ಅಜಾನ್ ಶತಮಾನಗಳಿಂದ ನಡೆದುಕೊಂಡು ಬಂದಿರುವ ಪದ್ಧತಿಯಾಗಿದೆ, ರೇಣುಕಾಚಾರ್ಯ ಒಬ್ಬ ಮತಾಂಧ: ಸಿದ್ದರಾಮಯ್ಯ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Apr 05, 2022 | 6:48 PM

ಚುನಾವಣೆ ಹತ್ತಿರ ಬಂದಾಗ ತಮ್ಮ ನಿಷ್ಕ್ರಿಯತೆಯನ್ನು ಮುಚ್ಚಿಡಲು ಮತ್ತು ಜನರ ಗಮನವನ್ನು ಬೇರೆಡೆ ಸೆಳೆಯಲು ಅಜಾನ್, ಹಲಾಲ್ ಕಟ್, ಹಿಜಾಬ್, ಭಗವದ್ಗೀತೆ, ಹಿಂದೂಗಳ ಜಾತ್ರೆ ಮತ್ತು ದೇವಸ್ಥಾನಗಳ ಅವರಣದಲ್ಲಿ ಮುಸಲ್ಮಾನರು ವ್ಯಾಪಾರ ಮಾಡದಂತೆ ನಿಷೇಧ ಮೊದಲಾದ ವಿಷಯಗಳನ್ನು ಮುನ್ನೆಲೆಗೆ ತಂದು ಅಭಿಯಾನಗಳನ್ನು ನಡೆಸುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಚಿತ್ರದುರ್ಗ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು (Siddaramaiah) ಮಂಗಳವಾರ ಚಿತ್ರದುರ್ಗದಲ್ಲಿ ಗೃಹ ಸಚಿವ, ಸರ್ಕಾರ ಮತ್ತು ಹಿಂದೂ ಸಂಘಟನೆಗಳ ವಿರುದ್ಧ ಹರಿಹಾಯ್ದರು. ಆರಗ ಜ್ಞಾನೇಂದ್ರ (Araga Jnanendra) ಅವರು ಒಬ್ಬ ಗೃಹಸಚಿವರಾಗಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ, ರಾಜ್ಯದಲ್ಲಿ ಮುಸ್ಲಿಂ ಸಮುದಾಯದ (Muslim community) ವಿರುದ್ಧ ಹಲವಾರು ಅಭಿಯಾನಗಳು ನಡೆಯುತ್ತಿದ್ದರೂ ಅವರು ಸುಮ್ಮನಿದ್ದಾರೆ. ಅಜಾನ್ ಬಹಳ ವರ್ಷಗಳಿಂದ ನಡೆದು ಕೊಂಡು ಪದ್ಧತಿಯಾಗಿದೆ, ಅದೇನು ನಿನ್ನೆ ಮೊನ್ನೆಯಿಂದ ನಡೆದುಕೊಂಡು ಬಂದಿರುವ ಪದ್ಧತಿ ಅಲ್ಲ. ಭಾರತೀಯ ಜನತಾ ಪಕ್ಷ ಅಧಿಕಾರದಲ್ಲಿದ್ದರೂ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಚುನಾವಣೆ ಹತ್ತಿರ ಬಂದಾಗ ತಮ್ಮ ನಿಷ್ಕ್ರಿಯತೆಯನ್ನು ಮುಚ್ಚಿಡಲು ಮತ್ತು ಜನರ ಗಮನವನ್ನು ಬೇರೆಡೆ ಸೆಳೆಯಲು ಅಜಾನ್, ಹಲಾಲ್ ಕಟ್, ಹಿಜಾಬ್, ಭಗವದ್ಗೀತೆ, ಹಿಂದೂಗಳ ಜಾತ್ರೆ ಮತ್ತು ದೇವಸ್ಥಾನಗಳ ಅವರಣದಲ್ಲಿ ಮುಸಲ್ಮಾನರು ವ್ಯಾಪಾರ ಮಾಡದಂತೆ ನಿಷೇಧ ಮೊದಲಾದ ವಿಷಯಗಳನ್ನು ಮುನ್ನೆಲೆಗೆ ತಂದು ಅಭಿಯಾನಗಳನ್ನು ನಡೆಸುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಮುಟ್ಟಿದೆ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸತತವಾಗಿ ಏರುತ್ತಿವೆ, ವಿದ್ಯುಚ್ಛಕ್ತಿಯ ಬೆಲೆಗಳನ್ನು ಹೆಚ್ಚಿಸಲಾಗಿದೆ, ಔಷಧಿಗಳ ಬೆಲೆ ಏರಿದೆ, ಹೋಟೆಲ್ ನಲ್ಲಿ ತಿಂಡಿಗಳ ಬೆಲೆ ಮೇಲಕ್ಕೆ ಹೋಗಿದೆ. ಈ ವಿಷಯದ ಬಗ್ಗೆ ಯೋಚಿಸುವ ಬದಲು ಬಿಜೆಪಿ ಅನಗತ್ಯ, ನಿಷ್ಪ್ರಯೋಜಕ ಅಭಿಯಾನಗಳನ್ನು ಮಾಡುತ್ತಿದ್ದಾರೆ. ಜನರು ಅಮಾಯಕರಲ್ಲ, ಯಾರು ಇದನ್ನೆಲ್ಲ ಮಾಡುತ್ತಿದ್ದಾರೆ, ಯಾತಕ್ಕಾಗಿ ಮಾಡುತ್ತಿದ್ದಾರೆ ಅನ್ನೋದನ್ನು ಅವರು ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲರು, ಎಂದು ಸಿದ್ದರಾಮಯ್ಯ ಹೇಳಿದರು.

ಧ್ವನಿವರ್ಧಕಗಳನ್ನು ಮಸೀದಿಯಲ್ಲಿ ಬಳಸುತ್ತಾರೆ, ದೇವಸ್ಥಾನ ಮತ್ತು ಚರ್ಚ್ ಗಳಲ್ಲೂ ಬಳಸುತ್ತಾರೆ, ಬಹಳ ವರ್ಷಗಳಿಂದ ನಡೆದುಕೊಂಡ ಬಂದಿರುವ ಪದ್ಧತಿ ಇದಾಗಿರುವುದರಿಂದ ಯಾರಿಗೂ ತೊಂದರೆಯಾಗಿಲ್ಲ ಎಂದ ಸಿದ್ದರಾಮಯ್ಯನವರು, ಮಾಧ್ಯಮದ ಪ್ರತಿನಿಧಿಯೊಬ್ಬರು ಬಿಜೆಪಿ ಶಾಸಕ ಎಮ್ ಪಿ ರೇಣುಕಾಚಾರ್ಯರ ವಿಷಯ ಪ್ರಸ್ತಾಪ ಮಾಡಿದಾಗ, ಅವನು ಹೇಳಿದ್ದಕ್ಕೆ ನಾನು ಪ್ರತಿಕ್ರಿಯೆ ನೀಡೋದಿಲ್ಲ, ಅವನೊಬ್ಬ ಮತಾಂಧ ಎಂದು ಹೇಳಿದರು.

ಇದನ್ನೂ ಓದಿ:  ಬಿಜೆಪಿ ಕುಮ್ಮಕ್ಕಿನಿಂದಲೇ ವಿವಾದ ಸೃಷ್ಟಿ; ಪರಿಸ್ಥಿತಿ ವಿಕೋಪಕ್ಕೂ ಮುನ್ನ ಬೊಮ್ಮಾಯಿ ರಾಜೀನಾಮೆ ನೀಡಿ ಮನೆಗೆ ಹೋಗಲಿ -ಸಿದ್ದರಾಮಯ್ಯ