ಬಿಡದಿ ಟೌನ್ಶಿಪ್ ಯೋಜನೆಗೆ ಹೈಕೋರ್ಟ್ನಿಂದ ಯಾವುದೇ ಸಾಮಾನ್ಯ ತಡೆ ಇಲ್ಲ: ಪ್ರಾಧಿಕಾರ ಸ್ಪಷ್ಟನೆ
ಬಿಡದಿ ಟೌನ್ಶಿಪ್ ಯೋಜನೆಗೆ ಹೈಕೋರ್ಟ್ ಬ್ರೇಕ್ ಹಾಕಿದೆ ಎಂಬ ವದಂತಿಗಳ ನಡುವೆ, ಭೂಸ್ವಾಧೀನ ಪ್ರಕ್ರಿಯೆಗೆ ಯಾವುದೇ ಸಾಮಾನ್ಯ ತಡೆಯಾಜ್ಞೆ ಇಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಆದರೂ, ರಿಟ್ ಅರ್ಜಿ ಸಲ್ಲಿಸಿರುವ ರೈತರ ಜಮೀನುಗಳಿಗೆ ಮಾತ್ರ ಪ್ರತ್ಯೇಕ ಕಾನೂನು ರಕ್ಷಣೆ ಇದೆ. ಪ್ರಾಧಿಕಾರವು ಪರಿಹಾರ ಅವಾರ್ಡ್ ಸಿದ್ಧಪಡಿಸಿ ಹೈಕೋರ್ಟ್ಗೆ ಸಲ್ಲಿಸಬೇಕು ಎಂದು ಆದೇಶಿಸಲಾಗಿದೆ.
ಬೆಂಗಳೂರು, ಆಗಸ್ಟ್ 26: ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆ ಅಡಿ ಬಿಡದಿ ಟೌನ್ಶಿಪ್ಗೆ ಹೈಕೋರ್ಟ್ ಸಂಪೂರ್ಣ ತಡೆಯಾಜ್ಞೆ ನೀಡಿದೆ ಎಂಬ ವಾದವನ್ನು ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ ತಳ್ಳಿಹಾಕಿದೆ. ಭೂಸ್ವಾಧೀನ ಪ್ರಕ್ರಿಯೆಗೆ ಯಾವುದೇ ಸಾಮಾನ್ಯ ತಡೆಯಾಜ್ಞೆ ಇಲ್ಲ ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ. ಯೋಜನೆಗೆ ಬ್ಲಾಂಕೆಟ್ ಸ್ಟೇ ನೀಡಿಲ್ಲ, ಇಡೀ ಭೂಸ್ವಾಧೀನ ಪ್ರಕ್ರಿಯೆ ಸ್ಥಗಿತಗೊಳ್ಳುವುದಿಲ್ಲ ಎಂದು ಆಗಸ್ಟ್ 25ರಂದು ನಡೆದ ವಿಚಾರಣೆಯಲ್ಲಿ ಹೈಕೋರ್ಟ್ ಆದೇಶದಲ್ಲಿ ತಿಳಿಸಿದೆ ಎಂದು ಪ್ರಾಧಿಕಾರ ಮಾಹಿತಿ ನೀಡಿದೆ.
ಆದಾಗ್ಯೂ, ಭೂಸ್ವಾಧೀನ ಕ್ರಮವನ್ನು ಪ್ರಶ್ನಿಸಿ ರಿಟ್ ಅರ್ಜಿ ಸಲ್ಲಿಸಿರುವ ಕೆಲ ಭೂಮಾಲೀಕರ ಜಮೀನುಗಳಿಗೆ ಮಾತ್ರ ಪ್ರತ್ಯೇಕ ಕಾನೂನು ರಕ್ಷಣೆ ನೀಡಲಾಗಿದೆ. ಈ ಜಮೀನುಗಳ ಕುರಿತು ಮುಂದಿನ ಕ್ರಮಗಳು ಹೈಕೋರ್ಟ್ ನಿರ್ದೇಶನಕ್ಕೆ ಒಳಪಟ್ಟಿರುತ್ತವೆ. ಅರ್ಜಿದಾರರ ಜಮೀನುಗಳನ್ನು ತಕ್ಷಣ ವಶಕ್ಕೆ ಪಡೆಯಲು ಪ್ರಾಧಿಕಾರಕ್ಕೆ ಅವಕಾಶವಿಲ್ಲ. ಆದರೆ, ಜಮೀನಿನ ಮೌಲ್ಯದ ಜೊತೆಗೆ ಮರ, ಬೆಳೆ, ಬಾವಿ, ಕಟ್ಟಡ ಮತ್ತು ಇತರ ಆಸ್ತಿಗಳಿಗೂ ಪರಿಹಾರ ನೀಡುವಂತೆ, ಅನ್ವಯವಾಗುವ ಭೂಸ್ವಾಧೀನ ಕಾನೂನಿನ ಅಡಿಯಲ್ಲೇ ಪರಿಹಾರ ಅವಾರ್ಡ್ ಸಿದ್ಧಪಡಿಸಿ ಹೈಕೋರ್ಟ್ಗೆ ಸಲ್ಲಿಸಲು ಪ್ರಾಧಿಕಾರಕ್ಕೆ ಸೂಚಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

