AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾದಾಮಿ ಬನಶಂಕರಿ ಅಮ್ಮ ದೇವಾಲಯದ ಜಾತ್ರಾ ಮಹೋತ್ಸವ ಒಂದು ತಿಂಗಳು ನಡೆಯುತ್ತದೆ!

ಬಾದಾಮಿ ಬನಶಂಕರಿ ಅಮ್ಮ ದೇವಾಲಯದ ಜಾತ್ರಾ ಮಹೋತ್ಸವ ಒಂದು ತಿಂಗಳು ನಡೆಯುತ್ತದೆ!

TV9 Web
| Edited By: |

Updated on: Sep 10, 2021 | 9:05 PM

Share

ಬನಶಂಕರಿ ದೇವಾಲಯದಲ್ಲಿರುವ ದೇವಿಯ ವಿಗ್ರಹವನ್ನು ಕಪ್ಪು ಕಲ್ಲಿನಿಂದ ಕೆತ್ತಲಾಗಿದ್ದು ಆಕೆಯು ಸಿಂಹದ ಮೇಲೆ ಕುಳಿತಿರುವ ಭಂಗಿಯಲ್ಲಿದ್ದು ಆಕೆ ಪಾದಗಳಡಿಯಲ್ಲಿ ರಾಕ್ಷಸನನ್ನು ಕಾಣಬಹುದು.

ಐತಿಹಾಸಿಕ ಮಹತ್ವವುಳ್ಳ ರಾಜ್ಯದ ಅನೇಕ ದೇವಾಲಯಗಳಲ್ಲಿ, ಪೌರಾಣಿಕ ಹಿನ್ನೆಲೆಯನ್ನು ಹೊಂದಿರುವ ಬಾಗಲಕೋಟೆ ಜಿಲ್ಲೆ ಬಾದಾಮಿಯಲ್ಲಿರುವ ಬನಶಂಕರಿ ಅಮ್ಮ ದೇವಸ್ಥಾನವೂ ಒಂದು. ಈ ದೇವಾಲಯ ಸುಮಾರು 14 ಶತಮಾನಗಳಷ್ಟು ಹಳೆಯದು. ದೇವಾಲಯದ ಜೀರ್ಣೋದ್ಧಾರ ಕಾರ್ಯ ನೆರವೇರಿಸಿದ್ದು ಹದಿನೇಳನೇ ಶತಮಾನದಲ್ಲಿ ಪ್ರಬಲ ಮರಾಠಾ ಅರಸನಾಗಿದ್ದ ಪರಶುರಾಮ ಆಗ್ಲೆಯಾದರೂ ಅದನ್ನು ಕಟ್ಟಿದ್ದು 7ನೇ ಶತಮಾನದಲ್ಲಿ ಎಂದು ಇತಿಹಾಸದಲ್ಲಿ ದಾಖಲಾಗಿದೆ. ದೇವಸ್ಥಾನವನ್ನು ಕಟ್ಟಿ ಅದರಲ್ಲಿ ಬನಶಂಕರಿ ಅಮ್ಮನನ್ನು ಪ್ರತಿಷ್ಠಾಪಿಸಿದ್ದು ಕಲ್ಯಾಣದ ಚಾಲುಕ್ಯರು.

ಬಾದಾಮಿ ಬನಶಂಕರಿ ಅಮ್ಮನ ದೇವಸ್ಥಾನಕ್ಕಿರುವ ಪೌರಾಣಿಕ ಹಿನ್ನೆಲೆಯನ್ನು ನಾವು ಗಮನಿಸಿದ್ದೇಯಾದರೆ, ಸ್ಕಂದ ಪುರಾಣ ಮತ್ತು ಪದ್ಮ ಪುರಾಣದ ಪ್ರಕಾರ ಬನಶಂಕರಿಯಲ್ಲಿ ದುರ್ಗಮಾಸುರನೆಂಬ ರಾಕ್ಷಸನನ್ನು ಸಂಹರಿಸಿದ ದೇವಿ ಪಾರ್ವತಿಯ ಅವತಾರವಾದ ಚಾಲುಕ್ಯರ ಕುಲದೇವಿಯು ಈ ದೇವಾಲಯದಲ್ಲಿ ಆರಾಧಿಸಲ್ಪಡುವ ದೇವತೆ. ಬನಶಂಕರಿ ದೇವಾಲಯದಲ್ಲಿರುವ ದೇವಿಯ ವಿಗ್ರಹವನ್ನು ಕಪ್ಪು ಕಲ್ಲಿನಿಂದ ಕೆತ್ತಲಾಗಿದ್ದು ಆಕೆಯು ಸಿಂಹದ ಮೇಲೆ ಕುಳಿತಿರುವ ಭಂಗಿಯಲ್ಲಿದ್ದು ಆಕೆ ಪಾದಗಳಡಿಯಲ್ಲಿ ರಾಕ್ಷಸನನ್ನು ಕಾಣಬಹುದು.

ಬನಶಂಕರಿ ದೇವಿಯು ತನ್ನ ಎಂಟು ಕೈಗಳಲ್ಲಿ ತ್ರಿಶೂಲ, ಘಂಟೆ, ಕಮಲಾಪತ್ರ, ಡಮರುಗ, ಖಡ್ಗ ಮತ್ತು ಪವಿತ್ರ ವೇದ ಹಿಡಿದಿರುವುದನ್ನು ಕಾಣಬಹುದಾಗಿದೆ. ತಿಲಕಾರಣ್ಯದಲ್ಲಿರುವ ಈ ದೇವಾಲಯವು ಬನ ಮತ್ತು ಶಂಕರಿ ಎಂಬ ಎರಡು ಪದಗಳ ಸಂಯೋಜನೆಯಿಂದ ಹೆಸರನ್ನು ಪಡೆದುಕೊಂಡಿದೆ. ಬನ ಎಂದರೆ ಕಾಡು ಮತ್ತು ಶಂಕರಿ ಎಂದರೆ ಶಿವ ಪ್ರಿಯೆ ಅಥವಾ ಪಾರ್ವತಿಯನ್ನು ಬಣ್ಣಿಸುವ ರೀತಿ.

ಬನಶಂಕರಿ ಅಮ್ಮನ ದೇವಾಲಯದಲ್ಲಿ ದ್ರಾವಿಡ ಶೈಲಿಯ ವಾಸ್ತುಶಿಲ್ಪವನ್ನು ನೋಡಬಹುದಾಗಿದೆ. ಈ ದೇವಾಲಯಕ್ಕೆ ಪುಷ್ಯಮಾಸವಾದ ಜನವರಿ ಮತ್ತು ಫೆಬ್ರವರಿ ತಿಂಗಳಿನಲ್ಲಿ ಅತಿ ದೊಡ್ಡ ಜಾತ್ರಾ ಮಹೋತ್ಸವ ನಡೆಯುತ್ತದೆ. ಇಲ್ಲಿ ನಡೆಯುವ ಜಾತ್ರೆಯ ವೈಶಿಷ್ಟ್ಯತೆ ಎಂದರೆ ಅದು ಒಂದು ತಿಂಗಳು ಕಾಲ ಜಾರಿಯಲ್ಲಿರುತ್ತದೆ.

ಜಾತ್ರೆಯ ಸಂದರ್ಭದಲ್ಲಿ ಹದಿನೈದಕ್ಕಿಂತ ಹೆಚ್ಚು ನಾಟಕ ಕಂಪನಿಗಳು ಇಲ್ಲಿ ಕ್ಯಾಂಪ್ ಹೂಡಿ ಪ್ರತಿದಿನ ನಾಟಕ ಪ್ರದರ್ಶಿಸುತ್ತವೆ. ರಾಜ್ಯದ ಮೂಲೆ ಮೂಲೆಗಳಿಂದ ಹರಕೆ ಹೊತ್ತು ಬರುವ ಜನರು ಬನಶಂಕರಿ ಅಮ್ಮನಿಗೆ ಆರಾಧನೆ ಸಲ್ಲಿಸಿ ಇಷ್ಟಾರ್ಥಗಳನ್ನು ನೆರವೇರಿಸುವಂತೆ ಪ್ರಾರ್ಥಿಸುತ್ತಾರೆ.

ಇದನ್ನೂ ಓದಿ:   ರಾಷ್ಟ್ರೀಯ ಹೆದ್ದಾರಿಯಲ್ಲಿ ಇಬ್ಬರು ಕೇಂದ್ರ ಸಚಿವರಿದ್ದ ಯುದ್ಧ ವಿಮಾನ ತುರ್ತು ಭೂ ಸ್ಪರ್ಶ; ವಿಡಿಯೋ ಇಲ್ಲಿದೆ