ಬೆಂಗಳೂರಿನ ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬರು ಶ್ರೀರಂಗಪಟ್ಟಣ ಬಳಿ ತಮ್ಮ ದುಬಾರಿ ಕಾರನ್ನು ಕಾವೇರಿ ನದಿಗೆ ದೂಡಿ ವಾಪಸ್ಸಾದರು!

ಬೆಂಗಳೂರಿನ ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬರು ಶ್ರೀರಂಗಪಟ್ಟಣ ಬಳಿ ತಮ್ಮ ದುಬಾರಿ ಕಾರನ್ನು ಕಾವೇರಿ ನದಿಗೆ ದೂಡಿ ವಾಪಸ್ಸಾದರು!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: May 27, 2022 | 4:30 PM

ಶ್ರೀರಂಗಪಟ್ಟಣದ ಪೊಲೀಸರು ರೂಪೇಶ್ ಅವರ ವಿಳಾಸ ಮತ್ತು ಫೋನ್ ನಂಬರನ್ನು ಪತ್ತೆ ಮಾಡಿ ಠಾಣೆಗೆ ಕರೆಸಿದ್ದಾರೆ. ಪೊಲೀಸರು ಕೇಳಿದ ಪ್ರಶ್ನೆಗಳಿಗೆ ರೂಪೇಶ್ ಅಸಂಬದ್ಧ ಉತ್ತರಗಳನ್ನು ನೀಡಿದ್ದಾರೆ. ಆಗಲೇ ಅವರು ಮಾನಸಿಕವಾಗಿ ಅಸ್ವಸ್ಥರಾಗಿರುವ ಸಂಗತಿ ಪೊಲೀಸರಿಗೆ ಗೊತ್ತಾಗಿದೆ.

ಮಂಡ್ಯ: ಇಲ್ಲಿರುವ ವ್ಯಕ್ತಿಯನ್ನು ನೋಡಿ, ಇವರ ಹೆಸರು ರೂಪೇಶ್ (Roopesh) ಮತ್ತು ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಿವಾಸಿಯಾಗಿದ್ದಾರೆ. ಹಾಗೆಯೇ, ನೀರಿನಲ್ಲಿ ಮುಳುಗಿರುವ ಈ ಐಷಾರಾಮಿ ಕಾರನ್ನು ನೋಡಿ. ಈ ಕಾರು ಇವರದ್ದೇ. ಕಾರು ನೀರಲ್ಲಿ ಇವರು ಯಾಕೆ ಹೀಗೆ, ಒಂದು ಕಚ್ಚಾ ರಸ್ತೆಯಲ್ಲಿ ಇವರು ಯಾಕೆ ಹೀಗೆ ಅರೆಬೆತ್ತಲೆಯಾಗಿ ನಿಂತಿದ್ದಾರೆಂದು ನಿಮ್ಮ ಪ್ರಶ್ನೆಯಾಗಿರಬಹುದು. ಓಕೆ ವಿಷಯವೇನೆಂದರೆ ರೂಪೇಶ್ ಅವರ ಕಾರು ಶುಕ್ರವಾರ ಬೆಳಗ್ಗೆ ಮಂಡ್ಯ ಶ್ರೀರಂಗಪಟ್ಟಣದ (Srirangapatna) ನಿಮಿಷಾಂಬ ದೇವಾಲಯದ ಹತ್ತಿರ ಕಾವೇರಿ ನದಿ (Cauvery River) ನೀರಲ್ಲಿ ಪತ್ತೆಯಾಗಿದೆ. ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಖುದ್ದು ರೂಪೇಶ್ ಅವರೇ ಕಾರನ್ನು ನದಿಗೆ ನೂಕಿ ಅಲ್ಲಿಂದ ಜಾಗ ಖಾಲಿ ಮಾಡಿದ್ದಾರೆ. ಕಾರಿನ ರಿಜಿಸ್ಟ್ರೇಷನ್ ನಂಬರ್ ನಿಮಗೆ ಕಾಣುತ್ತಿದೆ. ಅದು ಹರಿಯಾಣ ರಾಜ್ಯದಲ್ಲಿ ನೋಂದಣಿಯಾಗಿದೆ. ನಿಸ್ಸಂದೇಹವಾಗಿ ದುಬಾರಿ ಬೆಲೆಯ ಕಾರಿದು.

ಅದು ಸರಿ, ರೂಪೇಶ್ ಕಾರನ್ನು ನೀರಲ್ಲಿ ದೂಡಿ ನಾಪತ್ತೆಯಾಗಿದ್ದು ಯಾಕೆ? ಕಾರಿನ ನೋಂದಣಿ ಸಂಖ್ಯೆ ಆಧಾರದ ಮೇಲೆ ಶ್ರೀರಂಗಪಟ್ಟಣದ ಪೊಲೀಸರು ರೂಪೇಶ್ ಅವರ ವಿಳಾಸ ಮತ್ತು ಫೋನ್ ನಂಬರನ್ನು ಪತ್ತೆ ಮಾಡಿ ಠಾಣೆಗೆ ಕರೆಸಿದ್ದಾರೆ. ಪೊಲೀಸರು ಕೇಳಿದ ಪ್ರಶ್ನೆಗಳಿಗೆ ರೂಪೇಶ್ ಅಸಂಬದ್ಧ ಉತ್ತರಗಳನ್ನು ನೀಡಿದ್ದಾರೆ. ಆಗಲೇ ಅವರು ಮಾನಸಿಕವಾಗಿ ಅಸ್ವಸ್ಥರಾಗಿರುವ ಸಂಗತಿ ಪೊಲೀಸರಿಗೆ ಗೊತ್ತಾಗಿದೆ.

ರೂಪೇಶ್ ಅವರ ತಾಯಿ ಇತ್ತೀಚಿಗೆ ಸ್ವರ್ಗವಾಸಿಗಳಾಗಿದ್ದಾರೆ ಮತ್ತು ಅವರ ಸಾವಿನ ನಂತರ ತೀವ್ರ ಸ್ವರೂಪದ ಆಘಾತಕ್ಕೊಳಗಾಗಿರುವ ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿರುವರೆಂದು ಹೇಳಲಾಗಿದೆ. ಖಿನ್ನತೆಯಿಂದ ಬಳಲುತ್ತಿರುವುದರಿಂದಲೇ ಅವರು ಪೊಲೀಸರು ಕೇಳಿದ ಪ್ರಶ್ನೆಗಳಿಗೆ ಸಮಂಜಸ ಉತ್ತರ ನೀಡಿಲ್ಲ. ಶ್ರೀರಂಗಪಟ್ಟಣದ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.