಈಗ ತನಿಖೆಯ ವ್ಯಾಪ್ತಿಯಲ್ಲಿವೆ. ಶಿವಮೊಗ್ಗದ ಮುದುವಾಲ ಗ್ರಾಮದಲ್ಲಿ ಗೋಶಾಲೆ ನಿರ್ಮಾಣದ ಹೆಸರಿನಲ್ಲಿ 10 ಎಕರೆಗೂ ಹೆಚ್ಚು ಭೂಮಿಯನ್ನು ಖರೀದಿಸಿದ್ದರು ಎಂಬುದು ಬೆಳಕಿಗೆ ಬಂದಿದೆ. ಸುಚಿತ್ರಾ ಸಂಬಂಧದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿದ್ದು, ಕಮಲಾಕರ್ ಭಟ್ ಕಡಿಮೆ ಅವಧಿಯಲ್ಲಿ ಸಂಪಾದಿಸಿದ ಆಸ್ತಿಗಳ ಕುರಿತು ಪ್ರಶ್ನೆಗಳು ಮೂಡಿವೆ.

ಶಿವಮೊಗ್ಗ, ಫೆಬ್ರವರಿ 6: ರೀಲ್ಸ್ ರಾಣಿ ಸುಚಿತ್ರಾ ಜತೆ ಅಕ್ರಮ ಸಂಬಂಧ ಹಾಗೂ ಕೊಲೆ ಪ್ರಕರಣದಲ್ಲಿ ಸುದ್ದಿಯಲ್ಲಿರುವ ಕಮಲಾಕರ ಭಟ್ ಮತ್ತೊಂದು ರಹಸ್ಯ ಈಗ ಬಯಲಾಗಿದೆ. ಕಡಿಮೆ ಅವಧಿಯಲ್ಲಿ ಕೋಟ್ಯಂತರ ರೂ. ಮೌಲ್ಯದ ಎಕರೆಗಟ್ಟಲೆ ಆಸ್ತಿ ಖರೀದಿಸಿದ ವಿಚಾರ ಈಗ ಬೆಳಕಿಗೆ ಬಂದಿದ್ದು, ಆಸ್ತಿಗಳ ಕುರಿತು ಕೂಡ ತನಿಖೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಶಿವಮೊಗ್ಗ ತಾಲೂಕಿನ ಮುದುವಾಲ ಗ್ರಾಮದಲ್ಲಿ ಕಮಲಾಕರ್ ಭಟ್ 10 ಎಕರೆಗೂ ಹೆಚ್ಚು ಭೂಮಿಯನ್ನು ಖರೀದಿಸಿದ್ದ. ಈ ಜಮೀನನ್ನು ಗೋಶಾಲೆ, ಮಠ ಮತ್ತು ದೇವಸ್ಥಾನ ನಿರ್ಮಿಸಲು ಬಳಸುವುದಾಗಿ ಹೇಳಲಾಗಿತ್ತು. ಆದರೆ, ಸ್ಥಳದಲ್ಲಿ ಗೋವುಗಳಾಗಲೀ, ಸಿಬ್ಬಂದಿಯಾಗಲೀ ಕಂಡುಬರುತ್ತಿಲ್ಲ. ಕೇವಲ ಕೆಲವು ಶೆಡ್‌ಗಳು ಮತ್ತು ದೇವಸ್ಥಾನದ ಕಾಮಗಾರಿ ಮಾತ್ರ ಗೋಚರಿಸುತ್ತಿದೆ.

ಕಮಲಾಕರ್ ಭಟ್, ಕೆಲವೇ ವರ್ಷಗಳಲ್ಲಿ ಅಪಾರ ಆಸ್ತಿ ಸಂಪಾದಿಸಿದ್ದಾರೆ. ಶಿವಮೊಗ್ಗದಲ್ಲಿ ಮನೆ ಹೊಂದಿದ್ದ ಇವರು, ಸುಚಿತ್ರಾ ಪರಿಚಯದ ನಂತರ ಆಕೆಯ ಪತಿಯ ಅಣ್ಣ ವಸಂತ್ ನಾಯಕ್ ಕೊಲೆ ಪ್ರಕರಣದಲ್ಲಿ ಬಂಧಿತರಾಗಿದ್ದಾರೆ. ಸುಚಿತ್ರಾ ಜೊತೆಗಿನ ಸಂಬಂಧವೇ ಈ ಘಟನೆಗೆ ಕಾರಣ ಎನ್ನಲಾಗಿದೆ. ಕಮಲಾಕರ್ ಭಟ್ ಅವರ ಅಕ್ರಮ ಆಸ್ತಿ ಸಂಪಾದನೆ ಕುರಿತು ಸಾರ್ವಜನಿಕ ವಲಯದಲ್ಲಿ ಈಗ ಪ್ರಶ್ನೆಗಳು ಮೂಡಿವೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ