ನಿರ್ಮಾಣ ಹಂತದ ನಾಡಪ್ರಭು ಕೆಂಪೇಗೌಡ ಲೇಔಟ್ನಲ್ಲೂ ಜಲ ಪ್ರವಾಹ
ಬೆಂಗಳೂರಿನಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆ ಅನೇಕ ಅಧ್ವಾನಗಳನ್ನು ಸೃಷ್ಟಿಸಿದೆ. ನಗರದ ಅನೇಕ ರಸ್ತೆಗಳು ಜಲಾವೃತಗೊಂಡಿದ್ದು, ಅಪಾರ್ಟ್ಮೆಂಟ್‌ಗಳಿಗೆ ನೀರು ನುಗ್ಗಿದೆ. ಇದೀಗ ಹೊಸದಾಗಿ ನಿರ್ಮಾಣವಾಗುತ್ತಿರುವ ನಾಡಪ್ರಭು ಕೆಂಪೇಗೌಡ ಲೇಔಟ್‌ಗೂ ನೀರು ನುಗ್ಗಿ ಅವ್ಯವಸ್ಥೆ ಸೃಷ್ಟಿಯಾಗಿದೆ. ನಾಡಪ್ರಭು ಕೆಂಪೇಗೌಡ ಲೇಔಟ್ ದೃಶ್ಯ ಇಲ್ಲಿದೆ ನೋಡಿ.
ಬೆಂಗಳೂರು, ಮೇ 20: ಬೆಂಗಳೂರು ಮಳೆ ಭಾರಿ ಅವಾಂತರಗಳನ್ನೇ ಸೃಷ್ಟಿಸಿದೆ. ಹೊಸೂರು, ಸಿಲ್ಕ್ ಬೋರ್ಡ್ ಜಂಕ್ಷನ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ರಸ್ತೆಗಳು ಜಲಾವೃತಗೊಂಡಿದ್ದರೆ, ಹೆಣ್ಣೂರು ಸೇರಿದಂತೆ ಅನೇಕ ಕಡೆಗಳಲ್ಲಿ ಅಪಾರ್ಟ್ಮೆಂಟ್‌ಗಳಿಗೆ ನೀರು ನುಗ್ಗಿದೆ. ಅನಧಿಕೃತ ಒತ್ತುವರಿ, ಸಮರ್ಪಕ ಒಳಚರಂಡಿ ವ್ಯವಸ್ಥೆ ಇಲ್ಲದಿರುವುದು ಈ ರೀತಿಯ ಅವಾಂತರಗಳಿಗೆ ಕಾರಣ ಎನ್ನಲಾಗಿದೆ. ಆದರೆ, ಅತ್ತ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವೇ ನಿರ್ಮಾಣ ಮಾಡುತ್ತಿರುವ ನಾಡಪ್ರಭು ಕೆಂಪೇಗೌಡ ಲೇಔಟ್ ಪರಿಸ್ಥಿತಿಯೂ ಇದಕ್ಕಿಂತ ಹೊರತಾಗಿಲ್ಲ.
ಭಾನುವಾರ ಹಾಗೂ ಸೋಮವಾರ ಎಡೆಬಿಡದೆ ಸುರಿದ ಭಾರಿ ಮಳೆಗೆ ನಾಡಪ್ರಭು ಕೆಂಪೇಗೌಡ ಲೇಔಟ್ನ ಬಹುತೇಕ ಭಾಗಗಳಲ್ಲಿ ಪ್ರವಾಹದ ಪರಿಸ್ಥಿತಿ ಉಂಟಾಗಿದೆ. ಕೆಂಪೇಗೌಡ ಲೇಔಟ್ ಕಾಮಗಾರಿ ಶೇಕಡ 90ರಷ್ಟು ಪೂರ್ಣಗೊಂಡಿದೆ ಎಂದು ಕೆಲವೇ ದಿನಗಳ ಹಿಂದೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಜಯರಾಮ್ ತಿಳಿಸಿದ್ದರು. ಆದರೆ ಇದು ಶೇಕಡ 1 ರಷ್ಟು ಕೂಡ ವಾಸಯೋಗ್ಯವಾಗಿಲ್ಲ ಎಂಬುದು ಮಳೆಯಿಂದ ಸಾಬೀತಾಗಿದೆ ಎಂದು ಸಾರ್ವಜನಿಕರು ಆಕ್ಷೇಪಿಸಿದ್ದಾರೆ. ಅಸಮರ್ಪಕ ಚರಂಡಿ ವ್ಯವಸ್ಥೆ, ಅವೈಜ್ಞಾನಿಕ ಕಾಮಗಾರಿಯಿಂದ ಹೀಗಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

