ವಿಶ್ವವಿಖ್ಯಾತ ಮೈಸೂರು ದಸರಾ ಸೇರಿ 80 ಅವಾರ್ಡ್​ ಪಡೆದಿರೋ ಬೆಟ್ಟದ ಹುಲಿ ಖ್ಯಾತಿಯ ಟಗರು ಸಾವು

ವಿಶ್ವವಿಖ್ಯಾತ ಮೈಸೂರು ದಸರಾ ಸೇರಿ 80 ಅವಾರ್ಡ್​ ಪಡೆದಿರೋ ಬೆಟ್ಟದ ಹುಲಿ ಖ್ಯಾತಿಯ  ಟಗರು ಸಾವು
| Updated By: ಆಯೇಷಾ ಬಾನು

Updated on: Dec 16, 2021 | 9:27 AM

ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಕಲಹಳ್ಳಿ ಗ್ರಾಮದ ಪಾಂಡು ಗಣಿ ಸುಮಾರು ₹5.01 ಲಕ್ಷ ಕೊಟ್ಟು ಖರೀದಿ ಮಾಡಿದ್ದರು. ಆದ್ರೆ ಈಗ ಬೆಟ್ಟದ ಹುಲಿ ಹೆಸರಿನ ಟಗರು ಮೃತಪಟ್ಟಿದ್ದು ಟಗರನ್ನು ಮನೆ ಮಗನಂತೆ ನೋಡಿಕೊಂಡಿದ್ದ ಮಾಲೀಕ ಪಾಂಡು ಗಣಿ ಕಣ್ಣೀರು ಹಾಕಿದ್ದಾರೆ.

ಬಾಗಲಕೋಟೆ: ಪ್ರಶಸ್ತಿಗಳ ರಾಜ, ಬೆಟ್ಟದ ಹುಲಿ ಎಂದೇ ಹೆಸರುವಾಸಿಯಾದ ಟಗರು ಮೃತಪಟ್ಟಿದೆ. ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಕಲಹಳ್ಳಿಯ ಪಾಂಡು ಗಣಿಗೆ ಸೇರಿದ ಈ ಟಗರು ಅನಾರೋಗ್ಯದಿಂದ ಸಾವನ್ನಪ್ಪಿದೆ.

ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಕಲಹಳ್ಳಿ ಗ್ರಾಮದ ಪಾಂಡು ಗಣಿ ಸುಮಾರು ₹5.01 ಲಕ್ಷ ಕೊಟ್ಟು ಖರೀದಿ ಮಾಡಿದ್ದರು. ಆದ್ರೆ ಈಗ ಬೆಟ್ಟದ ಹುಲಿ ಹೆಸರಿನ ಟಗರು ಮೃತಪಟ್ಟಿದ್ದು ಟಗರನ್ನು ಮನೆ ಮಗನಂತೆ ನೋಡಿಕೊಂಡಿದ್ದ ಮಾಲೀಕ ಪಾಂಡು ಗಣಿ ಕಣ್ಣೀರು ಹಾಕಿದ್ದಾರೆ. ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.

ಟಗರಿನ ಕಾಳಗದಲ್ಲಿ ಈ ಬೆಟ್ಟದ ಹುಲಿಯದ್ದೇ ದರ್ಬಾರ್
ಇನ್ನು ಬೆಟ್ಟದ ಹುಲಿ ಎಂದೇ ಹೆಸರುವಾಸಿಯಾದ ಟಗರು ವಿಶ್ವವಿಖ್ಯಾತ ಮೈಸೂರು ದಸರಾ ಸೇರಿದಂತೆ ರಾಜ್ಯ ಹಾಗೂ ಹೊರರಾಜ್ಯಗಳ ಟಗರಿನ ಕಾಳಗದಲ್ಲಿ ಹೆಸರು ಮಾಡಿತ್ತು. ಈವರೆಗೂ 80ಕ್ಕೂ ಅಧಿಕ ಪ್ರಶಸ್ತಿ ಬಾಚಿಕೊಂಡಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬೆಟ್ಟದ ಹುಲಿ ಅಭಿಮಾನಿಗಳಿದ್ದಾರೆ. ಟಗರು ಸತ್ತ ಸುದ್ದಿ ಕೇಳಿ ಕಲಹಳ್ಳಿಗೆ ನೂರಾರು ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಗ್ರಾಮದಲ್ಲಿ ಟ್ರ್ಯಾಕ್ಟರ್ ಮೂಲಕ ಮೃತ ಟಗರಿನ ಮೆರವಣಿಗೆ ಮಾಡಲಾಗಿದೆ. ಟಗರಿಗೆ ಭಂಡಾರ ಬಳಿದು ದುಃಖದಿಂದ ಅಂತಿಮ ವಿದಾಯ ಹೇಳಲಾಗುತ್ತಿದೆ.

ಟಗರಿನ ಅಂತಿಮ ಸಂಸ್ಕಾರದಲ್ಲಿ ಅಂದಾಜು 500ಕ್ಕೂ ಅಧಿಕ ಜನರು ಭಾಗಿಯಾಗಿದ್ದಾರೆ. ಗದಗ, ಧಾರವಾಡ, ಮೈಸೂರ, ಗಜೇಂದ್ರಗಡ ಸೇರಿ ವಿವಿಧೆಡೆಯಿಂದ ಟಗರಿನ ಅಂತಿಮ ದರ್ಶನಕ್ಕೆ ಅಭಿಮಾನಿಗಳು ಬಂದಿದ್ದಾರೆ. ಗದಗ ಜಿಲ್ಲೆ ಗಜೇಂದ್ರಗಡದಲ್ಲಿ ಯುವಕರಿಂದ ವೃತ್ತದಲ್ಲಿ ಟಗರಿನ ಕಟೌಟ್ ಕಟ್ಟಿ, ದೀಪ ಬೆಳಗಿ ಶ್ರದ್ಧಾಂಜಲಿ ಸಲ್ಲಿಸಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ವಿವಿಧ ಜಿಲ್ಲೆಗಳ‌ ಜನರು ಶ್ರದ್ಧಾಂಜಲಿ ಸೂಚಿಸಿದ್ದಾರೆ. ಟಗರಿನ‌ ಭಾವಚಿತ್ರ ವಿಡಿಯೋ ತುಣುಕುಗಳು ವೈರಲ್ ಆಗುತ್ತಿವೆ.

Follow us