ಬೆಳಗಾವಿ: ಕೃಷ್ಣಾ ನದಿ ಪ್ರವಾಹಕ್ಕೆ ಚಿಕ್ಕೋಡಿ ಸುತ್ತಮುತ್ತ 7 ಸೇತುವೆಗಳು ಜಲಾವೃತ
ಮುಂಗಾರು ಮಳೆ ಅಬ್ಬರ ಜೋರಾಗಿರುವುದು ಮತ್ತು ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವುದರ ಪರಿಣಾಮ ಬೆಳಗಾವಿ ಮೇಲಾಗಿದೆ. ಜಿಲ್ಲೆಯಲ್ಲಿ ಕೃಷ್ಣಾ, ದೂದಗಂಗಾ ನದಿ ಪ್ರವಾಹದೋಪಾದಿಯಲ್ಲಿ ಹರಿಯುತ್ತಿದ್ದು, ಚಿಕ್ಕೋಡಿ ವ್ಯಾಪ್ತಿಯ 7 ಸೇತುವೆಗಳು ಮುಳುಗಡೆಯಾಗಿವೆ. ಪರಿಣಾಮವಾಗಿ ಜನರು ಸಂಚಾರಕ್ಕೆ ಪರ್ಯಾಯ ಮಾರ್ಗಗಳನ್ನು ಅವಲಂಬಿಸಬೇಕಾಗಿ ಬಂದಿದೆ. ಬೆಳಗಾವಿ ಪ್ರವಾಹದ ವಿಡಿಯೋ ಇಲ್ಲಿದೆ.
ಚಿಕ್ಕೋಡಿ, ಜೂನ್ 23: ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಮುಂಗಾರು ಮಳೆ ಅಬ್ಬರ ಮುಂದುವರಿದಿದ್ದು, ಕೃಷ್ಣಾ ನದಿಗೆ ಒಂದು ಲಕ್ಷ ಕ್ಯೂಸೆಕ್ ನೀರು ಒಳ ಹರಿವು ಇದೆ. ನದಿಯಲ್ಲಿ ಪ್ರವಾಹ ಹೆಚ್ಚಾದ ಕಾರಣ ಚಿಕ್ಕೋಡಿ ವ್ಯಾಪ್ತಿಯ 7 ಕೆಳ ಹಂತದ ಸೇತುವೆಗಳು ಜಲಾವೃತಗೊಂಡಿವೆ. ದೂದಗಂಗಾ, ವೇದಗಂಗಾ, ಕೃಷ್ಣಾ ನದಿಗೆ ಅಡ್ಡಲಾಗಿರುವ ಸೇತುವೆಗಳು ಮುಳುಗಡೆಯಾಗಿವೆ. ದೂದಗಂಗಾ ನದಿಯ ಮಲ್ಲಿಕವಾಡ-ದತ್ತವಾಡ ಸಂಪರ್ಕ ಸೇತುವೆ, ಭೋಜ-ಕಾರದಗಾ ಗ್ರಾಮಗಳ ಸಂಪರ್ಕ ಸೇತುವೆ ಜಲಾವೃತಗೊಂಡಿವೆ.
ವೇದಗಂಗಾ ನದಿಯ ಭಾರವಾಡ-ಕುನ್ನೂರು, ಭೋಜವಾಡಿ-ಕುನ್ನೂರು, ಅಕ್ಕೋಳ-ಸಿದ್ನಾಳ ಗ್ರಾಮಗಳ ಸಂಪರ್ಕ ಸೇತುವೆ ಮುಳುಗಡೆಯಾಗಿವೆ. ಹಾಗೆಯೇ, ಕೃಷ್ಣಾ ನದಿಗೆ ಅಡ್ಡಲಾಗಿರುವ ಯಡೂರು-ಕಲ್ಲೋಳ ಸೇತುವೆ, ಭಾವನಸೌಂದತ್ತಿ-ಮಾಂಜರಿ ಸಂಪರ್ಕ ಸೇತುವೆ ಜಲಾವೃತಗೊಂಡಿವೆ. ಜನರು ಪರ್ಯಾಯ ಮಾರ್ಗಗಳ ಮೂಲಕ ಸಂಚಾರ ಮಾಡುತ್ತಿದ್ದಾರೆ.