ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಬೀದರ್ ತಾಲ್ಲೂಕಿನ ರಂಜೋಳಖೇಣಿ ಸರ್ಕಾರಿ ಶಾಲೆಯ ಮಕ್ಕಳಿಗೆ ಹೊಸ ವರ್ಷದ ಅಂಗವಾಗಿ ಶಿಕ್ಷಕರು ವಿಶೇಷ ಬಜ್ಜಿ ಕಟಕ್ ರೊಟ್ಟಿ ಊಟದ ವ್ಯವಸ್ಥೆ ಮಾಡಿದರು. ಬೀದರ್‌ನ ಈ ಸಾಂಪ್ರದಾಯಿಕ ಊಟವನ್ನು ಸವಿದು ಮಕ್ಕಳು ಅತೀವ ಸಂತಸಗೊಂಡರು. ವಿವಿಧ ಬಗೆಯ ತರಕಾರಿಗಳಿಂದ ತಯಾರಿಸಿದ ಬಜ್ಜಿ ಮತ್ತು ಕಟಕ್ ರೊಟ್ಟಿ ಮಕ್ಕಳ ಪಾಲಿಗೆ ಹೊಸ ವರ್ಷದ ಸಿಹಿ ಉಡುಗೊರೆಯಾಯಿತು.
ಬೀದರ್, ಜನವರಿ 02: ಹೊಸ ವರ್ಷ ಹಿನ್ನೆಲೆ ಬೀದರ್ ತಾಲ್ಲೂಕಿನ ರಂಜೋಳಖೇಣಿ ಗ್ರಾಮದ ಸರ್ಕಾರ ಶಾಲಾ ಮಕ್ಕಳು ವಿಶೇಷ ಬಜ್ಜಿ ಮತ್ತು ಕಟಕ್ ರೊಟ್ಟಿ ಊಟ ಸವಿದರು. ಮುಖ್ಯೋಪಾಧ್ಯಾಯ ಮಂಜುನಾಥ್, ಶಿಕ್ಷಕರಾದ ಚಂದ್ರಕಾಂತ್ ಹಿಂದೊಡ್ಡಿ, ವಿಷ್ಣು ಕಾಂತ್ ಠಾಕೂರ್ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡಿದ್ದರು. ಕಾರಹುಣ್ಣಿಮೆಯ ದಿನ ರೈತರು ಹೊಲಕ್ಕೆ ಹೋಗಿ ಭೂತಾಯಿಗೆ ಪೂಜೆ ಮಾಡಿ ಬಜ್ಜಿ ಊಟ ಸವಿಯುವುದು ಇಲ್ಲಿನ ವಾಡಿಕೆ. ಹೀಗಾಗಿ ಈ ಹೊಸ ವರ್ಷದಂದು ಹೊಸತನದಿಂದ ಕೂಡಿರಲೆಂದು ಬಜ್ಜಿ ಊಟದ ವ್ಯವಸ್ಥೆ ಮಾಡಲಾಗಿದೆ. ಅವರೆಕಾಯಿ, ಕಡಲೆ, ತೊಗರೆ, ಶೇಂಗಾ ಹೀಗೆ ವಿವಿಧ ಬಗೆಯ ತರಕಾರಿ ಸೇರಿಸಿ ಬಜ್ಜಿ ತಯಾರಿಸಲಾಗಿದ್ದು, ಮಕ್ಕಳು ಚಪ್ಪರಿಸಿ ತಿಂದರು. ಶಿಕ್ಷಕರ ಈ ಕಾರ್ಯಕ್ಕೆ ಮಕ್ಕಳು ಫುಲ್ ಖುಷಿ ಪಟ್ಟರು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.