ತೊದಲು ನುಡಿಯಲ್ಲೇ ಅಚ್ಚರಿ ಮೂಡಿಸಿದ ಪುಟಾಣಿ: ವೈಷ್ಣವಿಯ ಟ್ಯಾಲೆಂಟ್ಗೆ ಮನಸೋತ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್
ಬಾಗಲಕೋಟೆಯ ನಾಲ್ಕು ವರ್ಷದ ಬಾಲಕಿ ವೈಷ್ಣವಿ ಕಡಗದ ತನ್ನ ಅಸಾಧಾರಣ ಪ್ರತಿಭೆಯಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದಿದ್ದಾಳೆ. ತೊದಲು ನುಡಿಯಲ್ಲೇ ಶ್ಲೋಕ, ವಚನ, ವರ್ಣಮಾಲೆ, ಸಂಖ್ಯೆಗಳು ಮತ್ತು ಪದಗಳನ್ನು ನೆನಪಿಟ್ಟುಕೊಂಡು ಹೇಳುವ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿದ್ದಾಳೆ. ಈಕೆಯ ಸಾಧನೆಗೆ ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ.
ಬಾಗಲಕೋಟೆ, ಸೆಪ್ಟೆಂಬರ್ 27: ‘ಬೆಳೆಯುವ ಸಿರಿ ಮೊಳಕೆಯಲ್ಲಿ’ ಎಂಬ ಗಾದೆಗೆ ತಕ್ಕಂತೆ, ಬಾಗಲಕೋಟೆಯ ನಾಲ್ಕು ವರ್ಷದ ಬಾಲಕಿ ವೈಷ್ಣವಿ ಪ್ರದೀಪ್ ಕಡಗದ ತನ್ನ ಅಸಾಧಾರಣ ಪ್ರತಿಭೆಯಿಂದ ಎಲ್ಲರ ಗಮನ ಸೆಳೆದಿದ್ದಾಳೆ. ತೊದಲು ನುಡಿಯಲ್ಲೇ ಕನ್ನಡ, ಇಂಗ್ಲಿಷ್ ವರ್ಣಮಾಲೆಗಳು, 1 ರಿಂದ 120 ರವರೆಗಿನ ಅಂಕಿ ಸಂಖ್ಯೆಗಳು (ಹಿಮ್ಮುಖವಾಗಿ), ಶ್ಲೋಕಗಳು, ವಚನಗಳು, ಮೂರು ಪ್ರಾಸಗಳು, 14 ಹಿಂದಿ ಪದಗಳು ಮತ್ತು 15 ಕನ್ನಡ ಪದಗಳನ್ನು ನಿರರ್ಗಳವಾಗಿ ಹೇಳುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲೆ ನಿರ್ಮಿಸಿದ್ದಾಳೆ. ಮಗಳ ಪ್ರತಿಭೆ ಕಂಡು ತಂದೆ ಪ್ರದೀಪ್ ಹಾಗೂ ತಾಯಿ ಪ್ರಿಯಾಂಕಾ ಕಡಗದ ವಿಡಿಯೊ ಮಾಡಿ, ಜುಲೈ ತಿಂಗಳಲ್ಲಿ ಆನ್‌ಲೈನ್ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ಗೆ ಸಲ್ಲಿಸಿದ್ದರು. ಅವರ ಅರ್ಜಿಯನ್ನು ಪರಿಗಣಿಸಿದ ಸಂಸ್ಥೆಯು ಆಗಸ್ಟ್ 13 ರಂದು ವೈಷ್ಣವಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಅಚೀವರ್ ಪ್ರಶಸ್ತಿ ಮತ್ತು ಪದಕವನ್ನು ಘೋಷಿಸಿದೆ. ಸದ್ಯ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
