4ನೇ ದಿನಕ್ಕೆ ಕಾಲಿಟ್ಟ ಬಿಜೆಪಿ ಬಳ್ಳಾರಿ ಚಲೋ, ಮುಸ್ಲಿಮರ ಸಾಥ್; ಸಿಂಧನೂರಿನಲ್ಲಿ ಗೋ ಪೂಜೆ ನೆರವೇರಿಸಿ ವಿಜಯೇಂದ್ರ ಚಾಲನೆ

Edited By:

Updated on: Sep 04, 2026 | 12:17 PM

ರಾಯಚೂರಿನ ಸಿಂಧನೂರಿನಲ್ಲಿ ಬಿಜೆಪಿಯ ‘ಬಳ್ಳಾರಿ ಚಲೋ’ ಪಾದಯಾತ್ರೆಯ ನಾಲ್ಕನೇ ದಿನದ ಯಾತ್ರೆಗೆ ಪಕ್ಷದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಶುಕ್ರವಾರ ಚಾಲನೆ ನೀಡಿದರು. ಇದೇ ವೇಳೆ, ಮುಸ್ಲಿಂ ಮೋರ್ಚಾದ ಮುಖಂಡರು, ಸದಸ್ಯರೂ ಸಾಥ್ ನೀಡಿದರು. ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆ ಗೋಪೂಜೆ ನೆರವೇರಿಸುವ ಮೂಲಕ ಯಾತ್ರೆಗೆ ಚಾಲನೆ ನೀಡಲಾಯಿತು.

ರಾಯಚೂರು, ಸೆಪ್ಟೆಂಬರ್ 4: ಬಿಜೆಪಿ ಹಮ್ಮಿಕೊಂಡಿರುವ ‘ಬಳ್ಳಾರಿ ಚಲೋ’ ಪಾದಯಾತ್ರೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ರಾಯಚೂರು ಜಿಲ್ಲೆಯ ಸಿಂಧನೂರಿನಿಂದ ಪಾದಯಾತ್ರೆ ಆರಂಭವಾಗಿದೆ. ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಗೋ ಪೂಜೆ ನೆರವೇರಿಸಿ ಪಾದಯಾತ್ರೆಗೆ ಚಾಲನೆ ನೀಡಿದರು. ಸಿಂಧನೂರಿನಲ್ಲಿ ನಡೆದ ಪಾದಯಾತ್ರೆ ಆರಂಭ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ. ಶ್ರೀರಾಮುಲು ಸೇರಿದಂತೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು. ಇದೇ ವೇಳೆ ಬಿಜೆಪಿ ಮುಸ್ಲಿಂ ಮೋರ್ಚಾ ಕಾರ್ಯಕರ್ತರೂ ಪಾದಯಾತ್ರೆಗೆ ಸಾಥ್ ನೀಡಿದರು. ಇಂದು ಬಿಜೆಪಿ ಪಾದಯಾತ್ರೆ ಕೊಪ್ಪಳ ಜಿಲ್ಲೆಗೆ ಪ್ರವೇಶಿಸಲಿದೆ.

ವಿಶೇಷ ಚೇತನರು, ವೃದ್ಧರಿಂದ ಅಹವಾಲು ಸ್ವೀಕರಿಸಿದ ವಿಜಯೇಂದ್ರ

ಗೋ ಪೂಜೆ ಬಳಿಕ ಬಿವೈ ವಿಜಯೇಂದ್ರ ಹಾಗೂ ಶ್ರೀರಾಮುಲು ಅವರು ವಿಶೇಷ ಚೇತನರು ಮತ್ತು ವೃದ್ಧರ ಅಹವಾಲುಗಳನ್ನು ಸ್ವೀಕರಿಸಿದರು. ಈ ವೇಳೆ ವಿಶೇಷ ಚೇತನ ವೃದ್ಧೆಯೊಬ್ಬರ ಕಾಲು ಸ್ಪರ್ಶಿಸಿ ವಿಜಯೇಂದ್ರ ನಮಸ್ಕರಿಸಿದರು. ಪಿಂಚಣಿ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಫಲಾನುಭವಿಗಳು ಬಿಜೆಪಿ ನಾಯಕರಿಗೆ ಅಹವಾಲು ಸಲ್ಲಿಸಿದರು. ನಾಲ್ಕು ತಿಂಗಳಿನಿಂದ ಪಿಂಚಣಿ ಬಂದಿಲ್ಲ ಎಂದು ಕೆಲ ಫಲಾನುಭವಿಗಳು ವಿಜಯೇಂದ್ರ ಅವರ ಗಮನಕ್ಕೆ ತಂದರು.

ಕಾಂಗ್ರೆಸ್ ಸರ್ಕಾರ ಬಡವರಿಂದ ದೂರ: ವಿಜಯೇಂದ್ರ ಟೀಕೆ

ಬಳಿಕ ಮಾತನಾಡಿದ ಬಿವೈ ವಿಜಯೇಂದ್ರ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಡವರಿಂದ ದೂರ ಸಾಗುತ್ತಿದೆ ಎಂದು ಆರೋಪಿಸಿದರು. ರಾಜ್ಯದಲ್ಲಿರುವ ಬಡವರು ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ. ವಿಕಲಚೇತನರಿಗೆ ಮಾಸಾಶನ ಹಾಗೂ ವೃದ್ಧಾಪ್ಯ ವೇತನವನ್ನೂ ಸರಿಯಾಗಿ ನೀಡುತ್ತಿಲ್ಲ ಎಂದು ವಿಜಯೇಂದ್ರ ದೂರಿದರು. ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿಗಳ ಭ್ರಮೆಯಲ್ಲೇ ತೇಲುತ್ತಿದೆ. ಆದರೆ ವಾಸ್ತವಿಕ ಸತ್ಯದಿಂದ ಸರ್ಕಾರ ದೂರವಿದೆ ಎಂದು ಟೀಕಿಸಿದರು. ಬಿಜೆಪಿ ಬಳ್ಳಾರಿ ಚಲೋ ಪಾದಯಾತ್ರೆ ಇಂದು ಕೊಪ್ಪಳ ಜಿಲ್ಲೆಗೆ ಪ್ರವೇಶಿಸಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಕಿರಣ್​ ಹನಿಯಡ್ಕ

TV9 ಕನ್ನಡದಲ್ಲಿ ಹಿರಿಯ ರಾಜಕೀಯ ವರದಿಗಾರ. ಮಂಗಳೂರು ವಿಶ್ವವಿದ್ಯಾನಿಲಯದಿಂದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ. 17 ವರ್ಷಗಳಿಂದ ಮಾಧ್ಯಮ ವೃತ್ತಿ. ಮುದ್ರಣ ಮಾಧ್ಯಮದಲ್ಲಿ ಸಬ್ ಎಡಿಟರ್, ವಿದ್ಯುನ್ಮಾನ ಮಾಧ್ಯಮದಲ್ಲಿ ನ್ಯೂಸ್ ಡೆಸ್ಕ್ ಮತ್ತು ರಾಜಕೀಯ ವರದಿಗಾರಿಕೆಯಲ್ಲಿ ಅನುಭವ.

Read More